ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ವಿಚಾರಕ್ಕೆ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮಲೆನಾಡು ವೀರಶೈವ ಮಠಾಧೀಶರ ಪರಿಷತ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ನಗರದ ಬೆಕ್ಕಿನಕಲ್ಮಠದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಮಲೆನಾಡು ವೀರಶೈವ ಮಠಾದೀಶರು,ಬಿಜೆಪಿ ಹೈಕಮಾಂಡ್ ವಿರುದ್ದ ಗುಡುಗಿದೆ. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿರುವುದು ಯೋಗಾಯೋಗ.ರಾಜ್ಯದ ಅಭಿವೃದ್ದಿಗಾಗಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು ಎಂದು ಬೇಡಿಕೆ ಇಟ್ಟಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮಲೆನಾಡು ವೀರಶೈವ ಮಠಾಧೀಶರ ಪರಿಷತ್ ಅಧ್ಯಕ್ಷರಾದ, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.ರಾಜ್ಯದ ಅಭಿವೃದ್ಧಿಯೇ ಗುರಿ ಎಂದು ಕೆಲಸ ಮಾಡುತ್ತಿದ್ದಾರೆ.ಯಡಿಯೂರಪ್ಪ ಉಪಮುಖ್ಯಮಂತ್ರಿಯಾದಾಗಲೇ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಗೆ ಅಡಿಗಲ್ಲು ಹಾಕಿದರು.ಯಡಿಯೂರಪ್ಪ ಅವರಿಗೆ ಅಭಿವೃದ್ಧಿ ಬಗ್ಗೆ ಇರುವ ಕಮಿಟ್ ಮೆಂಟ್ ಬೇರೆ ರಾಜಕಾರಣಗಳಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಿನಾಕಾರಣ ಅಧಿಕಾರದಿಂದ ಕೆಳಗಿಸಲಾಗಿತ್ತಿದೆ.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ.ಆರೋಗ್ಯ ಸರಿ ಇಲ್ಲ ಎಂದು ಅಧಿಕಾರದಿಂದ ಕೆಳಗಿಳಿಸುತ್ತಾರೆಯೇ ಎಂದು ಪ್ರಶ್ನಿಸಿದ ಸ್ವಾಮೀಜಿ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಸಾಯುವವರೆಗೆ ಅಧಿಕಾರ ನಡೆಸಿದ್ದರು.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎನ್ನುವುದಾದರೆ ಇನ್ನೂ ಯಡಿಯೂರಪ್ಪ ಅವರಲ್ಲಿ ಉತ್ಸಹ ಕುಗ್ಗಿಲ್ಲ.ಯಡಿಯೂರಪ್ಪ ಅವರಿಗೆ ಇನ್ನೂ ಎರಡು ವರ್ಷ ಅಧಿಕಾರ ಪೂರೈಸಲು ಬಿಟ್ಟರೆ ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತವೆ ಎಂದರು.
ವೀರಶೈವ ಎಂಬ ಕಾರಣಕ್ಕೆ ಬೆಂಬಲಿಸುತ್ತಿಲ್ಲ
ಯಡಿಯೂರಪ್ಪ ಅವರು ವೀರಶೈವ ಎಂಬ ಕಾರಣಕ್ಕೆ ಸ್ವಾಮೀಜಿಗಳು ಬೆಂಬಲಿಸುತ್ತಿಲ್ಲ.ಬದಲಿಗೆ ಯಡಿಯೂರಪ್ಪ ಅವರು ಕೆಲಸಗಾರ ಎಂದು ಬೆಂಬಲಿಸುತ್ತಿದ್ದೇವೆ.ಸಾಮಾನ್ಯ ವ್ಯಕ್ತಿಯೂ ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿದ್ದಾರೆ. ಮಠಾದೀಶರು ರಾಜಕೀಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಮನೋಭಾವ ಬೇಡ.ಯಡಿಯೂರಪ್ಪ ಅವರ ಕನಸು ನನಸಾಗಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ತೊಗರ್ಸಿ ಪಂಚವಣ್ಣಿಗೆ ಮಠದ ಚನ್ನವೀರದೇಶಿ ಕೇಂದ್ರ ಸ್ವಾಮೀಜಿ, ಬಳ್ಳಿಗಾವಿಯ ಗೇರುಕೊಪ್ಪ ಮಠದ ಶಿವಲಿಂಗೇಶ್ವರ ಮಹಾಸ್ವಾಮೀಜಿ, ಕಕೇನಂದಿಹಳ್ಳಿಯ ದುಗ್ಲಿ ಮಠದ ರೇವಣ್ಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಡೆ ಮಠದ ಡಾ.ಮಹಾಂತ ಸ್ವಾಮೀಜಿ, ಶಿರಾಳಕೊಪ್ಪದ ವಿರಕ್ತ ಮಠದ ಸಿದ್ದೇಶ್ವರ ಸ್ವಾಮೀಜಿ, ತಾಳಗುಪ್ಪದ ಸಿದ್ದೇಶ್ವರ ಮಹಾಸ್ವಾಮೀಜಿ, ಮೂಡಿ ಮಠದ ಸದಾಶಿವಸ್ವಾಮೀಜಿ, ಹಿರೇಮಾಗಡಿ ಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ತೊಗರ್ಸಿಯ ತ್ಯಾತನೂರು ಹಿರೇಮಠದ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಮಠದ ಷ.ಬ್ರ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ,ಶಾಂತಪುರದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ,ತೊಗರ್ಸಿಯ .ಮಹಾಂತ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ,ಲಕ್ಕೊಳ್ಳಿ ಸ್ವಪ್ತ ವೃಷಭ ಸೇನಭತ್ಯಾರಕ ಸ್ವಾಮೀಜಿ, ಹಾರನಹಳ್ಳಿಯ ರಾ.ಲಿಂಗೇಶ್ವರ ಮಠದ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ,ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ,ಹಾರನಹಳ್ಳಿ ಚೌಕಿಮಠದ ನೀಲಕಂಠ ಸ್ವಾಮೀಜಿ, ಅರಕೆರೆಯ ಕಾಡಸಿದ್ದೇಶ್ವರ ಸ್ವಾಮೀಜಿ,ಬಸವಕೇಂದ್ರದ ಬಸವಮರುಳ ಸಿದ್ದ ಸ್ವಾಮೀಜಿ,ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಉಪಸ್ಥಿತರರಿದ್ದರು.