ಸಾಗರ – ಸೊರಬ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ನಿವಾಸಿಗಳು ಆಡಳಿತಕ್ಕೆ ಸಹಕಾರ ನೀಡಬೇಕು. ನ್ಯಾಯಾಲಯ ಇನ್ನಿತರೆ ಮೊರೆ ಹೋದರೆ ರಸ್ತೆ ನಿರ್ಮಾಣ ವಿಳಂಬವಾಗುವ ಜೊತೆಗೆ ನಿಮಗೂ ತೊಂದರೆ ಆಗುತ್ತದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಕೆ.ಬಿ. ತಿಳಿಸಿದರು.
ನಗರಸಭೆ ರಂಗಮಂದಿರದಲ್ಲಿ ಶುಕ್ರವಾರ ನಗರಸಭೆ ವತಿಯಿಂದ ಸಾಗರ-ಹಾವೇರಿ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಕರೆಯಲಾಗಿದ್ದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಜಿಲ್ಲಾಧಿಕಾರಿಗಳು ಪ್ರತಿ ಚದರಡಿಗೆ ರೂ. 4737ರೂಪಾಯಿ ಭೂಸ್ವಾಧೀನ ಪ್ರಕ್ರಿಯೆಗೆ ನಿಗಧಿ ಮಾಡಿದ್ದಾರೆ. ಇದು ಅತಿಹೆಚ್ಚಿನ ದರವಾಗಿದ್ದು, ಬೇರೆಬೇರೆ ಭೂಸ್ವಾಧೀನ ಪ್ರಕ್ರಿಯೆಯಲ್ಲೂ ಇಷ್ಟೊಂದು ಪರಿಹಾರ ಕೊಟ್ಟಿಲ್ಲ ಎಂದು ಹೇಳಿದರು.
ಹತ್ತು ಜನರಿಗೆ ತೊಂದರೆ ಸಹಜ
ಶಾಸಕ ಎಚ್.ಹಾಲಪ್ಪ ಹರತಾಳು ಮಾತನಾಡಿ, ಊರಿನ ಹಿತದೃಷ್ಟಿಯಿಂದ ಸೊರಬ ರಸ್ತೆ ಅಗಲೀಕರಣ ಅತ್ಯಾವಶ್ಯಕ. ನೂರಾರು ಜನರಿಗೆ ಸಹಾಯವಾಗುತ್ತದೆ ಎಂದಾಗ ಹತ್ತು ಜನರಿಗೆ ತೊಂದರೆ ಆಗುವುದು ಸಹಜ. ೬೫ ಒಳಗೆ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ. ಈಗಾಗಲೆ ಮುಖ್ಯಮಂತ್ರಿಗಳು 30 ಕೋಟಿ ರೂ. ಹಣವನ್ನು ಸಹ ಮಂಜೂರು ಮಾಡಿದ್ದಾರೆ. ಕಾನೂನಿನ ಪ್ರಕಾರ ಹೋದರೆ ರಸ್ತೆ ವಿಳಂಬವಾಗುವ ಜೊತೆಗೆ ನೀವು ನ್ಯಾಯಾಲಯಕ್ಕೆ ಅಲೆಯುತ್ತಾ ಇರಬೇಕಾಗುತ್ತದೆ. ಅಂತಹ ಪರಿಸ್ಥಿತಿ ನಿರ್ಮಾಣ ಮಾಡುವುದು ಬೇಡ. ಸರ್ಕಾರದ ಜೊತೆ ಸಹಕಾರ ನೀಡಿದರೆ ನಿಮ್ಮ ಭೂಮಿಗೆ ಒಳ್ಳೆಯ ಬೆಲೆ ಬರುತ್ತದೆ ಎಂದು ಹೇಳಿದರು.
