Malenadu Mitra
ರಾಜ್ಯ ಶಿವಮೊಗ್ಗ

ಸಿಗಂದೂರು ಮುಜರಾಯಿಗೆ ಸೇರಿಸುವ ಪ್ರಯತ್ನದ ವಿರುದ್ಧ ದೊಡ್ಡ ಹೋರಾಟ, ಗಂಗಾವತಿ ಈಡಿಗರ ಚಿಂತನ-ಮಂಥನ ಸಭೆಯಲ್ಲಿ ಗುತ್ತೇದಾರ್ ಎಚ್ಚರಿಕೆ

ಈಡಿಗ ಸಮುದಾಯದ ಆಡಳಿತ ಮಂಡಳಿ ಇರುವ ಸಿಗಂದೂರು ಶ್ರೀ ಚೌಡೇಶ್ವರಿ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಪ್ರಯತ್ನವನ್ನು ನಿಲ್ಲಿಸದಿದ್ದಲ್ಲಿ ಸಮುದಾಯದಿಂದ ದೊಡ್ಡ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ್ ಗುಡುಗಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಭಾನುವಾರ ನಡೆದ ಕಲ್ಯಾಣ ಕರ್ನಾಟಕ ಭಾಗದ ಈಡಿಗ ಸಮುದಾಯದ ಪ್ರಮುಖರ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿಗಂದೂರು ಚೌಡೇಶ್ವರಿ ದೇಗುಲ ಈಗ ಅಭಿವೃದ್ಧಿ ಹೊಂದಿದೆ. ಧರ್ಮದರ್ಶಿ ಡಾ.ರಾಮಪ್ಪ ಮತ್ತವರ ಬಳಗದ ಶ್ರಮ ಹಾಗೂ ತಾಯಿ ಚೌಡೇಶ್ವರಿ ಕೃಪೆಯಿಂದ ಪ್ರಸಿದ್ದಿಗೆ ಬಂದ ಕ್ಷೇತ್ರದ ಮೇಲೆ ಕೆಲವರ ಕಣ್ಣು ಬಿದ್ದಿದೆ. ಆ ವ್ಯಕ್ತಿ ಮತ್ತು ಸಮುದಾಯಗಳು ಸರಕಾರದ ಮೇಲೆ ಒತ್ತಡ ಹಾಕುತ್ತಿರುವುದರಿಂದ ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಹುನ್ನಾರ ನಡೆದಿದೆ ಇದನ್ನು ಈಡಿಗ ಸಮಾಜ ಖಂಡಿಸುತ್ತದೆ ಎಂದು ಹೇಳಿದರು.

ಎಲ್ಲಾ 26 ಉಪಪಂಗಡಗಳೂ ಸೇರಿ ರಾಜ್ಯದಲ್ಲಿ 80 ಲಕ್ಷ ಈಡಿಗರಿದ್ದಾರೆ. ಇಂತಹ ದೊಡ್ಡ ಸಮುದಾಯವನ್ನು ಸರಕಾರ ನಿರ್ಲಕ್ಷ್ಯ ಮಾಡಿದೆ ಎಂಬ ಭಾವನೆ ಸಮಾಜದವರಿಗೆ ಬಂದಿದೆ. ಈ ಬಗ್ಗೆ ಮುಂದಿನ ರೂಪು ರೇಷೆ ರೂಪಿಸಲು ಇಲ್ಲಿ ಸಭೆ ಆಯೋಜಿಸಲಾಗಿದೆ. ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಒತ್ತಾಯವನ್ನೂ ನಗಣ್ಯಮಾಡಲಾಗಿದೆ. ಈಗ ಸಮುದಾಯದ ಅಸ್ಮಿತೆಯಾದ ದೇಗುಲದ ಮೇಲೆ ಕೆಲ ಹಿತಾಸಕ್ತಿಗಳು ಪಿತೂರಿ ಮಾಡುತ್ತಿವೆ.ಸರಕಾರ ಈ ಕುತಂತ್ರಿಗಳಿಗೆ ಮನ್ನಣೆ ನೀಡಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಶಾಸಕ ಮಧುಬಂಗಾರಪ್ಪ ಮಾತನಾಡಿ, ಸಮಾಜದ ಎಲ್ಲಾ ಉಪಪಂಗಡಗಳೂ ಒಂದಾಗಿ ನಮ್ಮ ಹಕ್ಕನ್ನು ಕೇಳುವುದರಲ್ಲಿ ನ್ಯಾಯವಿದೆ. ಉಪಪಂಗಡಗಳ ಹೆಸರಲ್ಲಿ ಹಂಚಿಹೋಗಿರುವ ನಾವು ಒಗ್ಗಾಟಾಗಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಎಲ್ಲರೂ ಶ್ರಮವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದೊಂದು ಆಂದೋಲನ ಆಗಬೇಕು ಎಂದು ಹೇಳಿದರು.
ಮುಖಂಡರಾದ ಶ್ರೀನಾಥ್‍ರಾಮುಲು ಅವರು ಮಾತನಾಡಿ, ಈಡಿಗರು ಸಂಘಟನೆ ಮತ್ತು ಶಿಕ್ಷಣದಿಂದ ಮುಂದೆ ಬರಬೇಕು. ಸರಕಾರದಿಂದ ಪಡೆಯುವ ಸೌಲಭ್ಯಗಳಿಗಾಗಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕು ಎಂದು ಹೇಳಿದರು.

