Malenadu Mitra
ರಾಜಕೀಯ ರಾಜ್ಯ ಶಿವಮೊಗ್ಗ ಸಾಗರ

ಗಣ್ಯರ ಮಕ್ಕಳ ರಾಜಕೀಯ ರಂಗತಾಲೀಮು, ಈ ಬಾರಿ ಪಂಚಾಯ್ತಿ ಫೈಟ್‍ನಲ್ಲೂ ಕುಟುಂಬ ಪರ್ವ

ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ ಶಿವಮೊಗ್ಗ ಒಂದು ಕಾಲದಲ್ಲಿ ಆದರ್ಶ ರಾಜಕಾರಣಕ್ಕೆ ಹೆಸರಾಗಿತ್ತು. ಚಳವಳಿಗಳ ತವರೂರು ಎಂಬ ಖ್ಯಾತಿವೆತ್ತ ಈ ಜಿಲ್ಲೆಯಲ್ಲಿ ಮೌಲ್ಯಾಧಾರಿತ ರಾಜಕಾರಣ ಮಾಡಿದ ಅನೇಕ ಮಹನೀಯರು ಆಗಿಹೋಗಿದ್ದಾರೆ. 1990ರ ತನಕ ನೈತಿಕ ಹಾದಿಯಲ್ಲಿಯೇ ಸಾಗಿದ್ದ ರಾಜಕರಣ ಆ ಬಳಿಕ ಪಥ ಬದಲಿಸಿದ್ದು ಇತಿಹಾಸ. ರಾಜಕೀಯ ಜೀವನದ ಅರ್ಧ ಭಾಗವನ್ನು ನೆಹರೂ ಮನೆತನದ ಕುಟುಂಬ ರಾಜಕಾರಣವನ್ನು ನಿಂದಿಸುತ್ತಲೇ ರಾಜಕೀಯ ಪ್ರವರ್ಧಮಾನಕ್ಕೆ ಬಂದ ಬಿಜೆಪಿ ನಾಯಕರು ಕೂಡಾ ತಮ್ಮ ಮಕ್ಕಳು ಮರಿಮಕ್ಕಳನ್ನು ರಾಜಕೀಯ ಪಡಸಾಲೆಗೆ ತಂದು ಕೂರಿಸಿದ ಮೇಲೆ ಅವರೂ ಬಾಯಿ ಕಳೆದುಕೊಂಡರು.
ದೇಶ ಹಾಗೂ ರಾಜ್ಯ ರಾಜಕಾರಣದಲ್ಲಿ ಈಗ ಕುಟುಂಬ ರಾಜಕಾರಣ ಎಂಬುದು ಗಂಭೀರವಾದ ಸಂಗತಿಯಾಗಿ ಉಳಿದೇ ಇಲ್ಲ. ರಾಜಕೀಯ ಎಂದರೆ ಕುಟುಂಬಕ್ಕೆ ಬಂದ ಬಳುವಳಿ ಎಂಬಂತಾಗಿದೆ ಮತ್ತು ಇದೂ ಕೂಡಾ ಬಂಡವಾಳ ಹೂಡಿ ಬಂಡವಾಳ ತೆಗೆಯುವ ಕ್ಷೇತ್ರವಾಗಿರುವುದರಿಂದ ಸಾಮಾನ್ಯ ಜನರು ರಾಜಕೀಯಕ್ಕೆ ಬರುವುದು ಕಷ್ಟಸಾಧ್ಯವೇ ಸರಿ. ಅದೂ ಸಂವಿಧಾನ ಕೊಟ್ಟ ಮೀಸಲಾತಿ ಪರಿಣಾಮವಾಗಿ ಕೆಳಹಂತದ ಜನಪ್ರತಿನಿಧಿಗಳಾಗಲು ಕೆಲವರಿಗೆ ಕೆಳಹಂತದ ರಾಜಕಾರಣದಲ್ಲಿ ಅವಕಾಶ ಸಿಗುತ್ತಿದೆ. ಅಲ್ಲೂ ಕುಟುಂಬಗಳ ಪಾರುಪಥ್ಯ ಇದ್ದೇ ಇದೆ.
ನಾಯಕರ ಮಕ್ಕಳ ರಾಜಕೀಯ
ಸಮಾಜವಾದಿ ನೆಲ ಶಿವಮೊಗ್ಗದಲ್ಲಿ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮತ್ತೊಂದು ಸುತ್ತಿನ ಕುಟುಂಬ ಪರ್ವ ಆರಂಭವಾಗಲಿದೆ. ಈಗಾಗಲೇ ಕರಡು ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ವಿವಿಧ ರಾಜಕೀಯ ನಾಯಕರು ತಮ್ಮ ಕುಟುಂಬದ ಕುಡಿಗಳ ರಂಗಪ್ರವೇಶಕ್ಕೆ ತಾಲೀಮು ನಡೆಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಕುಟುಂಬದ ಮೂರನೇ ತಲೆಮಾರಿನ ಅರ್ಜುನ್ ಬಂಗಾರಪ್ಪ ಅವರನ್ನು ಈ ಬಾರಿ ಜಿಲ್ಲಾ ಪಂಚಾಯಿತಿಯಿಂದಲೇ ರಾಜಕೀಯಕ್ಕೆ ತರಬೇಕೆಂಬ ಚರ್ಚೆ ನಡೆದಿದೆ ಎಂಬ ಸುದ್ದಿ ಸೊರಬದಲ್ಲಿ ಕೇಳಿಬರುತ್ತಿದೆ. ಹಾಗೇ ನೋಡಿದರೆ ಶಾಸಕ ಕುಮಾರ್ ಬಂಗಾರಪ್ಪ ಅವರು ಪುತ್ರ ಅರ್ಜುನ್ ಅವರನ್ನು ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಜೊತೆಯಲ್ಲಿ ಕರೆದುಕೊಂಡು ಓಡಾಡಿದ್ದಾರೆ. ಈ ಬಾರಿ ಸೊರಬ ತಾಲೂಕು ಚಂದ್ರಗುತ್ತಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸುವ ಇರಾದೆ ಹೊಂದಿದ್ದಾರೆ ಎಂಬ ಸುದ್ದಿ ಈಗಾಗಲೇ ಸೊರಬ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಆಯನೂರು ಪುತ್ರ ಪ್ರವೇಶ

