Malenadu Mitra
ರಾಜ್ಯ ಶಿವಮೊಗ್ಗ

ಜಿಪಂ,ತಾಪಂ ಕರಡು ಮೀಸಲು ಪಟ್ಟಿ, ಮರೀಚಿಕೆಯಾದ ಸಾಮಾಜಿಕ ನ್ಯಾಯ

ಶಿವಮೊಗ್ಗ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಯ ಕರಡು ಅಧಿಸೂಚನೆಯನ್ನು ರಾಜ್ಯ ಚುನಾವಣೆ ಆಯೋಗ ಪ್ರಕಟಮಾಡಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಕರಡುಪಟ್ಟಿಗೆ ಜುಲೈ 8 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಪ್ರಕಟಿತ ಮೀಸಲು ಪಟ್ಟಿಯಲ್ಲಿ ಜಿಲ್ಲಾ ಪಂಚಾಯಿತಿ ಪ್ರತಿನಿಧಿಸುವ ಬಹುತೇಕ ಸದಸ್ಯರು ಹಾಲಿ ಪ್ರತಿನಿಧಿಸುವ ಕ್ಷೇತ್ರವನ್ನು ಕಳೆದುಕೊಳ್ಳಲಿದ್ದಾರೆ. ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಹಿರಿಯ ಸದಸ್ಯರಾದ ಕಲಗೋಡು ರತ್ನಾಕರ್, ಕೆ.ಇ.ಕಾಂತೇಶ್, ಸುರೇಶ್ ಸ್ವಾಮಿರಾವ್, ರಾಜಶೇಖರ್ ಗಾಳಿಪುರ, ಸಿಂಗನಮನೆ ಯೋಗಿಶ್‍ಗೌಡ, ನರಸಿಂಗನಾಯ್ಕ್, ಬೀಮನೇರಿ ಶಿವಪ್ಪ, ಅನಿತಾಕುಮಾರಿ ಸೇರಿದಂತೆ ಅನೇಕರು ತಮ್ಮ ಕ್ಷೇತ್ರವನ್ನು ಕಳೆದುಕೊಂಡಿದ್ದಾರೆ.

ಮೀಸಲು ಪಟ್ಟಿಯಲ್ಲಿ ಕಣ್ಮರೆಯಾದ ಸಾಮಾಜಿಕ ನ್ಯಾಯ

ಜಿಲ್ಲಾ ಪಂಚಾಯಿತಿಯ ಒಟ್ಟು 35 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಸಾಮಾನ್ಯವರ್ಗಕ್ಕೆ ಮೀಸಲಿಟ್ಟಿದ್ದು, ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳಿಗೆ ಜನ ಸಂಖ್ಯೆಗನುಗುಣವಾದ ಅವಕಾಶ ಸಿಗಲಿಲ್ಲ ಎಂಬ ಆರೋಪ ಕೇಳಿಬಂದಿದೆ. 18 ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ತಲಾ 9 ಕ್ಷೇತ್ರಗಳನ್ನು ಆ ವರ್ಗದ ಮಹಿಳೆ ಮತ್ತು ಪುರುಷರಿಗೆ ಮೀಸಲಿಡಲಾಗಿದೆ. ಸಾಮಾನ್ಯ ಕ್ಷೇತ್ರಗಳಿಗೆ ಎಲ್ಲಾ ಜಾತಿಯವರು ಸ್ಪರ್ಧೆ ಮಾಡಲು ಅವಕಾಶ ಇದೆಯಾದರೂ ಪಕ್ಷ ರಾಜಕಾರಣದ ವ್ಯವಸ್ಥೆಯಲ್ಲಿ ಅದು ಆಗೇ ಬಿಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನು ಬಿಸಿಎಂ (ಎ)ಪುರುಷರಿಗೆ 3 ಹಾಗೂ ಮಹಿಳೆಯರಿಗೆ 1 ಕ್ಷೇತ್ರ ಮೀಸಲಿಡಲಾಗಿದೆ. ಅದೇ ರೀತಿ ಬಿಸಿಎಂ (ಬಿ)ವರ್ಗದ 1 ಪುರುಷ ಹಾಗೂ ಮೂವರು ಮಹಿಳೆಯರಿಗೆ ಆಯ್ಕೆಯಾಗುವ ಅವಕಾಶ ನೀಡಲಾಗಿದೆ. ಪರಿಶಿಷ್ಟ ಜಾತಿ ಪುರುಷ 3 ಹಾಗೂ ಮಹಿಳೆಗೆ 4 ಕ್ಷೇತ್ರಗಳನ್ನು ಮೀಸಲಿಡಲಾಗಿದೆ. ಪರಿಶಿಷ್ಟ ಪಂಗಡದ ಒಂದು ಮಹಿಳೆ ಹಾಗೂ ಒಂದು ಪುರುಷ ಅಭ್ಯರ್ಥಿಗಳಿಗೆ ಕ್ಷೇತ್ರ ಮೀಸಲಿಡಲಾಗಿದೆ.
ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಟಜಾತಿಗೆ ಒಂದೂ ಸ್ಥಾನವಿಲ್ಲ
ಶಿವಮೊಗ್ಗ ಗ್ರಾಮಾಂತರ ವಿಧಾನ ಸಭೆ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು, ಈ ಕ್ಷೇತ್ರ ವ್ಯಾಪ್ತಿಯ 7 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಒಂದೂ ಕ್ಷೇತ್ರವನ್ನು ಪರಿಶಿಷ್ಟಜಾತಿಗೆ ಮೀಸಲಿಡದೇ ಇರುವುದು ಇಲ್ಲಿನ ರಾಜಕೀಯ ಪ್ರಭಾವಳಿಗಳನ್ನು ಪ್ರಶ್ನೆ ಮಾಡುವಂತಿದೆ. ಸಮಾಜವಾದಿ ನೆಲ ಶಿವಮೊಗ್ಗದಲ್ಲಿಯೇ ಮೀಸಲು ಪಟ್ಟಿಯಲ್ಲಿ ತಾರತಮ್ಯ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪಂಚಾಯತ್ ರಾಜ್ ಸಚಿವರ ಜಿಲ್ಲೆಯಲ್ಲಿ

ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ವ್ಯವಸ್ಥೆಗಳು ಬರುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ. ಆ ಖಾತೆಯ ಸಚಿವ ಕೆ.ಎಸ್.ಈಶ್ವರಪ್ಪ ಅವರ ಜಿಲ್ಲೆಯಲ್ಲಿಯೇ ಮೀಸಲು ಹಂಚಿಕೆಯಲ್ಲಿ ಎಲ್ಲಾ ವರ್ಗದವರಿಗೆ ನ್ಯಾಯ ಸಿಕ್ಕಿಲ್ಲ ಎಂಬ ಆರೋಪವನ್ನು ಪ್ರತಿಪಕ್ಷದವರು ಮಾಡುತ್ತಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಹಾಗೂ ಹಾಲಿ ಸದಸ್ಯ ಕೆ.ಇ.ಕಾಂತೇಶ್ ಅವರು ಪ್ರತಿನಿಧಿಸುತ್ತಿದ್ದ ಹೊಳಲೂರು ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಪಕ್ಕದ ಹರಮಘಟ್ಟ ಕ್ಷೇತ್ರವನ್ನು ಬಿಸಿಎಂ (ಎ)ಗೆ ಮೀಸಲಿಟ್ಟಿದ್ದು ಒಂದು ವೇಳೆ ಕಾಂತೇಶ್ ಸ್ಪರ್ಧಿಸುವುದಾದರೆ ಅವರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಲಾಗಿದೆ. ಆದರೆ ಅವರು ರಾಣೆಬೆನ್ನೂರು ವಿಧಾನ ಸಭೆ ಮತ್ತು ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಕಾರಣ ಜಿಲ್ಲಾ ಪಂಚಾಯಿತಿಗೆ ಸ್ಪರ್ಧೆ ಮಾಡಲಾರರು ಎಂದೇ ಹೇಳಲಾಗುತ್ತಿದೆ.

ಪ್ರಮುಖರಿಗೆ ತೊಂದರೆ

ಶಿವಮೊಗ್ಗ ಜಿಲ್ಲೆಯ ಎರಡನೇ ಹಂತದ ರಾಜಕೀಯ ನಾಯಕರುಗಳನ್ನು ನೇಪಥ್ಯಕ್ಕೆ ಸರಿಸುವ ಹುನ್ನಾರ ಮೀಸಲು ನಿಗದಿಯಲ್ಲಿದೆ ಎಂಬ ಆಪಾದನೆ ಕೇಳಿಬಂದಿದ್ದು, ಹಲವರು ಈ ಸಂಬಂಧ ಆಯೋಗಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಹಿಂದುಳಿದ ವರ್ಗಗಳೇ ಹೆಚ್ಚಿರುವ ಸಾಗರ ಹಾಗೂ ಸೊರಬ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಪುರುಷ ಅಭ್ಯರ್ಥಿಗಳಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಈ ಕಾರಣದಿಂದ ರಾಜಶೇಖರ್ ಗಾಳಿಪುರ, ಸುರೇಶ್ ಸ್ವಾಮಿರಾವ್, ಕಲಗೋಡು ರತ್ನಾಕರ್ ಅವರಿಗೆ ಈಗಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶ ಇಲ್ಲವಾಗಿದೆ.

