ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಜಿಲ್ಲೆಯ ಸರ್ಕಾರಿ ನೌಕರರ ಭವನವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಜುಲೈ 7ರಂದು ಬೆಳಿಗ್ಗೆ 9.30 ಕ್ಕೆ ನಗರದ ಕೆ.ಇ.ಬಿ. ವೃತ್ತದಲ್ಲಿರುವ ಹಳೆಯ ನೌಕರರ ಭವನದ ಆವರಣದಲ್ಲಿ ಭೂಮಿ ಪೂಜೆ ಏರ್ಪಡಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನೌಕರರ ಹಿತ, ಸುಖ ಕಾಯುವ ನಿಟ್ಟಿನಲ್ಲಿ ಸಕ್ರಿಯವಾಗಿರುವ ನೌಕರರ ಸಂಘವು ನೌಕರರ ಮತ್ತು ಅವರ ಕುಟುಂಬದ ಅವಲಂಬಿತರಿಗಾಗಿ ನಡೆಯುವ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ವಿವಿದೋದ್ಧೇಶಗಳಿಗೆ ಬಳಕೆಯಾಗುವಂತೆ ಅತ್ಯಾಧುನಿಕ ಮಾದರಿಯಲ್ಲಿ ಸುಮಾರು 22ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಭವನವನ್ನು ನಿರ್ಮಿಸಲಾಗುವುದು ಎಂದರು.
ಉದ್ದೇಶಿತ ಈ ಭವನದ ಭೂಮಿಪೂಜೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹಾಗೂ ಗ್ರಾಮೀಣಾಭಿವೃಧ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಉಪಸ್ಥಿತಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ನೆರವೇರಿಸುವರು. ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಧ್ಯಕ್ಷತೆ ವಹಿಸುವರು. ರಾಜ್ಯ ನೌಕರರ ಸಂಘದ ಮಹಾಪ್ರಧಾನ ಕಾರ್ಯದರ್ಶಿ ಜಗದೀಶಗೌಡಪ್ಪ ಪಾಟೀಲ, ರಾಜ್ಯ ಕೋಶಾಧ್ಯಕ್ಷ ಆರ್.ಶ್ರೀನಿವಾಸ್ ಅವರು ಉಪಸ್ಥಿತರಿರುವರು. ಇವರೊಂದಿಗೆ ಜಿಲ್ಲೆಯ ಎಲ್ಲಾ ಶಾಸಕರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ನಿಗಮ-ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿರುವರು ಎಂದರು.
ಲಸಿಕಾ ಅಭಿಯಾನ
ವಿಶ್ವವ್ಯಾಪಿಯಾಗಿರುವ ಕೊರೋನ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿವಿಧ ಶ್ರೇಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಅಧಿಕಾರಿ, ನೌಕರರು ಹಾಗೂ ಸಿಬ್ಬಂಧಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಲಸಿಕೆಯನ್ನು ನೀಡಲು ಉದ್ದೇಶಿಸಲಾಗಿದೆ ಎಂದರು.
ಎಂ.ಪಿ.ಎಲ್. ಸ್ಪೋರ್ಟ್ಸ್ ಫೌಂಡೇಶನ್, ಕೋವಿಡ್ ಸಹಯೋಗ್, ಪಿ.ಇ.ಎಸ್. ಟ್ರಸ್ಟ್, ಸ್ಪರ್ಶ ಹಾಸ್ಪಿಟಲ್, ಯುನೈಟೆಡ್‌ವೇ ಬೆಂಗಳೂರು, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಹಯೋಗದೊಂದಿಗೆ ಜುಲೈ 7ರಂದು ಬೆಳಿಗ್ಗೆ 10ಗಂಟೆಗೆ ನೌಕರರ ಸಂಘದ ಸಭಾಂಗಣದಲ್ಲಿ ನಡೆಯಲಿರುವ ಈ ಲಸಿಕಾ ಅಭಿಯಾನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರು ಚಾಲನೆ ನೀಡಲಿರುವರು.
ಈ ಲಸಿಕಾ ಅಭಿಯಾನದಲ್ಲಿ ಈವರೆಗೆ ಲಸಿಕೆ ಪಡೆಯದಿರುವ 18+ ಮೇಲ್ಪಟ್ಟ ಎಲ್ಲಾ ವಯೋಮಾನದ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತರು ಉಪಸ್ಥಿತರಿರುವರು.