Malenadu Mitra
ಶಿವಮೊಗ್ಗ ಹೊಸನಗರ

ರಿಪ್ಪನ್ ಪೇಟೆ: ಬಂಡಿ,ಕಲಗೋಡು, ತಿಮ್ಮಪ್ಪ ಪ್ರಬಲ ಆಕಾಂಕ್ಷಿಗಳು

ಜಿಲ್ಲಾ ಪಂಚಾಯಿತಿ ಕ್ಷೇತ್ರ ಕರಡು ಮೀಸಲು ಪ್ರಕಟವಾಗಿದೆ. ಸರಕಾರ ಡಿಸೆಂಬರ್‍ತನಕ ಚುನಾವಣೆ ಇಲ್ಲ ಎಂದು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿದೆ. ಆದರೆ ಈಗ ಗೊತ್ತುಮಾಡಿರುವ ಮೀಸಲಿನಂತೆ ಸಂಭಾವ್ಯ ಅಭ್ಯರ್ಥಿಗಳು ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್‍ಪೇಟೆ ಕ್ಷೇತ್ರ ಪ್ರಕಟಿತ ಮೀಸಲಿನಂತೆ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದೆ.

ಹೊಸನಗರ ತಾಲೂಕಿನ ನಾಲ್ಕು ಕ್ಷೇತ್ರಗಳ ಪೈಕಿ ಇದೊಂದೇ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಎಲ್ಲ ಪಕ್ಷಗಳ ಎರಡನೇ ಹಂತದ ನಾಯಕರುಗಳು ಈ ಕ್ಷೇತ್ರದತ್ತ ಮುಖಮಾಡಿದ್ದಾರೆ. ಕಾಂಗ್ರೆಸ್‍ನಿಂದ ಇದೇ ಕ್ಷೇತ್ರದ ಬಂಡಿ ರಾಮಚಂದ್ರ ಅವರು ಈಗಾಗಲೇ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರವಾಸ ಮಾಡಿ ತಮ್ಮ ಬೆಂಬಲಿಗರಲ್ಲಿ ತಮ್ಮ ಉಮೇದುವಾರಿಕೆಯನ್ನು ರುಜುವಾತುಪಡಿಸುತ್ತಿದ್ದಾರೆ. ಎಂದಿನ ತಮ್ಮ ಸರಳ ಸಜ್ಜನಿಕೆಯ ನಡೆಯಿಂದ ಜನರನ್ನು ತಲುಪುತಿದ್ದಾರೆ.


ಕಾಂಗ್ರೆಸ್‍ನ ಪ್ರಭಾವಿ ಮುಖಂಡ ಕಲಗೋಡು ರತ್ನಾಕರ್ ಹಿಂದೊಮ್ಮೆ ಕಾಂಗ್ರೆಸ್‍ನಿಂದ ಇದೇ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರು. ಆಗ ಬಂಡಿರಾಮಚಂದ್ರ ಅವರಿಗೆ ಟಿಕೆಟ್ ಕೈತಪ್ಪುವಂತೆ ಮಾಡಿ ಅವರು, ಬಂಡಾಯ ಸ್ಪರ್ಧೆಗೂ ಕಾರಣವಾಗಿದ್ದರು. ಈ ಬಾರಿಯೂ ರತ್ನಾಕರ್ ಆ ಕ್ಷೇತ್ರದ ಮೇಲೆ ಕಣ್ಣಿದ್ದು, ಬಂಡಿ ಮತ್ತವರ ಸಂಬಂಧ ಈಗ ಚೆನ್ನಾಗಿದ್ದು, ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯುವ ಹಂಬಲದಲ್ಲಿದ್ದಾರೆ. ಪಕ್ಷದಲ್ಲೂ ಪ್ರಭಾವಿಯಾಗಿರುವ ಮತ್ತು ಉತ್ತಮ ಕೆಲಸಗಾರ ಎಂದೇ ಹೆಸರಾಗಿರುವ ರತ್ನಾಕರ್ ಅವರಿಗೆ ಹರಮಘಟ್ಟದಲ್ಲಿಯೂ ಸ್ಪರ್ಧೆ ಮಾಡುವಷ್ಟು ಜನಪ್ರಿಯತೆ ಇದೆ ಎಂಬುದು ಅವರ ಬೆಂಬಲಿಗರ ವಾದ. ಇನ್ನು ಇದೇ ಪಕ್ಷದ ಈಶ್ವರಪ್ಪಗೌಡ್ರು ಅನುಭವ ಹಾಗೂ ಪಕ್ಷ ನಿಷ್ಠೆ ಮೇಲೆ ಅವಕಾಶ ಕೇಳುತ್ತಿದ್ದಾರೆ.

