Malenadu Mitra
ರಾಜ್ಯ ಶಿವಮೊಗ್ಗ

ಜು.19,22 ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಕಲ ಸಿದ್ದತೆ : ಸಿಇಓ ವೈಶಾಲಿ

ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ನೂತನವಾಗಿ ಬಹು ಆಯ್ಕೆ ಮಾದರಿಯಂತೆ ಜುಲೈ 19 ಮತ್ತು 22 ರಂದು ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಾವುದೇ ಅಡ್ಡಿ-ಆತಂಕಗಳಿಲ್ಲದಂತೆ ಯಶಸ್ವಿಯಾಗಿ ನಡೆಸಲು ಜಿಲ್ಲೆಯಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿ.ಪಂ.ಸಿಇಓ ಎಂ.ಎಲ್.ವೈಶಾಲಿ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕುರಿತಾದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಳೆದ ಬಾರಿಯೂ ಕೋವಿಡ್ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೆವು. ಈ ಬಾರಿಯೂ ಯಶಸ್ವಿಯಾಗಿ ನಡೆಸಲಿದ್ದು ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯುವಂತಹ ವಾತಾವರಣ ನಿರ್ಮಿಸಲು ಎಲ್ಲ ಕ್ರಮ ವಹಿಸಲಾಗಿದೆ ಎಂದರು.
ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ಮಾರ್ಗಸೂಚಿಯನುಸಾರ ಪ್ರತಿ ತಾಲ್ಲೂಕುವಾರು ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು ಜಿಲ್ಲೆಯಲ್ಲಿ ಒಟ್ಟು 150 ಪರೀಕ್ಷೆಗಳನ್ನು ಗುರುತಿಸಲಾಗಿದೆ. ಪರೀಕ್ಷಾ ಮಂಡಳಿಯಿಂದ ನೀಡಲಾದ ಎಸ್.ಓ.ಪಿ(ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್) ಅನುಸಾರ ಪರೀಕ್ಷಾ ಕೇಂದ್ರಗಳಲ್ಲಿ ಆಸನ ವ್ಯವಸ್ಥೆ, ವಿಶೇಷ ಕೊಠಡಿಗಳು, ಆರೋಗ್ಯ ತಪಾಸಣಾ ಕೌಂಟರ್‍ಗಳನ್ನು ತೆರೆಯಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.


ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ ವ್ಯವಸ್ಥೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನೇಮಕಾತಿಯೊಂದಿಗೆ ಆರೋಗ್ಯ ತಪಾಸಣಾ ಕೌಂಟರ್ ಸ್ಥಾಪಿಸುವಂತೆ ಡಿಹೆಚ್‍ಓ ರವರಿಗೆ ಸೂಚನೆ ನೀಡಿದರು.
ಪರೀಕ್ಷಾ ಕೇಂದ್ರ ವ್ಯವಸ್ಥೆ

ಪ್ರತಿ ಪರೀಕ್ಷಾ ಕೇಂದ್ರವನ್ನು ಮತ್ತು ಪೀಠೋಪಕರಣಗಳನ್ನು ಪರೀಕ್ಷೆಯ ಮುನ್ನ ಮತ್ತು ಪರೀಕ್ಷೆಯಾದ ನಂತರ ಸೋಂಕು ನಿವಾರಕ ದ್ರಾವಣದಿಂದ ಶುದ್ದಗೊಳಿಸಲು ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ತಿಳಿಸಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶದಲ್ಲೇ ಆರೋಗ್ಯ ತಪಾಸಣಾ ಕೌಂಟರ್ ಸ್ಥಾಪಿಸಲಾಗುವುದು. ಇದು ಬೆಳಿಗ್ಗೆ 8.30 ರಿಂದ ತೆರೆದಿದ್ದು ವೈದ್ಯಕೀಯ/ಆಶಾ ಕಾರ್ಯಕರ್ತೆಯರು ತಪಾಸಣೆ ನಡೆಸುವರು.
ಆರು ಅಡಿ ಅಂತರ ಕಡ್ಡಾಯ

ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಒಳಗೆ ಪ್ರವೇಶಿಸುವ ಪ್ರದೇಶದಲ್ಲಿ ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ಆರು ಅಡಿ ಅಥವಾ 2 ಮೀಟರ್ ದೈಹಿಕ ಅಂತರವನ್ನು ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡುವಂತೆ ಬಿಇಓ ರವರಿಗೆ ಸೂಚಿಸಲಾಗಿದೆ. ಒಂದು ಡೆಸ್ಕ್‍ಗೆ ಒಬ್ಬ ವಿದ್ಯಾರ್ಥಿಯಂತೆ ಒಂದು ಕೊಠಡಿಯಲ್ಲಿ ಗರಿಷ್ಟ 12 ಮಕ್ಕಳು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾಲ್ಲೂಕು ಕೇಂದ್ರಕ್ಕೆ ಹೋಗದಂತೆ ಪರೀಕ್ಷಾ ಕೇಂದ್ರ ರಚಿಸಲು ಸೂಚಿಸಲಾಗಿದೆ.
ಮುಂಚಿತವಾಗಿ ಸೂಚನೆ

ಆಸನ ವ್ಯವಸ್ಥೆ ಬಗ್ಗೆ ಮುಂಚಿತವಾಗಿ ತಿಳಿಸುವುದರಿಂದ ಮಕ್ಕಳು ಸೂಚನಾ ಫಲಕದ ಮುಂದೆ ಗುಂಪುಗಟ್ಟುವುದು ತಡೆಗಟ್ಟಬಹುದಾದ್ದರಿಂದ ಮುಂಚಿತವಾಗಿ ತಿಳಿಸಲು ವ್ಯವಸ್ಥೆ ಮಾಡಲಾಗಿದೆ. ಹಾಗೂ ಎರಡು ಮೂರು ಕಡೆ ಪರೀಕ್ಷಾ ವಿವರ ಕುರಿತು ಸೂಚನೆಗಳನ್ನು ಅಂಟಿಸಲು ತಿಳಿಸಲಾಗಿದೆ. ವಿದ್ಯಾರ್ಥಿಗಳು ಮನೆಯಿಂದ ನೀರಿನ ಬಾಟಲಿ ಮತ್ತು ಅಪೇಕ್ಷೆ ಪಟ್ಟಲ್ಲಿ ಮನೆಯಿಂದ ಆಹಾರದ ಡಬ್ಬಿ ತರಲು ಅವಕಾಶವಿದೆ ಎಂದ ಅವರು ಪರೀಕ್ಷಾ ಕೇಂದ್ರಕ್ಕೆ ಬರಲು ಸಾರಿಗೆ ಸಂಪರ್ಕ ತೊಂದರೆ ಇರುವ ಮಕ್ಕಳನ್ನು ಗುರುತಿಸಿ ಕರೆತರಲು ವ್ಯವಸ್ಥೆ ಮಾಡುವಂತೆ ಬಿಇಓಗಳಿಗೆ ಸೂಚಿಸಿದರು.
ವಿಶೇಷ ಮತ್ತು ಕಾಯ್ದಿರಿಸಿದ ಕೇಂದ್ರ

