ಮಲೆನಾಡಿನಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದು, ನದಿಗಳ ಪ್ರವಾಹವೂ ತಗ್ಗಿದೆ. ಶರಾವತಿ ಕಣಿವೆಯಲ್ಲಿ ಮಳೆಯ ಬಿರುಸು ಕಡಿಮೆಯಾಗಿದ್ದು, ಲಿಂಗನಮಕ್ಕಿ ಜಲಾಶಯದ ಒಳ ಹರಿವು ಕಡಿಮೆಯಾಗಿದೆ. ಭಾನುವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ ಲಿಂಗನಮಕ್ಕಿ ಜಲಾಶಯಕ್ಕೆ 1803.85 ಅಡಿ ನೀರು ಬಂದಿದೆ.
ಒಳಹರಿವಿನ ಪ್ರಮಾಣ ಲಕ್ಷದಿಂದ 39086 ಕ್ಯೂಸೆಕ್‍ಗೆ ಇಳಿದಿದೆ. ಡ್ಯಾಮಿನ ಗರಿಷ್ಠ ಮಟ್ಟ 1819 ಅಡಿಗಳಾಗಿದೆ.
ತುಂಗಾ ಮತ್ತು ಭದ್ರಾ ನದಿ ಜಲಾನಯನ ಪ್ರದೇಶಗಳಲ್ಲಿಯೂ ಮಳೆ ಕೊಂಚ ತಗ್ಗಿದೆ. ಭದ್ರಾ ನದಿಗೆ ಭಾನುವಾರ ಬೆಳಗ್ಗೆ ಹೊತ್ತಿಗೆ 177.6 ಅಡಿ ನೀರು ಬಂದಿದೆ. 33431 ಕ್ಯೂಸೆಕ್ ಒಳಹರಿವಿದ್ದು, ಸಂಜೆ ವೇಳೆಗೆ ಡ್ಯಾಮಿನ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ
ತುಂಗಾ ನಂದಿ ಇನ್ನೂ ತನ್ನ ಗಾಂಭೀರ್ಯ ಕಾಪಾಡಿಕೊಂಡಿದ್ದು, 65507 ಕ್ಯೂಸೆಕ್ ಒಳಹರಿವಿದೆ. ನದಿಯಿಂದ 72717 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ನದಿಯ ಇಕ್ಕೆಲಗಳ ಜನವಸತಿ ಪ್ರದೇಶಗಳಿಗೆ ಸುರಕ್ಷತೆಯಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮಳೆ ಹಾಗೂ ಜಲಪಾತ ನೋಡಲು ಪ್ರವಾಸಿಗರು ಮಲೆನಾಡಿನತ್ತ ಧಾವಿಸುತ್ತಿದ್ದು, ಈ ಭಾಗದ ಕೊಲ್ಲೂರು, ಸಿಗಂದೂರು ದೇವಸ್ಥಾನಗಳಿಗೂ ಭಕ್ತಾದಿಗಳು ಆಗಮಿಸಲಾರಂಭಿಸಿದ್ದಾರೆ. ಜೋಗ್ ಫಾಲ್ಸ್ ನೋಡಲು ಜಿಲ್ಲೆ ಹಾಗೂ ಹೊರ ಜಿಲ್ಲೆಯ ಪ್ರವಾಸಿಗರು ಧಾವಿಸುತ್ತಿದ್ದಾರೆ. ಆದರೆ ಮೋಡ ಮಂಜಿನಾಟದಲ್ಲಿ ಫಾಲ್ಸ್ ಕಣ್ಣಿಗೆ ಕಾಣುವುದೇ ದುರ್ಲಬವಾಗಿದೆ.