ಪಕ್ಷದ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈ ಮಾಡಿದ ಪ್ರಕರಣವನ್ನೇ ಮಹಾನ್ ಪ್ರಕರಣ ಎಂದು ಬಿಂಬಿಸುವ ಬಿಜೆಪಿ ರಾಜ್ಯಾಧ್ಯಕ್ಷರು ಮೊದಲು ತಮ್ಮ ಪಕ್ಷದಲ್ಲಿರುವ ಹುಳುಕುಗಳನ್ನು ಸರಿಪಡಿಸಿಕೊಳ್ಳಲಿ ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಗಲ ಮೇಲೆ ಕೈಹಾಕಿದ್ದ ಕಾರ್ಯಕರ್ತನಿಗೆ ಶಿಸ್ತು ಪಾಲಿಸುವಂತೆ ಪ್ರೀತಿಯಿಂದ ಒಂದೇಟು ಹಾಕಿದ್ದನ್ನೇ ಮಹಾಪರಾಧ ಎಂದು ಬಿಂಬಿಸುವುದು ಸರಿಯಲ್ಲ. ಈ ಹಿಂದೆ ಬಿಜೆಪಿ ನಾಯಕರು ಕೂಡ ಕಾರ್ಯಕರ್ತರು ಹಾಗೂ ಇತರರ ಮೇಲೆ ಕೈಮಾಡಿಲ್ಲ. ಘಟನೆ ನಡೆದಿದೆ. ಇದು ನಮ್ಮ ಪಕ್ಷದ ಆಂತರಿಕ ವಿಚಾರ. ಇದರಲ್ಲಿ ಬಿಜೆಪಿಯವರು ಮೂಗು ತೂರಿಸುವ ಅಗತ್ಯವಿಲ್ಲ ಎಂದರು.
ಇದೇ ರೀತಿ ಬಿಜೆಪಿ ನಾಯಕರ ವರ್ತನೆ ಮಿತಿಮೀರಿದರೆ ಪಕ್ಷದ ವತಿಯಿಂದ ಮುಖ್ಯಮಂತ್ರಿ ಹಾಗೂ ಸಚಿವರ ಕಾರ್ಯಕ್ರಮಗಳಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಇಂಟಕ್ ಮಹಿಳಾ ವಿಭಾಗದ ಅಧ್ಯಕ್ಷೆ ಕವಿತಾ ರಾಘವೇಂದ್ರ, ಜಿಲ್ಲಾಧ್ಯಕ್ಷ ಅರ್ಜುನ್, ನಿಶಾದ್ ಅಹಮ್ಮದ್, ನಿಹಾಲ್ ಸಿಂಗ್, ರಾಘವೇಂದ್ರ ಇದ್ದರು.