ಕೆಮ್ಮು, ನೆಗಡಿ, ಜ್ವರ ಮೊದಲಾದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಕನಿಷ್ಟ ಎರಡು ಕೊಠಡಿಗಳನ್ನು ವಿಶೇಷ ಕೊಠಡಿಗಳೆಂದು ಹೆಸರಿಸಿ ಕಾಯ್ದಿರಿಸಲಾಗುವುದು. ಹಾಗೂ ತಾಲ್ಲೂಕಿನ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕನಿಷ್ಟ ಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಅವುಗಳನ್ನು ‘ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳಾಗಿ ಇಡಲಾಗುವುದು. ಕೆಮ್ಮು ನೆಗಡಿ, ಜ್ವರ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ತಪಾಸಣೆಗೂ ಮುನ್ನ ಕಡ್ಡಾಯವಾಗಿ ಎನ್95 ಮಾಸ್ಕ್ ನೀಡಲಾಗುವುದು ಎಂದ ಅವರು ಪ್ರತಿ ತಾಲ್ಲೂಕಿನಲ್ಲಿ ಒಂದು ಆಂಬುಲೆನ್ಸ್ ಸಿದ್ದವಿರಿಸಲು ಡಿಹೆಚ್‍ಓಗೆ ಸೂಚನೆ ನೀಡಿದರು.
ಆಕ್ಸಿಜನ್ ಸ್ಯಾಚುರೇಷನ್ ಮಟ್ಟ ಶೇ.94 ಗಿಂತ ಕಡಿಮೆ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಮುಂದಿನ ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಲಾಗುವುದು. ಕೆಮ್ಮು ನೆಗಡಿ, ಜ್ವರ ಇದ್ದು ಆಕ್ಸಿಜನ್ ಸ್ಯಾಚುರೇಷನ್ ಶೇ.94 ಕ್ಕಿಂತ ಕಡಿಮೆ ಇದ್ದಲ್ಲಿ ‘ವಿಶೇಷ ಕೊಠಡಿ’ಯಲ್ಲಿ ಕೂರಿಸಿ ಪರೀಕ್ಷೆ ನಡೆಸಲಾಗುವುದು. ಒಂದು ವೇಳೆ ವಿದ್ಯಾರ್ಥಿ ಈಗಾಗಲೇ ಕೋವಿಡ್ ಪಾಸಿಟಿವ್ ಇದ್ದು ಗೈರಾದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ನೀಡಿ ಅದನ್ನು ಪ್ರಥಮ ಅವಕಾಶವೆಂದು ಪರಿಗಣಿಸಲಾಗುವುದು.
ಪರೀಕ್ಷಾ ಮೇಲ್ವಿಚಾರಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಫೇಸ್‍ಶೀಲ್ಡ್ ಹಾಕಿಕೊಳ್ಳಬೇಕು. ಮಕ್ಕಳಿಗೆ ನೀರು ಕುಡಿಯುವಲು ಬಳಸಿ ಬಿಸಾಡಬಹುದಾದ ಲೋಟದ ವ್ಯವಸ್ಥೆ ಶೌಚಾಲಯಲ್ಲಿ ಲಿಕ್ವಿಡ್ ಸೋಪ್ ಇಡಬೇಕು. ಹಾಗೂ ವಿಕಲಚೇತನ ಮಕ್ಕಳಿಗೆ ನೆಲ ಮಾಳಿಗೆಯಲ್ಲಿ ಉತ್ತಮ ಆಸನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ ಅವರು ಎಲ್ಲ ಬಿಇಓಗಳು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದರು.
ಡಿಡಿಪಿಐ ಎನ್.ಎಂ. ರಮೇಶ್ ಮಾತನಾಡಿ, ಎಸ್‍ಓಪಿ ಪ್ರಕಾರ ಹಾಗೂ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಸಿಬ್ಬಂದಿಗಳು, ಮಾರ್ಗಾಧಿಕಾರಿಗಳು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, ವೀಕ್ಷಕರು ಹಾಗೂ ಅಗತ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಲಾಗಿದೆ. ಪರೀಕ್ಷಾ ಮಂಡಳಿಯಿಂದ ಸರಬರಾಜಾಗುವ ಪ್ರಶ್ನೆಪತ್ರಿಕೆಗಳನ್ನು ತಾಲ್ಲೂಕು ಖಜಾನೆಗಳಲ್ಲಿ ಸುರಕ್ಷಿತವಾಗಿ ಶೇಕರಿಸಿಡಲು ಕ್ರಮ ಕೈಗೊಳ್ಳಲಾಗಿದೆ. ಹಾಗೂ ಪರೀಕ್ಷೆ ನಂತರ ಓಎಂಆರ್ ಬಂಡಲ್‍ಗಳನ್ನು ಸಂರಕ್ಷಿಸಲು ಭದ್ರತಾ ಕೊಠಡಿಗಳನ್ನು ಸಿದ್ದಪಡಿಸಲಾಗಿದೆ.