ಈಗಾಗಲೆ ಬಿ.ಎಚ್.ರಸ್ತೆಯನ್ನು ಸುಮಾರು 77 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ನಿರ್ಮಾಣ ಮಾಡಲಾಗುತ್ತಿದೆ. ಮಾರ್ಕೇಟ್ ರಸ್ತೆ ಅಗಲೀಕರಣ ಮಾಡದೆ ಹೋದಲ್ಲಿ ಆ ಭಾಗದ ವ್ಯಾಪಾರ ವಹಿವಾಟು ಕಳೆಗುಂದುವ ಜೊತೆಗೆ ಭೂಮಿ ಬೆಲೆ ಕಳೆದುಕೊಳ್ಳುತ್ತದೆ. ರಸ್ತೆ ಅಗಲೀಕರಣಕ್ಕೆ ನೀವು ಭೂಮಿ ಬಿಟ್ಟುಕೊಟ್ಟರೆ ತಾಲ್ಲೂಕಿನ 2 ಲಕ್ಷ ಜನರು ನಿಮ್ಮನ್ನು ಗೌರವದಿಂದ ನೋಡುತ್ತಾರೆ. ದಯಮಾಡಿ ಅಗಲೀಕರಣಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ತಕ್ಷಣ ಪರಿಹಾರ ನೀಡಬೇಕು
ಸಭೆಯಲ್ಲಿ ನಿವಾಸಿಗಳ ಪರವಾಗಿ ಮಾತನಾಡಿದ ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ಶೇ. 90ರಷ್ಟು ಜನರು ಅಗಲೀಕರಣಕ್ಕೆ ಒಪ್ಪಿಗೆ ನೀಡಿದ್ದಾರೆ. ಆಡಳಿತವು ಭೂಸ್ವಾಧೀನ ನಂತರ ತಕ್ಷಣ ಪರಿಹಾರ ನೀಡಬೇಕು. ಭೂಮಿ ಕಳೆದುಕೊಳ್ಳುವವರಿಗೆ ಅತಿಹೆಚ್ಚು ಪರಿಹಾರ ಸಿಗಬೇಕು. ಉಳಿದ ಜಾಗಕ್ಕೆ ತಕ್ಷಣ ಖಾತೆ ಮಾಡಿಕೊಡಬೇಕು. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಎಲ್ಲ ರೀತಿಯ ಸವಲತ್ತು ಭೂಮಿ ಕಳೆದುಕೊಳ್ಳುವ ನಿವಾಸಿಗಳಿಗೆ ನೀಡಬೇಕು ಎಂದು ಒತ್ತಾಯಿಸಿದರೆ, ನಗರಸಭೆ ಸದಸ್ಯೆ ಎನ್.ಲಲಿತಮ್ಮ, ಕಳೆದ 20 ವರ್ಷದಿಂದ ರಸ್ತೆ ಅಗಲೀಕರಣ ಕುರಿತು ಚರ್ಚೆ ನಡೆಯುತ್ತಿದೆ. ಅದಕ್ಕೆ ತಾರ್ಕಿಕ ಅಂತ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು. ಜೊತೆಗೆ ರಸ್ತೆಗಾಗಿ ಭೂಮಿ ಕಳೆದುಕೊಳ್ಳುವ ನಿವಾಸಿಗಳಿಗೆ ಅತಿಹೆಚ್ಚು ಪರಿಹಾರ ಕೊಡಬೇಕು. ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಹಿಂದೆ ಪರಿಹಾರ ದರ ನಿಗಧಿ ಮಾಡುವಾಗ ಎಲ್ಲರೂ ಸಭೆಯಲ್ಲಿ ಹಾಜರಿರಲಿಲ್ಲ. ಎಲ್ಲರ ಅಭಿಪ್ರಾಯ ಪಡೆದು ಪರಿಹಾರ ನಿಗಧಿ ಮಾಡಿ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮಧುಸೂದನ್, ಚಂದ್ರಕಾಂತ ಜಿಂಗಾಡೆ, ಡಾ. ಎಚ್.ಎಂ.ಶಿವಕುಮಾರ್, ದಳವಾಯಿ ದಾನಪ್ಪ, ನಾಗೇಶ್ ಬೇಂಗ್ರೆ, ಮುನ್ನ ಇನ್ನಿತರರು ಮಾತನಾಡಿದರು.
ಉಪವಿಭಾಗಾಧಿಕಾರಿ ಡಾ. ನಾಗರಾಜ್ ಎಲ್., ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ಡಿವೈಎಸ್‌ಪಿ ವಿನಾಯಕ ಎನ್. ಶೆಟಗೇರಿ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ತುಕಾರಾಮ್ ಹಾಜರಿದ್ದರು.