ಶಿವಮೊಗ್ಗ, ಕುವೆಂಪು ವಿವಿ ಕುಲಸಚಿವ ಎಸ್.ಎಸ್.ಪಾಟೀಲ್ ಅವರನ್ನು ಮತ್ತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವ ಸರಕಾರ ಅವರ ಜಾಗಕ್ಕೆ ಶಿವಮೊಗ್ಗ ಎಡಿಸಿಯಾಗಿದ್ದ ಅನುರಾಧಾ ಅವರನ್ನು ವರ್ಗಾವಣೆಮಾಡಲಾಗಿದೆ.
ಕಳೆದ ಮೂರು ವರ್ಷಗಳಿಂದ ಶಿವಮೊಗ್ಗ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಅನುರಾಧಾ ಅವರು ಹಿರಿಯ ಶ್ರೇಣಿ ಕೆ.ಎ.ಎಸ್.ಅಧಿಕಾರಿಯಾಗಿದ್ದು, ಕುವೆಂಪು ವಿವಿ ಆಡಳಿತ ವಿಭಾಗದ ಕುಲಸಚಿವರಾಗಿ ವರ್ಗಾವಣೆಯಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಜನಾ ನಿರ್ದೇಶಕರಾಗಿದ್ದ ನಾಗೇಂದ್ರ ಹೊನ್ನಳ್ಳಿ ಅವರು ನೂತನ ಎಡಿಸಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಎರಡೂ ಆದೇಶಗಳನ್ನು ಸರಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ಸೋಮವಾರ ಹೊರಡಿಸಿದ್ದಾರೆ.
ಕುವೆಂಪು ವಿವಿ ಕುಲಪತಿ ಪ್ರೊ.ವೀರಭದ್ರಪ್ಪ ಹಾಗೂ ಪ್ರೊ.ಎಸ್.ಎಸ್.ಪಾಟೀಲ್ ಅವರ ನಡುವೆ ಭಿನ್ನಾಭಿಪ್ರಾಯವಿದ್ದು ಇತ್ತಿಚೆಗಷ್ಟೆ ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಒಂದೇ ದಿನದಲ್ಲಿ ಪಾಟೀಲ್ ಅವರು ತಮ್ಮ ವರ್ಗಾವಣೆ ಆದೇಶವನ್ನು ರದ್ದುಮಾಡಿಸಿಕೊಂಡು ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.