ಹಿರಿಯ ರಾಜಕಾರಣಿ ಮಾಜಿ ಸಂಸದ ಹಾಗೂ ಹಾಲಿ ಮೇಲ್ಮನೆ ಸದಸ್ಯರಾದ ಆಯನೂರು ಮಂಜುನಾಥ್ ಅವರ ಪುತ್ರ ಸಂತೋಷ್ ಅವರನ್ನು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ರಾಜಕೀಯ ರಂಗಪ್ರವೇಶ ಮಾಡಿಸುತ್ತಾರೆ ಎಂಬ ಸುದ್ದಿ ಈಗಾಗಲೇ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಪ್ರಸ್ತುತ ಹಾರನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದ್ಯದ ಮೀಸಲಾತಿ ಸಂತೋಷ್‍ಗೆ ಅನುಕೂಲಕರವಾಗಿದ್ದು, ಅವರನ್ನು ರಾಜಕೀಯ ಅಖಾಡಕ್ಕೆ ಇಳಿಸುವಲ್ಲಿ ತೆರೆಮರೆಯ ಪ್ರಯತ್ನ ನಡೆಯುತ್ತಿದೆ. ವೃತ್ತಿಯಲ್ಲಿ ಆರ್ಕಿಟೆಕ್ ಎಂಜನಿಯರ್ ಆಗಿರುವ ಸಂತೋಷ್, ಕಾಂಗ್ರೆಸ್ ಮುಖಂಡ ವೈಎಚ್ ನಾಗರಾಜ್ ಅವರ ಅಳಿಯ ಕೂಡಾ ಆಗಿದ್ದಾರೆ. ಎರಡೂ ಕುಟಂಬಗಳಿಗೂ ರಾಜಕೀಯ ಹಿನ್ನೆಲೆಯಿದೆ.
ಡಾ.ರಾಜನಂದಿನಿಯವರ ರಾಜಕೀಯ ವೇದಿಕೆ

ಮಾಜಿ ಸಚಿವ ಹಾಗೂ ಸಮಾಜವಾದಿ ನಾಯಕ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಕಾಗೋಡು ಅವರು ವಿಧಾನ ಸಭೆ ಚುನಾವಣೆಗೆ ಆಕಾಂಕ್ಷಿಯಾಗಿದ್ದರೂ, ರಂಗತಾಲೀಮಿಗಾಗಿ ಸಧ್ಯವೇ ನಡೆಯುವ ಜಿಲ್ಲಾ ಪಂಚಾಯಿತಿ ಅಖಾಡಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಅವರು ಕಳೆದ ಹಲವು ವರ್ಷಗಳಿಂದ ತಂದೆಯ ರಾಜಕೀಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೈದ್ಯರು ಹಾಗು ಕೆಪಿಸಿಸಿ ಕಾರ್ಯದರ್ಶಿಯೂ ಆಗಿರುವ ಅವರು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರ ಮತ್ತು ರಾಜಕೀಯ ಹೋರಾಟದಲ್ಲಿಯೂ ಸಕ್ರಿಯವಾಗಿದ್ದು, ಆವಿನಹಳ್ಳಿ ಕ್ಷೇತ್ರದಿಂದ ರಾಜಕೀಯ ಪರೀಕ್ಷೆಗೆ ಮುಂದಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಅವರು ತಮ್ಮ ಪತ್ನಿ ರಾಧಾ ಗೋಪಾಲಕೃಷ್ಣ ಅವರನ್ನು ಜಿಲ್ಲಾ ಪಂಚಾಯಿತಿ ಚುನಾವಣೆ ಕಣಕ್ಕೆ ಇಳಿಸುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳ ಸಂಘದ ಹೆಸರಿನಲ್ಲಿ ತಾಲೂಕಿನಾದ್ಯಂತ ಕೊರೊನ ಸಂಕಷ್ಟದಲ್ಲಿರುವ ಬಡವರಿಗೆ ದಿನಸಿ ಕಿಟ್ ವಿತರಿಸುತ್ತಿರುವ ಬೇಳೂರು ಕೆಲವು ಕಾರ್ಯಕ್ರಮಗಳಲ್ಲಿ ಪತ್ನಿಯನ್ನು ವೇದಿಕೆಯಲ್ಲಿ ಕೂರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಭಾನು ಪ್ರಕಾಶ್ ಪುತ್ರ

ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ನಾಯಕ ಎಂ.ಬಿ.ಭಾನುಪ್ರಕಾಶ್ ಅವರು ತಮ್ಮ ಪುತ್ರ ಹರಿಕೃಷ್ಣ ಅವರನ್ನು ಹಸೂಡಿ ಕ್ಷೇತ್ರದಿಂದ ಚುನಾವಣೆ ಕಣಕ್ಕಿಳಿಸಲಿದ್ದಾರೆ ಎನ್ನಲಾಗಿದೆ. ಹರಿಕೃಷ್ಣ ಅವರು ಈಗಾಗಲೇ ಬಿಜೆಪಿ ಯುವ ಮೋರ್ಚಾದಲ್ಲಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಪುತ್ರನಿಗೆ ರಾಜಕೀಯ ಭವಿಷ್ಯ ರೂಪಿಸುವಲ್ಲಿ ಭಾನುಪ್ರಕಾಶ್ ಅವರು ಮುಂದಾಗಿದ್ದಾರೆ. ಎಂಜನಿಯರಿಂಗ್ ಪದವೀಧರನಾಗಿರುವ ಹರಿಕೃಷ್ಣ ಅನೇಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಆರಗ ಪುತ್ರನೂ ಅಖಾಡಕ್ಕೆ ?

ತೀರ್ಥಹಳ್ಳಿ ಶಾಸಕ ಹಾಗೂ ಕೆಎಚ್‍ಬಿ.ಅಧ್ಯಕ್ಷ ಆರಗ ಜ್ಞಾನೇಂದ್ರ ಅವರ ಪುತ್ರ ಅಭಿನಂದನ್ ಆರಗ ಅವರನ್ನೂ ರಾಜಕೀಯಕ್ಕೆ ತರುವ ಇರಾದೆಯಿದ್ದು, ಮೀಸಲಾತಿ ಅನುಕೂಲ ಇರುವ ಯಾವುದಾದರೂ ಒಂದು ಕ್ಷೇತ್ರದ ಮೂಲಕ ಜ್ಞಾನೇಂದ್ರ ಅವರು ತಮ್ಮ ಪುತ್ರನನ್ನು ರಾಜಕೀಯ ಗರಡಿಮನೆಗೆ ಕರೆತರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಹೊಸದೇನಲ್ಲ ಈಗಾಗಲೇ ಮಾಜಿ ಸಿಎಂ ಬಂಗಾರಪ್ಪ ಪುತ್ರರು, ಹಾಲಿ ಸಿಎಂ ಯಡಿಯೂರಪ್ಪ , ಸಚಿವ ಈಶ್ವರಪ್ಪ, ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಪುತ್ರರೂ ಈಗಾಗಲೇ ಸಕ್ರಿಯ ರಾಜಕಾರಣಿಗಳಾಗಿದ್ದು, ವಿವಿಧ ಅಧಿಕಾರ ಅನುಭವಿಸುತ್ತಿದ್ದಾರೆ. ಈಗ ಮತ್ತೊಂದು ಸುತ್ತಿನ ಕುಟುಂಬ ಪರ್ವ ಆರಂಭವಾಗಲಿದ್ದು, ಆಯಾ ನಾಯಕರು ಪ್ರತಿನಿಧಿಸುವ ಪಕ್ಷಗಳು ಪುತ್ರ ಕಲ್ಯಾಣಕ್ಕೆ ಯಾವ ರೀತಿಯ ಪ್ರೋತ್ಸಾಹ ನೀಡಲಿವೆ ಎಂಬುದನ್ನು ಮಾತ್ರ ಕಾದುನೋಡಬೇಕಿದೆ.

Ad Widget

Related posts

ಸಿದ್ದರಾಮಯ್ಯ ಹಗಲುಗನಸು ಬಿಡಲಿ

Malenadu Mirror Desk

ಆ.22 ರಂದು ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

Malenadu Mirror Desk

ಪತ್ರಿಕೆ ಓದುವುದರಿಂದ ಜ್ಞಾನದ ದಾಹ ನೀಗುವುದು : ತಹಸೀಲ್ದಾರ್ ಹುಸೇನ್, ಸೊರಬ ತಾಲೂಕು ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.