Malenadu Mitra
ರಾಜ್ಯ ಶಿವಮೊಗ್ಗ

ಗೋಹತ್ಯೆ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ : ಪ್ರಭು ಬಿ.ಚವ್ಹಾಣ್

ರಾಜ್ಯದಲ್ಲಿ ಗೋಹತ್ಯೆ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಅವರು ಹೇಳಿದರು.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪಶುಪಾಲನಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿ ಹಂತದ ಅಧಿಕಾರಿಗಳು ಇಲಾಖೆಯ ಯೋಜನೆಗಳ ಮಾಹಿತಿ ಅರಿತು ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ಸರಿಯಲ್ಲ ಎಂದರು.

ಪ್ರಾಣಿಗಳ ರಕ್ಷಣೆಗಾಗಿ ಹಾಗೂ ಪ್ರಾಣಿಹಿಂಸೆ ತಡೆಯುವ ಕಾನೂನುಗಳನ್ನು ಇನ್ನಷ್ಟು ಬಿಗಿಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶನದಂತೆ ಇಲಾಖಾ ಸಚಿವರು ಹಾಗೂ ನಿವೃತ್ತ ನ್ಯಾಯಾಧೀಶರನ್ನೊಳಗೊಂಡಂತೆ 28ಜನ ಸದಸ್ಯರನ್ನೊಳಗೊಂಡ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ. ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲಾಗುವುದು ಎಂದರು.
ಗಾಂಧೀಜಯಂತಿಗೂ ಮೊದಲು ಶಿವಮೊಗ್ಗದಲ್ಲಿ ಗೋಶಾಲೆಗೆ ಸ್ಥಳ ಗುರುತಿಸಿ ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಅವರು, ಪ್ರಾಣಿ ಕಲ್ಯಾಣ ಮಂಡಳಿಯ ಸಭೆಗಳನ್ನು ನಡೆಸುವಂತೆ ಹಾಗೂ ಇಲಾಖೆಯ ಇತರೆ ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ಇಲಾಖಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಆ್ಯಂಬುಲೆನ್ಸ್ ವಿತರಣೆ   

ಪಶುಪಾಲಕರು, ರೈತರು, ಜಾನುವಾರು ಸಾಕಾಣಿಕೆಯಲ್ಲಿ ತೊಡಗಿರುವವರಿಗೆ ಜಾನುವಾರುಗಳ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಬೆಂಗಳೂರು ಜಿಲ್ಲೆಗೆ 10ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಒಂದರಂತೆ ಒಟ್ಟು 41 ಆ್ಯಂಬುಲೆನ್ಸ್ ನೀಡಲಾಗಿದೆ. ಈ ಯೋಜನೆ ದೇಶದಲ್ಲಿಯೇ ಮೊದಲು ಅನುಷ್ಠಾನಕ್ಕೆ ತಂದ ರಾಜ್ಯ ನಮ್ಮದು ಎಂಬುದು ಹರ್ಷದ ಸಂಗತಿ ಎಂದರು.
ಸಹಾಯವಾಣಿ :

ಜಾನುವಾರುಗಳಿಗೆ ಸಕಾಲದಲ್ಲಿ ಅಗತ್ಯ ಸೇವೆ ನೀಡಲು ಅನುಕೂಲವಾಗುವಂತೆ 1962ಸಹಾಯವಾಣಿಯನ್ನು ಆರಂಭಿಸಲಾಗಿದೆ. ಅರ್ಹ ರೈತರು ಈ ಸಂಖ್ಯೆಗೆ ಉಚಿತವಾಗಿ ಕರೆಮಾಡಿ ಪಶುವೈದ್ಯ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದ ಅವರು, ಈ ವಾಹನ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲಿದೆ. ರೈತರ ಅಗತ್ಯಗಳಿಗೆ ಸಂಚಾರಿ ಪಶು ಆಸ್ಪತ್ರೆ ಮನೆಬಾಗಿಲಿಗೆ ತೆರಳಿ ಸೇವೆ ನೀಡಲಿದೆ. ಈ ಅಂಬುಲೆನ್ಸ್‌ನಲ್ಲಿ ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗಶಾಲೆ, ಸ್ಕ್ಯಾನಿಂಗ್ ಹಾಗೂ ತುರ್ತು ಚಿಕಿತ್ಸಾ ಘಟಕದೊಂದಿಗೆ ಅಗತ್ಯ ಔಷಧಿ ಹಾಗೂ ಚಿಕಿತ್ಸಾ ಸಲಕರಣೆಗಳನ್ನೊಳಗೊಂಡಿದೆ ಎಂದು ತಿಳಿಸಿದರು.
ಪಶು ಇಲಾಖೆಯಲ್ಲಿ ಅರ್ಹರಿಗೆ ಬಡ್ತಿ ನೀಡಿ ಆಡಳಿತ ಯಂತ್ರಕ್ಕೆ ಚುರುಕು ನೀಡಲಾಗಿದೆ. ಇದರೊಂದಿಗೆ ಇಲಾಖೆಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗಿದೆ ಎಂದರು.
ಕಟ್ಟಡಗಳ ನಿರ್ಮಾಣ :

ಪಶು ಇಲಾಖೆಯಿಂದ ಅನ್ಯ ಇಲಾಖೆಗಳಿಗೆ ಎರವಲು ಸೇವೆಗಾಗಿ ಹೋಗಿರುವ ಎಲ್ಲಾ ಸಿಬ್ಬಂಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಸಕಾಲದಲ್ಲಿ ಹಿಂದಿರುವ ಕರ್ತವ್ಯ ನಿರ್ವಹಿಸದಿರುವ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ. ಗೋಹತ್ಯೆ ನಿಯಂತ್ರಣ ಕೇವಲ ಪೊಲೀಸ್ ಇಲಾಖೆಯ ಕಾರ್ಯವಲ್ಲ. ಪಶು ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಹಾಗೂ ಸಾರ್ವಜನಿಕರೂ ಈ ಪವಿತ್ರ ಕಾರ್ಯದಲ್ಲಿ ಕೈಜೋಡಿಸಬೇಕಾದ ಅಗತ್ಯವಿದೆ. ರಾಜ್ಯದ ಎಲ್ಲಾ ಗೋಮಾಳಗಳ ಸಮೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಒತ್ತುವರಿಯಾಗಿರುವ ಗೋಮಾಳಗಳ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್, ಎಂ.ಎ.ಡಿ.ಬಿ. ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಅಪರ ಜಿಲ್ಲಾಧಿಕಾರಿ  ಅನುರಾಧ ಜಿ., ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ  ಡಾ. ಶಿವಯೋಗಿ ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Ad Widget

Related posts

ಎಲ್ಲಾ ಧರ್ಮದ ಸಾರ ಸಹಬಾಳ್ವೆ: ಮರುಳಸಿದ್ಧ ಶ್ರೀ

Malenadu Mirror Desk

ಮೀಸಲು ಹೆಚ್ಚಳಕ್ಕೆ ರೇಣುಕಾನಂದ ಸ್ವಾಮೀಜಿ ಮನವಿ

Malenadu Mirror Desk

ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣದ ಅಗತ್ಯವಿದೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.