ಅಡಕೆ ,ತೆಂಗಿನ ಮರ ಉರುಳಿಸಿ ಲೂಟಿ
ಕಾಡಾನೆ ಹಾವಳಿ ಹಾಸನ, ಚಿಕ್ಕಮಗಳೂರು ಮೂಡಿಗೆರೆಗೆ ಮಾತ್ರ ಸೀಮಿತವಾಗಿಲ್ಲ. ಮೊನ್ನೆ ಬೆಳಗಿನಜಾವ ಶಿವಮೊಗ್ಗ ಸಾಗರ ರಸ್ತೆಯಲ್ಲಿರುವ ಪೆಸೆಟ್ ಕಾಲೇಜಿಗೆ ಕೂಗಳತೆ ದೂರದಲ್ಲಿ ಅಡಕೆ ,ತೆಂಗಿನ ಮರ ಉರುಳಿಸಿದ ಕಾಡಾನೆ ಲೂಟಿ ಮಾಡಿ ಹೋಗಿದೆ.
ಲಕ್ಕಿನಕೊಪ್ಪ, ಉಂಬ್ಳೆಬೈಲು ಬಳಿ ಪದೇಪದೆ ರೈತರ ಹೊಲಗಳಿಗೆ ಬಂದು ಬೆಳೆನಾಶಮಾಡುತ್ತಿರುವ ಕಾಡಾನೆ ಹಿಂಡನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಇದರ ನಡುವೆಯೇ ಪುರದಾಳು ಗ್ರಾಮದಲ್ಲಿ ಕಳೆದ ಕೆಲ ತಿಂಗಳಿಂದ ಮೂರು ಆನೆಗಳಿರುವ ತಂಡದಿಂದ ರೈತರ ಹೊಲಗಳ ಮೇಲೆ ದಾಳಿ ನಡೆಯುತ್ತಿದೆ. ಇದೇ ಕಾಡಾನೆ ಗುಂಪು ಈಗ ಪೆಸೆಟ್ ಕಾಲೇಜಿನ ಹಿಂಭಾಗದ ಕಿಮ್ಮನೆ ಗಾಲ್ಫ್ ಕ್ಲಬ್‍ಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಪರೇಡ್ ನಡೆಸಲಾರಂಭಿಸಿವೆ,
ಈ ಹಿಂದೆ ಬಂದು ಹಾಗೇ ಟೂರ್ ಮಾಡಿಕೊಂಡು ಹೋಗಿದ್ದ ಈ ಆನೆಗಳು ಈಗ ಹೊಲಗಳಿಗೆ ನುಗ್ಗುತ್ತಿದ್ದು, ಸ್ಥಳೀಯ ರೈತರು ಆತಂಕಗೊಂಡಿದ್ದಾರೆ. ಗುರುವಾರ ಬೆಳಗಿನ ಜಾವ ಕಿಮ್ಮನೆ ಕ್ಲಬ್‍ಗೆ ಹೊಂದಿಕೊಂಡಿರುವ ಶಿವಮೊಗ್ಗದ ವಿಜಯ ಏಜೆನ್ಸೀಸ್ ಅವರಿಗೆ ಸೇರಿದ ಜಮೀನಿಗೆ ದಾಳಿ ಇಟ್ಟಿದೆ. ಅಲ್ಲಿನ ತೆಂಗಿನ ಮರ ಬೀಳಿಸಿದೆ. ಶುಕ್ರವಾರ ರಾತ್ರಿ ಮತ್ತೆ ಪುರದಾಳು ಗ್ರಾಮದಲ್ಲಿ ಆನೆ ದಾಳಿ ಮಾಡಿವೆ.
ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ
ರೈತ ಸಮುದಾಯ ಮೊದಲೇ ಸಂಕಷ್ಟದಲ್ಲಿರುವಾಗ ಅವರ ಬೆಳೆಯನ್ನು ಕಾಡಾನೆಯಿಂದ ರಕ್ಷಿಸಿಕೊಳ್ಳುವುದೇ ದುಸ್ತರವಾಗಿದೆ. ಪುರದಾಳು,ಹೊಸೂರು ಸುತ್ತಮುತ್ತ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಜನವಸತಿ ಪ್ರದೇಶದತ್ತ ಈ ಆನೆಗಳು ಬರುವುದರಿಂದ ಯಾವುದೇ ಜೀವಹಾನಿಯಾಗುವ ಮುನ್ನ ಅರಣ್ಯ ಇಲಾಖೆ ಗಮನ ಹರಿಸಬೇಕಿದೆ. ಹೊಸೂರು ಸಮೀಪ ಆರಣ್ಯ ಇಲಾಖೆ ವಾಚರ್ ಒಬ್ಬರಿಗೆ ಹಾಡ ಹಗಲೇ ಆನೆ ಎದುರಾಗಿದ್ದು, ಅವರು ಬೈಕ್ ಬಿಟ್ಟು ಓಡಿ ಬಂದ ಘಟನೆ ಕಳೆದ ವಾರ ನಡೆದಿದೆ.