ರೊಟೇಷನ್ ಆಧಾರದ ಮೇಲೆ ಮೀಸಲು ಬದಲಾಗುತ್ತದೆಯಾದರೂ, ಯುವ ಮುಖಂಡರ ಹಿತ ಕಾಯುವ ಉದ್ದೇಶವಿದ್ದರೆ ಅಕ್ಕಪಕ್ಕದಲ್ಲೇ ಅವಕಾಶ ಮಾಡಿಕೊಡಬಹುದಿತ್ತು. ಆದರೆ ಈ ಪ್ರಯತ್ನ ನಡೆದಿಲ್ಲ ಎನ್ನಲಾಗಿದೆ. ಭದ್ರಾವತಿ ತಾಲೂಕು ಹಿರಿಯೂರು ಕ್ಷೇತ್ರದ ಎಸ್.ಕುಮಾರ್ ಅವರಿಗೆ ಈ ಬಾರಿ ಕ್ಷೇತ್ರ ಕೈತಪ್ಪಿದೆ. ಜಿ.ಪಿ.ಯೋಗಿಶ್ ಮಾತ್ರವಲ್ಲದೆ ಎರಡನೇ ಹಂತದ ಅನೇಕ ಮುಖಂಡರು ಚುನಾವಣೆಗೆ ಸ್ಪರ್ಧಿಸಲು ಈಗಿನ ಮೀಸಲಾತಿಯಲ್ಲಿ ಸಾಧ್ಯವಾಗುವುದಿಲ್ಲ.

ಕುಂಸಿಗೆ ಆಯನೂರು ಕುಟುಂಬ ?

ಕುಂಸಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಬಿಸಿಎಂ (ಬಿ)ಮಹಿಳೆಗೆ ಮೀಸಲಿದ್ದು, ಆಯನೂರು ಮಂಜುನಾಥ್ ಅವರ ಕುಟುಂಬ ಸದಸ್ಯರೊಬ್ಬರು ಸ್ಪರ್ಧೆ ಮಾಡುವ ಉದ್ದೇಶ ಮೀಸಲು ನಿಗದಿಯಲ್ಲಿಯೂ ಇದೆ ಎನ್ನಲಾಗಿದೆ. ಕಳೆದ ಅವಧಿಯಲ್ಲಿಯೇ ಆಯನೂರು ಮಂಜುನಾಥ್ ಪತ್ನಿಯನ್ನು ಕಣಕ್ಕಿಳಿಸುವರು ಎಂಬ ಚರ್ಚೆ ನಡೆದಿತ್ತು ಮಾತ್ರವಲ್ಲದೆ, ಆ ಬಗ್ಗೆ ಬೆಂಬಲಿಗರ ಸಭೆಯನ್ನೂ ನಡೆಸಿದ್ದರು. ಆದರೆ ಕೊನೇ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಆದರೆ ಈ ಬಾರಿ ತಮ್ಮದೇ ಸರಕಾರ ಇರುವಾಗ ಮೀಸಲಾತಿಯನ್ನು ತಮ್ಮ ಅನುಕೂಲಕ್ಕೆ ಮಾಡಿಸಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಮೀಸಲು ಸೌಲಭ್ಯ ಪಡೆಯುವಲ್ಲಿ ಆದಾಯದ ಮಿತಿಯ ಷರತ್ತು ಇರುವುದರಿಂದ ಈ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

Ad Widget

Related posts

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಯಡಿಯೂರಪ್ಪ, ಕನಸು ಸಾಕಾರವಾದ ಸಂತೃಪ್ತಿಯಲ್ಲಿ ಜನ ನಾಯಕ

Malenadu Mirror Desk

ಸಮುದಾಯ ಹಂತ ಸಿಬ್ಬಂದಿಗಳಿಗೂ ಸುರಕ್ಷತಾ ಕಿಟ್ಟುಗಳನ್ನು ವಿತರಿಸಲು ಸೂಚನೆ

Malenadu Mirror Desk

ಪರಿಸರ ರಕ್ಷಣೆಗೆ ಕಠಿಣ ಕಾನೂನು ಅಗತ್ಯವಿದೆ: ವಿನಯ್ ಗುರೂಜಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.