ಬೊಮ್ಮಾಯಿ ಸಂಪುಟ ಸೇರುವವರಾರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೈ ಕಮಾಂಡ್ ಭೇಟಿಗೆ ಹೋಗಿದ್ದು, ವರಿಷ್ಠರ ಆದೇಶದಂತೆಯೇ ಬೊಮ್ಮಾಯಿ ಬ್ರಿಗೇಡ್(ಸಂಪುಟ) ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹಂಗಿನರಮನೆಯಲ್ಲಿಯೇ ಅಧಿಕಾರ ನಡೆಸಿದ್ದ ಯಡಿಯೂರಪ್ಪ ಅವರು ವಲಸಿಗರಿಗೇ ಹೆಚ್ಚು ಸ್ಥಾನಗಳನ್ನು ನೀಡಿದ್ದರು. ಇದರಿಂದ ಮೂಲ ಬಿಜೆಪಿಗರು ಈಗಲಾದರೂ ಗೂಟದ ಕಾರು ಸಿಕ್ಕೀತೆ ಎಂಬ ಕನವರಿಕೆಯಲ್ಲಿದ್ದಾರೆ. ಈ ನಡುವೆ ಯಡಿಯೂರಪ್ಪ ಮತ್ತು ಹೈಕಮಾಂಡ್ ವಲಯದಲ್ಲಿ ಲಾಬಿ ಕೂಡ ಆರಂಭವಾಗಿದೆ.
ರಾಜ್ಯ ಬಿಜೆಪಿ ಶಕ್ತಿ ಕೇಂದ್ರ ಶಿವಮೊಗ್ಗದಲ್ಲಿ ಈ ಬಾರಿ ಯಾರು ಸಚಿವರಾಗತ್ತಾರೆ ಎಂಬ ಕುತೂಹಲ ಮೂಡಿದ್ದು, ಯಡಿಯೂರಪ್ಪ ಹೇಳಿದವರನ್ನು ಸಚಿವರನ್ನಾಗಿ ಮಾಡಬಹುದು ಎಂಬ ಮಾತು ಕೇಳಿ ಬರುತ್ತಿದೆ. ಈ ನಡುವೆ ಎಲ್ಲ ಮುಖಂಡರುಗಳು ತಮ್ಮ ತಮ್ಮ ವಲಯದಲ್ಲಿ ನಾಯಕತ್ವವನ್ನು ಓಲೈಸುವಲ್ಲಿ ನಿರತರಾಗಿದ್ದಾರೆ.
ಪ್ರದೇಶ,ಜಾತಿವಾರು ಪ್ರಾಬಲ್ಯ
ಪ್ರದೇಶ, ಜಾತಿ, ಧರ್ಮ, ವರ್ಗ ಹಾಗೂ ಸಂಘಪರಿವಾರದ ಒಲವಿನ ಆಧಾರದ ಮೇಲೆ ಸಚಿವ ಹುದ್ದೆಗಳನ್ನು ನೀಡುವುದು ಬಿಜೆಪಿಯ ವಾಡಿಕೆ. ಯಡಿಯೂರಪ್ಪ ಅವಧಿಯಲ್ಲಿ ಅವರ ಮೂಗಿನ ನೇರಕ್ಕೇ ಎಲ್ಲವೂ ಆಗಿತ್ತು. ಆದರೆ ಈ ಬಾರಿ ಸ್ವಚ್ಛ ಸಂಪುಟ ರಚನೆ ಮಾಡುವಂತೆ ಬಿಜೆಪಿ ಮಾತೃಸಂಘಟನೆ ಆರ್.ಎಸ್.ಎಸ್. ಈಗಾಗಲೇ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಬೊಮ್ಮಾಯಿ ಸಂಪುಟಕ್ಕೆ ಹೊಸಬರಿಗೆ ಅವಕಾಶ ಸಿಗಬಹುದೆಂದು ನಿರೀಕ್ಷಿಸಲಾಗಿದೆ.