ಪರೀಕ್ಷಾ ಕೇಂದ್ರ ಮತ್ತು ವಿದ್ಯಾರ್ಥಿಗಳ ವಿವರ

ಜಿಲ್ಲೆಯಲ್ಲಿ ಒಟ್ಟು 150 ಪರೀಕ್ಷಾ ಕೇಂದ್ರಗಳು ಮತ್ತು ಹೆಚ್ಚುವರಿಯಗಿ 16 ಪರೀಕ್ಷಾ ಕೇಂದ್ರ ಗುರುತಿಸಲಾಗಿದೆ. 24771 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 61 ಮಾರ್ಗಾಧಿಕಾರಿಗಳು, 150 ಸ್ಥಾನಿಕ ಜಾಗೃತದಳ ಅಧಿಕಾರಿಗಳನ್ನು ನೇಮಿಸಲಾಗಿದೆ
ಲಸಿಕೆ ಮತ್ತು ಕೋವಿಡ್ ಪರೀಕ್ಷೆ ಕಡ್ಡಾಯ : ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯವರು ಕನಿಷ್ಟ ಒಂದು ಡೋಸ್ ಲಸಿಕೆ ಪಡೆದಿರಬೇಕು ಹಾಗೂ ಆ ಸಂದರ್ಭಕ್ಕೆ ಅನುಗುವಣವಾಗಿ ಆರ್.ಎ.ಟಿ ಅಥವಾ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಪಾಸಿಟಿವ್ ಬಂದರೆ ಅಂತಹವರು ಪರೀಕ್ಷೆ ವೇಳೆ ಕರ್ತವ್ಯಕ್ಕೆ ಹಾಜರಾಗುವಂತಿಲ್ಲ. ಬದಲಿ ವ್ಯವಸ್ಥೆ ಮಾಡಲಾಗುವುದು.
ಪರೀಕ್ಷಾ ಕಾರ್ಯಕ್ಕೆ 3967 ಸಿಬ್ಬಂದಿಗಳನ್ನು ನಿಯೋಜಿಸಿದ್ದು ಇವರೆಲ್ಲರೂ ಪ್ರಥಮ ಡೋಸ್ ಲಸಿಕೆ ಪಡೆದಿದ್ದು ಈ ಪೈಕಿ 746 ಎರಡನೇ ಡೋಸ್ ಸಹ ಪಡೆದಿದ್ದಾರೆ.
ಜುಲೈ 14 ಮತ್ತು 15 ರಂದು ಅಣಕು ಪರೀಕ್ಷೆ

ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜು.14 ಮತ್ತು 15 ರಂದು ಅಣಕು ಪರೀಕ್ಷೆ ನಡೆಸಲು ಸೂಚಿಸಲಾಗಿದ್ದು, ಅಣಕು ಪರೀಕ್ಷೆ ಕಡ್ಡಾಯವಲ್ಲ ಎಂಬುದನ್ನು ಸೂಚಿಸಿದೆ. ಆದ್ದರಿಂದ ಸ್ವಯಂ ಆಸಕ್ತಿಯಿಂದ ಪರೀಕ್ಷೆ ಬರೆಯಲು ಮುಂದೆ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಸಲಾಗುವುದು ಎಂದು ಮಾಹಿತಿ ನೀಡಿದ ಅವರು ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲ ಅಧಿಕಾರಿ/ಸಿಬ್ಬಂದಿಗೆ ಎಸ್‍ಓಪಿ ಪ್ರಕಾರ ಮಾಹಿತಿಯನ್ನು ನೀಡಿದ್ದು, ಸುಗಮವಾಗಿ ಪರೀಕ್ಷೆ ನಡೆಸಲು ಎಲ್ಲ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಅನುರಾಧ.ಜಿ ಮಾತನಾಡಿ, ಪ್ರತಿ ತಾಲ್ಲೂಕು ಕೇಂದ್ರಕ್ಕೆ ಒಂದು ಕೋವಿಡ್ ಕೇರ್ ಸೆಂಟರ್ ಗುರುತಿಸಲಾಗಿದ್ದು, ಕೋವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಆಯಾ ತಾಲ್ಲೂಕು ಕೋವಿಡ್ ಕೇರ್ ಸೆಂಟರ್‍ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು.
ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಿತ ಪ್ರದೇಶದಲ್ಲಿ ಜೆರಾಕ್ಸ್ ಅಂಗಡಿ, ಸೈಬರ್ ಕೆಫೆ, ಕಂಪ್ಯೂಟರ್ ಕೇಂದ್ರಗಳನ್ನು ಮುಚ್ಚಿಸಲು ಆದೇಶಿಸಲಾಗುವುದು ಎಂದರು.

ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಪರೀಕ್ಷಾ ಎಸ್‍ಓಪಿ ಪ್ರಕಾರ ಎಲ್ಲ ವ್ಯವಸ್ಥೆ ಮಾಡಲಾಗುವುದು. ಪ್ರತಿ ತಾಲ್ಲೂಕುಗಳಲ್ಲಿ ಒಂದು ತುರ್ತು ಚಿಕಿತ್ಸಾ ವಾಹನ, ಪ್ರತಿ ಕೇಂದ್ರದಲ್ಲಿ ಸಿಬ್ಬಂದಿಯೊಂದಿಗೆ ಆರೋಗ್ಯ ತಪಾಸಣಾ ಕೌಂಟರ್ ತೆರೆದು ತಪಾಸಣೆ ಮಾಡಲಾಗುವುದು. ತಾಲ್ಲೂಕುಗಳಲ್ಲಿ ರ್ಯಾಪಿಡ್ ರೆಸ್ಪಾನ್ಸ್ ತಂಡ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳೊಂದಿಗೆ ಬಿಇಓ ಸಂಪರ್ಕದಲ್ಲಿರಬೇಕು ಎಂದ ಅವರು ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಒಟ್ಟುಗೂಡಿ ಪರೀಕ್ಷೆಯನ್ನು ಯಶಸ್ವಿಗೊಳಿಸೋಣ ಎಂದರು.
ಡಿವೈಎಸ್‍ಪಿ ಪ್ರಶಾಂತ್ ಮುನ್ನೋಳಿ ಮಾತನಾಡಿ, ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮಹಿಳಾ ಮತ್ತು ಪುರುಷ ಪೇದೆಗಳನ್ನು ನಿಯೋಜಿಸಲಾಗುವುದು. ಹಾಗೂ ಎಸ್‍ಓಪಿ ಪ್ರಕಾರ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಡಯಟ್ ಪ್ರಾಚಾರ್ಯರಾದ ಬಸವರಾಜಪ್ಪ, ಜಿಲ್ಲಾ ಖಜಾನಾಧಿಕಾರಿ ಹೆಚ್.ಎಸ್.ಸಾವಿತ್ರಿ, ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ಎಸ್‍ಎಸ್‍ಎಲ್‍ಸಿ ನೋಡಲ್ ಅಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ, ಇತರೆ ಅಧಿಕಾರಿಗಳು ಹಾಜರಿದ್ದರು.

Ad Widget

Related posts

ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲು ಒತ್ತಾಯ

Malenadu Mirror Desk

ಸಿಎಂ,ಮಾಜಿ ಸಿಎಂ ಕೈ ಕೊಟ್ಟಿದ್ದರಿಂದ ದೇವರ ಮೊರೆಹೋದ ಹಾಲಪ್ಪ
ಶರಾವತಿ ಸಂತ್ರಸ್ತರ ಸಮಸ್ಯೆಗೆ ಸರಕಾರ ಬೆನ್ನುತೋರಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

Malenadu Mirror Desk

ರಾಜಾಹುಲಿ ನುಡಿದದ್ದೇ ಘರ್ಜನೆ …

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.