ಪರಿವಾರದ ಅಭ್ಯರ್ಥಿ ಬೆಳ್ಳೂರು ತಿಮ್ಮಪ್ಪ

ರಿಪ್ಪನ್‍ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವೂ ಪ್ರಬಲ ಅಭ್ಯರ್ಥಿಯನ್ನು ಹಾಕಲಿದೆ. ಈ ಪಕ್ಷದ ತಾಲೂಕು ಪಂಚಾಯಿತಿ ಅಧ್ಯಕ್ಷ ಆಲುವಳ್ಳಿ ವೀರೇಶ್ ಹಾಗೂ ಬೆಳ್ಳೂರು ತಿಮ್ಮಪ್ಪ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈಡಿಗ ಸಮುದಾಯ ಪ್ರತಿನಿಧಿಸುವ ತಿಮ್ಮಪ್ಪ ಈ ಬಾರಿ ಪಕ್ಷ ಅವಕಾಶ ಕೊಟ್ಟರೆ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ. 1993 ರಿಂದಲೂ ಸಕ್ರಿಯ ರಾಜಕಾರಣದಲ್ಲಿರುವ ಅವರು, ಜನರ ಸಮಸ್ಯೆಗಳನ್ನು ಬುಡಮಟ್ಟದಲ್ಲಿ ಬಲ್ಲರು. ಗ್ರಾಮಪಂಚಾಯಿತಿ ಸದಸ್ಯರಾಗಿ ಎರಡು ಬಾರಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಆರ್‍ಎಸ್‍ಎಸ್ ಕಟ್ಟಾಳು ಆಗಿರುವ ತಿಮ್ಮಪ್ಪ ಅವರು ಒಂದು ಬಾರಿ ಬಗರ್‍ಹುಕುಂ ಸಕ್ರಮೀಕರಣ ಸಮಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದು, ಆ ಭಾಗದಲ್ಲಿ ಸುಮಾರು 500 ಮಂದಿ ರೈತರಿಗೆ ಹಕ್ಕು ಪತ್ರಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಶರಾವತಿ ಸಂತ್ರಸ್ತರೂ ಸೇರಿದಂತೆ ಮಲೆನಾಡಿನ ರೈತರ ಸಾಗುವಳಿ ಭೂಮಿಯ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಅಪಾರ ಜ್ಞಾನವಿರುವ ತಿಮ್ಮಪ್ಪ ಜನರ ನಡುವೆ ಇರುವ ನನಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ.
ಸಂಘಪರಿವಾರದ ನಿಷ್ಟಾವಂತ ಕಾರ್ಯಕರ್ತರಾದ ತಿಮ್ಮಪ್ಪ ಅವರು, ಸಂಘಟನೆ ಮಾತ್ರವಲ್ಲದೆ ಬಿಜೆಪಿ ಯುವಮೋರ್ಚಾ, ರೈತ ಮೋರ್ಚಾಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಕಂದಾಯ ಹಾಗೂ ಅರಣ್ಯ ಇಲಾಖೆಯದ್ದೇ ಸಮಸ್ಯೆಗಳನ್ನು ಹಾಸು ಹೊದ್ದಿರುವ ರಿಪ್ಪನ್‍ಪೇಟೆಯಂತಹ ಕ್ಷೇತ್ರದಲ್ಲಿ ರೈತಪರ ಧ್ವನಿಯಾಗಲು ತಿಮ್ಮಪ್ಪ ಅವರನ್ನು ಅಭ್ಯರ್ಥಿಯಾಗಿಸಬೇಕೆಂಬ ಒತ್ತಾಯ ಪರಿವಾರದ ಹುಡುಗರಿಂದ ಬರುತ್ತಿದೆ. ಹಾಲಿ ಸದಸ್ಯ ಸುರೇಶ್ ಸ್ವಾಮಿರಾವ್ ಅವರಿಗೂ ಕ್ಷೇತ್ರ ಇಲ್ಲದಾಗಿದ್ದು, ಆರ್ಥಿಕವಾಗಿ ಬಲವಾದವರೇ ಬೇಕೆಂದರೆ ಈ ಕ್ಷೇತ್ರಕ್ಕೆ ಸುರೇಶ್ ಲಗ್ಗೆಯಿಟ್ಟರೂ ಆಶ್ಚರ್ಯವಿಲ್ಲ. ಚುನಾವಣೆ ದೂರವಿದ್ದರೂ, ಕ್ಷೇತ್ರದಲ್ಲಿ ಈ ಪರಿಯ ಚರ್ಚೆಗಳಂತೂ ಚಾಲ್ತಿಯಲ್ಲಿವೆ.

Ad Widget

Related posts

ಚಿತ್ರ ಮುಗಿಸಿದ ಚಿತ್ತಾರಗಿತ್ತಿ, ಚಿತ್ರಸಿರಿಯ ಗೌರಮ್ಮ ಇನ್ನು ನೆನಪು,ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಕಲಾವಿದೆ

Malenadu Mirror Desk

ರೋಹಿತ್ ಚಕ್ರತೀರ್ಥ ಬಂಧಿಸಲು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

Malenadu Mirror Desk

ಕಾಗೋಡು ತಿಮ್ಮಪ್ಪ ಯೋಗಕ್ಷೇಮ ವಿಚಾರಿಸಿದ ಹೋಮ್ ಮಿನಿಸ್ಟರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.