ಸನ್ಯಾಸಿಯಲ್ಲ ಎಂದ ಈಶ್ವರಪ್ಪ
ಬಿಜೆಪಿಯ ಪ್ರಬಲ ನಾಯಕ ಹಾಗೂ ಕುರುಬ ಸಮುದಾಯದ ನೇತಾರ ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಅವರು, ಯಡಿಯೂರಪ್ಪ ನಂತರ ಮುಖ್ಯಮಂತ್ರಿ ಹುದ್ದೆಯ ಮೇಲೇ ಕಣ್ಣಿಟ್ಟಿದ್ದರು. ಆದರೆ ಅದು ಸಿಗದ ಕಾರಣ ಉಪಮುಖ್ಯಮಂತ್ರಿ ಹುದ್ದೆಯಾದರೂ ಸಿಗಲಿದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಪೂರಕವಾಗಿ ಕುರುಬ ಸಮುದಾಯದ ಸ್ವಾಮೀಜಿಗಳು ಬಿಜೆಪಿ ಕೇಂದ್ರ ನಾಯಕತ್ವಕ್ಕೆ ಸಂದೇಶವನ್ನೂ ನೀಡಿದ್ದಾರೆ. ಈಶ್ವರಪ್ಪ ಮಾತ್ರ ನಾನು ಸನ್ಯಾಸಿ ಅಲ್ಲ ಎಂದು ಹೇಳುವ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಸಂಘಪರಿವಾರದಲ್ಲಿಯೂ ಉತ್ತಮ ಬಾಂಧವ್ಯ ಹೊಂದಿರುವ ಅವರು ಡಿಸಿಎಂ ಹುದ್ದೆಗೆ ಲಾಬಿ ಮಾಡುತ್ತಿದ್ದಾರೆನ್ನಲಾಗಿದೆ. ಪ್ರಬಲ ಕುರುಬ ಸಮುದಾಯದ ಈಶ್ವರಪ್ಪರನ್ನು ಅಲಕ್ಷ್ಯ ಮಾಡುವುದೂ ಅಷ್ಟು ಸುಲಭವಲ್ಲ. ಈ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಅವರು ಈಶ್ವರಪ್ಪ ವಿಚಾರದಲ್ಲಿ ಯಾವ ಧೋರಣೆ ಹೊಂದಿದ್ದಾರೆ ಎಂಬುದೂ ಇಲ್ಲಿ ಪ್ರಮುಖವಾಗಲಿದೆ.
ಆರಗ ಜ್ಞಾನೇಂದ್ರ
ನಾಲ್ಕುಬಾರಿ ಶಾಸಕರಾಗಿ ಆಯ್ಕೆಯಾಗಿರುವ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಒಕ್ಕಲಿಗರ ಸಮುದಾಯದ ಅನೇಕ ಸಂಘಟನೆಗಳನ್ನು ಜ್ಞಾನೇಂದ್ರಣ್ಣ ಮಂತ್ರಿಯಾಗಬೇಕೆಂಬ ಒತ್ತಾಯ ಮಾಡಿವೆ. ಸಂಘಪರಿವಾರದ ಕಟ್ಟಾಳು ಆಗಿರುವ ಜ್ಞಾನೇಂದ್ರ ಅವರಿಗೆ ಸಚಿವ ಸ್ಥಾನ ನ್ಯಾಯವಾಗಿ ಸಿಗಲೇಬೇಕು. ಆದರೆ ಬಿಜೆಪಿಯಲ್ಲಿ ಒಳಜಗಳಗಳಾದ ಸಂದರ್ಭ ಜ್ಞಾನೇಂದ್ರ ಅವರು ಯಾವತ್ತೂ ತಟಸ್ಥರಾಗಿ ಉಳಿದಿದ್ದರೆ ಹೊರತು, ಯಡಿಯೂರಪ್ಪ ಪರ ಬಂದವರಲ್ಲ. ಈ ಕಾರಣದಿಂದ ಆರಗ ಮೇಲೆ ಯಡಿಯೂರಪ್ಪರ ಕೃಪೆ ಹೇಗಿದೆಯೊ ಗೊತ್ತಿಲ್ಲ.
ಎಂಪಿಎಂ ಅವಧಿಯಲ್ಲಿ ಅವ್ಯವಹಾರ ಆರೋಪ