ಶ್ರೀ ನಾರಾಯಣಗುರು ವಿಚಾರವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ಮಾತನಾಡಿ, ಉಪ ಪಂಗಡಗಳೆಲ್ಲವೂ ಸೇರಿ ಶ್ರೀ ನಾರಾಯಣಗುರುಗಳ ಆದರ್ಶ ಪರಿಪಾಲನೆ ಮಾಡಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಮುದಾಯದ ಸಂಘಟನೆ ಆಗಬೇಕಿದೆ.ಸರಕಾರಗಳು ನಮ್ಮ ಸಮುದಾಯವನ್ನು ಬಳಸಿಕೊಂಡು ನ್ಯಾಯವಾಗಿ ಧಕ್ಕಬೇಕಾದ ಸೌಲಭ್ಯ ಕೊಡುತ್ತಿಲ್ಲ. ನಮ್ಮ ಧಾರ್ಮಿಕ ಕ್ಷೇತ್ರದ ಮೇಲೆ ಕೆಂಗಣ್ಣು ಬೀರುವುದನ್ನು ಸಮುದಾಯ ಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಪ್ರಣವಾನಂದ ಸ್ಚಾಮೀಜಿ, ಅರುಣಾನಂದ ಸ್ವಾಮೀಜಿ,ಸತ್ಯಾನದಸ್ವಾಮೀಜಿ, ವಿಖ್ಯಾತಾನಂದಸ್ವಾಮೀಜಿ, ಶ್ರೀಕ್ಷೇತ್ರ ಸಿಗಂದೂರಿನ ಚೌಡಮ್ಮದೇವಿ ಟ್ರಷ್ಟ್‍ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಡಾ.ತಿಮ್ಮೇಗೌಡ, ರಕ್ಷಿತ್ ಶಿವರಾಂ, ರಾಜಶೇಖರ ಕೋಟ್ಯಾನ್, ಶ್ರೀಧರ್ ಹುಲ್ತಿಕೊಪ್ಪ, ಸೈದಪ್ಪ ಗುತ್ತೇದಾರ್ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಮಾಜ ಮುಂದೆ ಕೈಗೊಳ್ಳಬೇಕಾದ ಸಂಘಟನೆ ಮತ್ತು ಹೋರಾಟ ಕುರಿತ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಮುದಾಯದ ಅಸ್ಮಿತೆಯಾದ ದೇಗುಲದ ಮೇಲೆ ಕೆಲ ಹಿತಾಸಕ್ತಿಗಳು ಪಿತೂರಿ ಮಾಡುತ್ತಿವೆ.ಸರಕಾರ ಈ ಕುತಂತ್ರಿಗಳಿಗೆ ಮನ್ನಣೆ ನೀಡಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ- ಮಾಲೀಕಯ್ಯ ಗುತ್ತೇದಾರ್ ಮಾಜಿ ಶಾಸಕ

ನಮ್ಮ ಸಮುದಾಯವನ್ನು ಬಳಸಿಕೊಂಡು ನ್ಯಾಯವಾಗಿ ಧಕ್ಕಬೇಕಾದ ಸೌಲಭ್ಯ ಕೊಡುತ್ತಿಲ್ಲ. ನಮ್ಮ ಧಾರ್ಮಿಕ ಕ್ಷೇತ್ರದ ಮೇಲೆ ಕೆಂಗಣ್ಣು ಬೀರುವುದನ್ನು ಸಮುದಾಯ ಬಲವಾಗಿ ಖಂಡಿಸುತ್ತದೆಸತ್ಯಜಿತ್ ಸುರತ್ಕಲ್

Ad Widget

Related posts

ನಮಗೇ ಹೆಚ್ಚು ಜಯ, ಚೀಟಿ ಮೂಲಕ ಮೀಸಲು

Malenadu Mirror Desk

ಭೂಮಿ ಹಕ್ಕಿಗಾಗಿ ಶರಾವತಿ ಸಂತ್ರಸ್ಥರ ಪ್ರತಿಭಟನೆ

Malenadu Mirror Desk

ಮಾಸ ನಂಜುಂಡಸ್ವಾಮಿಗೆ ಸನ್ಮಾನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.