ಕೋವಿಡ್ ನಿಂದ ಮೃತಪಟ್ಟವರಿಗೆ ಕಾಂಗ್ರೆಸ್ ಸಹಾಯ ಹಸ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜು.11ರಿಂದ ಪ್ರತಿ ಮನೆಗೆ ಭೇಟಿ ನೀಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಬಗ್ಗೆ ಸರ್ಕಾರ ತಪ್ಪು ಲೆಕ್ಕವನ್ನು ನೀಡಿದ್ದು, ಈ ಬಗ್ಗೆ ಸತ್ಯಾಸತ್ಯತೆ ಪರಾಮರ್ಶೆಗಾಗಿ ಕಾಂಗ್ರೆಸ್ ಹಲವು ತಂಡಗಳಾಗಿ ಮನೆ ಮನೆಗೆ ಭೇಟಿ ನೀಡಿ ವಿವರಗಳನ್ನು ಕಲೆ ಹಾಕುವುದಲ್ಲದೇ ಅಗತ್ಯ ನೆರವು ನೀಡಲು ಉದ್ದೇಶಿಸಿದೆ. ಈ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಚಾಲನೆ ನೀಡಲಿದ್ದಾರೆ ಎಂದರು.
ರಾಷ್ಟ್ರ ಮತ್ತು ರಾಜ್ಯ ನಾಯಕರ ಆದೇಶದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಒಟ್ಟಾಗಿ ಸಹಾಯ ಹಸ್ತ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಕೋರಿದ ಅವರು ಮೃತರ ಕುಟುಂಬದವರಿಗೆ ಸರ್ಕಾರ ನೀಡಲು ಉದ್ದೇಶಿಸಿರುವ ಒಂದು ಲಕ್ಷ ರೂ. ಪರಿಹಾರ ಯಾತಕ್ಕೂ ಸಾಲದು,5ಲಕ್ಷ ರೂ. ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಕೋವಿಡ್ ನಿಂದ ಒಂದು ಮನೆಯಲ್ಲಿ ಎಷ್ಟು ಜನಮೃತಪಟ್ಟರೂ ಒಂದೇ ಲಕ್ಷ ರೂ. ನೀಡುವುದು ಸರಿಯಲ್ಲ. ಪರಿಹಾರ ಕೊಡಬೇಕೆಂಬ ಉದ್ದೇಶದಿಂದ ಇತ್ತೀಚೆಗೆ ಕೋವಿಡ್ ಸಾವುಗಳನ್ನು ನೆಗೆಟಿವ್ ಎಂದು ಪ್ರಮಾಣ ಪತ್ರ ನೀಡುತ್ತಿದ್ದು, ಅರ್ಹರು ಪರಿಹಾರ ಪಡೆಯಲು ವಂಚಿತರಾಗಿದ್ದಾರೆ ಎಂದು ಹೇಳಿದರು.
ಪರಿಹಾರ ಪಡೆಯಲು ದಾಖಲೆಗಳ ಸರಳೀಕರಣಗೊಳಿಸಬೇಕು. ಇತ್ತೀಚೆಗೆ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲು ಮಾಡಿಕೊಳ್ಳುವಾಗ ಕೋವಿಡ್ ಪಾಸಿಟಿವ್ ಎಂದು ಬಿಡುಗಡೆ ಮಾಡುವಾಗ ನೆಗೆಟಿವ್ ಎಂದು ಪ್ರಮಾಣ ಪತ್ರ ನೀಡುತ್ತಿರುವುದು ಪರಿಹಾರ ನೀಡಿಕೆಯಲ್ಲಿ ಗೊಂದಲ ಉಂಟಾಗಿದೆ. ಇದನನ್‌ಉ ನಿವಾರಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯರಾದ ಶಾಮಿರ್ ಖಾನ್, ಹೆಚ್.ಸಿ. ಯೋಗೀಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಪ್ರಮುಖರಾದ ವಿಶ್ವನಾಥ್ ಕಾಶಿ, ಚಂದ್ರ ಭೂಪಾಲ್, ನಾಗರಾಜ್, ಮೊಹಮ್ಮದ್ ಆರೀಫ್, ರಂಗನಾಥ್, ಲೋಕೇಶ್, ಪ್ರಮೋದ್, ಪ್ರಫುಲ್ಲಚಂದ್ರ, ಎನ್.ಡಿ. ಪ್ರವೀಣ್ ಕುಮಾರ್ ಇದ್ದರು.