ಶಾಸಕ ಜ್ಞಾನೆಂದ್ರ ಅವರು ಹಿಂದಿನ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಭದ್ರಾವತಿ ಎಂಪಿಎಂ ಕಾರ್ಖಾನೆ ಅಧ್ಯಕ್ಷರಾಗಿದ್ದರು. ಇನ್ನೇನು ರೋಗಪೀಡಿತ ಕಾರ್ಖಾನೆ ಉದ್ಧಾರ ಆಗಲಿದೆ ಎಂದೇ ಎಲ್ಲ ಬಯಸಿದ್ದರು. ಆದರೆ ಜ್ಞಾನೇಂದ್ರ ಅವಧಿಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿತ್ತು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ಕೂಡಾ ಈ ಆರೋಪ ಮಾಡಿದ್ದರು. ಇನ್ನು ಜ್ಞಾನೇಂದ್ರ ಅವರಿಗೆ ಪರಿವಾರದ ಬೆಂಬಲ ಇದ್ದು, ಅದರ ಒತ್ತಡ ಎಷ್ಟರ ಮಟ್ಟಿಗೆ ಫಲಕೊಡುತ್ತದೊ ನೋಡಬೇಕು
ಹರತಾಳು ಹಾಲಪ್ಪ
ಸಾಗರ ಶಾಸಕ ಹರತಾಳು ಹಾಲಪ್ಪ ಯಡಿಯೂರಪ್ಪ ಪರಮಾಪ್ತರು. ಮಾಜಿ ಸಚಿವರೂ ಆದ ಅವರು ಉತ್ತಮ ಕೆಲಸಗಾರರು ಎಂಬ ಮಾತಿದೆ. ಶಿವಮೊಗ್ಗ ಜಿಲ್ಲೆಯ ಭೂಮಿ ಸಮಸ್ಯೆಗಳ ಬಗ್ಗೆ ತಳಮಟ್ಟದಲ್ಲಿ ಅರಿವುಳ್ಳವರು. ಈಡಿಗ ಸಮುದಾಯಕ್ಕೆ ಪ್ರಾತಿನಿದ್ಯ ನೀಡುವುದಾದರೆ ಹಾಲಪ್ಪ ಮುಂಚೂಣಿಯಲ್ಲಿರುತ್ತಾರೆ. ಯಡಿಯೂರಪ್ಪ ಸಂಪುಟದಲ್ಲಿಯೇ ಸಚಿವರಾಗಬೇಕಿತ್ತು. ಆದರೆ ಈಡಿಗ ಕೋಟಾದಲ್ಲಿ ಪರಿವಾರದ ಮನುಷ್ಯ ಕೋಟ ಶ್ರೀನಿವಾಸ್ ಪೂಜಾರಿಗೆ ಅವಕಾಶ ನೀಡಲಾಗಿತ್ತು. ಈಗ ಯಡಿಯೂರಪ್ಪ ಮನಸು ಮಾಡಿದರೆ ಹಾಲಪ್ಪ ಸಚಿವರಾಗುವುದು ಖಾತರಿ. ಆದರೆ ಈ ಹಿಂದೆ ಅವರ ಮೇಲೆ ಪ್ರಕರಣವೊಂದು ದಾಖಲಾಗಿದ್ದು, ಅದು ಈಗ ನ್ಯಾಯಾಲಯ ಹಾಗೂ ಜನತಾ ನ್ಯಾಯಾಲಯ ಎರಡರಲ್ಲೂ ಇತ್ಯರ್ಥವಾಗಿದೆ. ಈ ವಿಚಾರದಲ್ಲಿ ಸಂಘಪರಿವಾರ ತಗಾದೆ ತೆಗೆದರೆ ಹಾಲಪ್ಪ ಸಂಪುಟ ಸೇರುವುದು ಕಷ್ಟ ಎಂದೇ ಹೇಳಲಾಗುತ್ತಿದೆ.
ಆಯನೂರು ಮಂಜುನಾಥ್
ವಿಧಾನ ಸಭೆ ಹಾಗೂ ಲೋಕಸಭೆಯ ನಾಲ್ಕೂ ಸದನಗಳನ್ನು ಪ್ರತಿನಿಧಿಸಿರುವ ಅನುಭವಿ ರಾಜಕಾರಣಿ ಆಯನೂರು ಮಂಜುನಾಥ್ ಪ್ರಸ್ತುತ ವಿಧಾನ ಪರಿಷತ್ ಸದಸ್ಯರು. ನಾಲ್ಕೂ ಮನೆಗಳಿಗೆ ಆಯ್ಕೆಯಾಗಿದ್ದರೂ ಒಮ್ಮೆಯೂ ಸಚಿವರಾಗಿಲ್ಲ. ಪರಿವಾರ ಹಾಗೂ ಪಕ್ಷ ಎರಡಕ್ಕೂ ನಿಷ್ಟರಾಗಿರುವ ಆಯನೂರು, ಸಂದರ್ಭಕ್ಕನುಸಾರ ಮುಲಾಜಿಲ್ಲದೆ ಮಾತನಾಡುವರು. ತಮ್ಮ ನಿಷ್ಠುರ ಮಾತಿನಿಂದಲೇ ಕೆಲವರನ್ನು ವಿರೋಧ ಕಟ್ಟಿಕೊಂಡ ಆಯನೂರು ಮಂಜುನಾಥ್ ಕಾರ್ಮಿಕ ಹಿನ್ನೆಲೆಯ ನಾಯಕ. ಇವರೂ ಸಚಿವಗಾದಿಯ ಆಕಾಂಕ್ಷೆಯಲ್ಲಿದ್ದಾರೆ. ಎಲ್ಲಾ ಅರ್ಹತೆ ಇದ್ದರೂ, ಬಿಜೆಪಿಯ ತ್ರಿಮೂರ್ತಿ ನಾಯಕರಿಂದಾಗಿ ಹಲವು ಅವಕಾಶ ವಂಚಿತರಾದ ಆಯನೂರು ಮಂಜುನಾಥ್‌ಗೆ ಈ ಬಾರಿಯೂ ಯಾವ ಅಡ್ಡಗಾಲಿದೆಯೊ ಗೊತ್ತಿಲ್ಲ.
