ಸಾಗರತಾಲ್ಲೂಕಿಗೆ ಅಗತ್ಯವಾದ ಕೋವಿಡ್ ಲಸಿಕೆ ಪೂರೈಕೆ ಮಾಡಬೇಕು ಮತ್ತು ಲಸಿಕಾ ಕೇಂದ್ರದಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಶುಕ್ರವಾರ ಸಾಗರ ಕ್ಷೇತ್ರ ಅಭಿವೃದ್ದಿ ಹೋರಾಟ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಪ್ರಮುಖ ತೀ.ನ.ಶ್ರೀನಿವಾಸ್, ಕೊರೊನಾದಿಂದ ತಾಲ್ಲೂಕಿನಲ್ಲಿ 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 5408 ಜನರು ಲಾಕ್‍ಡೌನ್‍ನಿಂದ ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. ಕೊರೋನಾ ಭೀತಿ ಜನರಿಂದ ಇನ್ನೂ ದೂರವಾಗಿಲ್ಲ. ಕೊರೋನಾ ನಿವಾರಣೆಗೆ ಲಸಿಕೆ ರಾಮಬಾಣ ಎನ್ನಲಾಗುತ್ತಿದ್ದು, ಆದರೆ ಜನರಿಗೆ ಲಸಿಕೆ ಸಿಗುತ್ತಿಲ್ಲ. ಇದರಿಂದ ಜನರು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ವ್ಯಾಕ್ತಿನ್ ಕೇಂದ್ರಕ್ಕೆ ಲಸಿಕೆ ಹಾಕಿಸಿಕೊಳ್ಳಲು ಹೋದರೆ ಇಲ್ಲ ಎನ್ನುವ ಉತ್ತರ ಮಾಮೂಲಿಯಾಗಿದೆ. ತಕ್ಷಣ ಕೋವಿಡ್ ಲಸಿಕೆ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಕೊರೋನಾದಿಂದ ದೇಶದಲ್ಲಿ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ. ಲಸಿಕೆ ಕೊಡುತ್ತಿರುವ ಹೆಸರಿನಲ್ಲಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದೀರಿ. ಲಸಿಕೆ ಸಹ ವ್ಯಾಕ್ಸಿನ್ ಕೇಂದ್ರಗಳಿಗೆ ಅಲೆಸುತ್ತಿದ್ದೀರಿ. ಸರ್ಕಾರ ಕೊರೋನಾದಿಂದ ಮೃತಪಟ್ಟವರಿಗೆ ಕೇವಲ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ ಎಂದು ದೂರಿದರು.
ಪ್ರಗತಿಪರ ಹೋರಾಟಗಾರ ಎಚ್.ಬಿ. ರಾಘವೇಂದ್ರ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ಸರಾಪ್ ಅಸೋಶಿಯೇಷನ್ ಅಧ್ಯಕ್ಷ ಕಾಶಿನಾಥ್ ಚೌದರಿ, ಗ್ರಾಹಕ ವೇದಿಕೆಯ ಕೆ.ಎನ್.ವೆಂಕಟಗಿರಿ ಇನ್ನಿತರರು ಮಾತನಾಡಿದರು. ಮಹ್ಮದ್ ಖಾಸಿಂ, ವಿ.ಜಿ.ಮನೋಹರ್, ಗಣಪತಿ ಸುಳಗೋಡು, ವಸಂತ್ ಶೇಟ್, ರವಿ ಜಂಬಗಾರು, ಪುಟ್ಟಪ್ಪ, ಉದಯಕುಮಾರ್ ಕುಂಸಿ, ಅಶೋಕ ಕುಮಾರ್, ಅ.ರಾ.ಶ್ರೀನಿವಾಸ್, ಅತಾವುಲ್ಲಾ, ಖಂಡಿಕಾ ಪ್ರಭಾಕರ್, ಕೆ.ಸಿದ್ದಪ್ಪ ಮತ್ತಿತರರಿದ್ದರು.
ತಾಲ್ಲೂಕಿನಲ್ಲಿ ಜನಸಂಖ್ಯೆ 223591 ಇದ್ದು, ವ್ಯಾಕ್ತಿನ್ ಪಡೆಯಲು 18ವರ್ಷದವರನ್ನು ಒಳಗೊಂಡಂತೆ 177828 ಜನರು ಇದ್ದಾರೆ. ಈತನಕ ಒಂದು ಡೋಸ್ ಪಡೆದವರು 71456 ಜನರು ಇದ್ದು, ಎರಡನೇ ಡೋಸ್ ಕೇವಲ 12945 ಜನರು ಮಾತ್ರ ಪಡೆದಿದ್ದಾರೆ. -ತೀ.ನ.ಶ್ರೀನಿವಾಸ್