ಕುಮಾರ್ ಬಂಗಾರಪ್ಪ
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕೂಡಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಲ್ಲಿ ಮೊದಲ ಬಾರಿ ಶಾಸಕರಾಗಿದ್ದರೂ ಈ ಹಿಂದೆ ಮೂರು ಬಾರಿ ಶಾಸನ ಸಭೆ ಪ್ರವೇಶ ಮಾಡಿದ್ದಲ್ಲದೆ, ಈಗ ಬಿಜೆಪಿಯಲ್ಲಿಯೇ ಇರುವ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು. ಯಾವುದೇ ಕಪ್ಪು ಚುಕ್ಕೆಯಿಲ್ಲದ ಅವರು, ಬಿಜೆಪಿಯಲ್ಲಿ ಯಡಿಯೂರಪ್ಪ ನಿಷ್ಠರಾಗಿಯೇ ಗುರುತಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿರುವ ಕುಮಾರ್, ಮಾಜಿ ಸಿಎಂ ಬಂಗಾರಪ್ಪ ಪುತ್ರ ಮತ್ತು ಉತ್ತಮ ಚರಿಷ್ಮಾ ಹೊಂದಿದ್ದಾರೆ. ಈಡಿಗ ಸಮುದಾಯದ ಕೋಟಾದಲ್ಲಿ ಅವರು ಪ್ರಬಲ ಸ್ಪರ್ದಿಯಾಗಿದ್ದಾರೆ. ಕಾರ್ಕಳ ಶಾಸಕ, ಸುನೀಲ್ ಕುಮಾರ್, ಕೋಟ ಶ್ರೀನಿವಾಸ್ ಪುಜಾರಿ, ಸುಭಾಷ್ ಗುತ್ತೇದಾರ್, ಹಾಗೂ ಹರತಾಳು ಹಾಲಪ್ಪ ಅವರಿಗೆ ಸಚಿವ ಸ್ಥಾನ ಕೊಡದಿದ್ದಲ್ಲಿ ಕುಮಾರ್‌ಗೆ ಅದೃಷ್ಟ ಒಲಿಯುವ ಸಾದ್ಯತೆ ಇದೆ. ಸೋದರ ಮಧುಬಂಗಾರಪ್ಪ ಕಾಂಗ್ರೆಸ್‌ಗೆ ಹೋಗಿರುವ ಕಾರಣ ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗರನ್ನು ಬಿಜೆಪಿಯಲ್ಲಿ ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಕುಮಾರ್‌ಗೆ ಅವಕಾಶ ನೀಡಬಹುದೆ ಎಂಬುದು ಅವರ ಬೆಂಬಲಿಗರ ನಿರೀಕ್ಷೆಯಾಗಿದೆ.
ಎಸ್.ರುದ್ರೇಗೌಡ
ಮೇಲ್ಮನೆಸದಸ್ಯಎಸ್.ರುದ್ರೇಗೌಡಅವರುತಮ್ಮಸರಳ ಸಜ್ಜನಿಕೆಯಿಂದ ಹೆಸರಾದವರು, ಶಿವಮೊಗ್ಗ ಕೈಗಾರಿಕಾ ವಲಯದಲ್ಲಿ ಉತ್ತಮ ಹೆಸರು ಮಾಡಿರುವ ಅವರನ್ನು ಸಚಿವರನ್ನಾಗಿ ಮಾಡಬೇಕೆಂಬ ಒತ್ತಡ ಉದ್ಯಮಿಗಳ ವಲಯದಿಂದ ಬರುತ್ತಿದೆ. ಯಡಿಯೂರಪ್ಪ ಅವರ ಪರಮಾಪ್ತರದ ರುದ್ರೇಗೌಡರು ಮೊದಲ ಬಾರಿ ಪರಿಷತ್ ಸದಸ್ಯರಾಗಿದ್ದು, ಕೆಪಿಎಸ್ಸಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ವೀರಶೈವ ಸಮಾಜ ಪ್ರತಿನಿಧಿಸುವ ಅವರೂ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯಲ್ಲಿ ಯಾವ ಲಿಂಗಾಯತ ಮುಖಂಡರಿಗೆ ಸಚಿವ ಸ್ಥಾನ ಕೊಡುವುದಾದರೂ, ಅದು ಯಡಿಯೂರಪ್ಪರ ಮಕ್ಕಳ ರಾಜಕೀಯ ಭವಿಷ್ಯದ ಮೇಲೆ ಅಡ್ಡಪರಿಣಾಮ ಬೀರದಂತೆ ಜಾಗೃತೆ ವಹಿಸುವ ರಾಜಕೀಯ ಜಾಣ್ಮೆ ಇರುವುದರಿಂದ ಎಲ್ಲವೂ ನಿಗೂಢವಾಗಿದೆ.