ನೂತನ ಸಂಪುಟದಲ್ಲಿ ಸಚಿವ ಸ್ಥಾನ ಕೊಟ್ಟರೆ ಪ್ರಾಮಾಣಿಕ ಕೆಲಸ ಮಾಡುವೆ, ಕೊಡದಿದ್ದರೆ ಶಾಸಕನಾಗಿ ನನ್ನ ಕೆಲಸ ಮಾಡುವೆ, ಬಿಜೆಪಿ ಹೈಕಮಾಂಡ್ ಮತ್ತು ಯಡಿಯೂರಪ್ಪ ಇಬ್ಬರೂ ಪ್ರಬಲವಾಗಿದ್ದಾರೆ ಅವರಿಗೆ ಎಲ್ಲರ ಕೆಲಸ,ಅಂಕಿ ಅಂಶಗಳು ಗೊತ್ತು ಹೀಗಿದ್ದಲ್ಲಿ ಯಾವ ಲಾಬಿ ಮಾಡುವ ಅವಶ್ಯಕತೆ ಇಲ್ಲ. ಹಂಗಂತ ಆಸೆ ಇಲ್ಲ ಅಂತ ಅಲ್ಲ ಇದೆ..ಇದು ಸಾಗರ ಶಾಸಕ ಹರತಾಳು ಹಾಲಪ್ಪ ಅವರ ಸ್ಪಷ್ಟ ನುಡಿ. ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿಯರು ಸಂಪುಟ ಸೇರಲ್ಲ ಎಂಬುದು ಮಾಧ್ಯಮಗಳ ಸುದ್ದಿ ಅದು ನಿಜವಾದರೆ ನಮ್ಮಂತಹವರಿಗೆ ಅವಕಾಶ ಸಿಗಬಹುದು. ರಾಜ್ಯದಲ್ಲಿ ಅನೇಕ ನಾಯಕರಿದ್ದಾರೆ. ಶಿವಮೊಗ್ಗದಲ್ಲಿಯೂ ಆರಗ ಜ್ಞಾನೇಂದ್ರ ಮತ್ತು ನಾನಿದ್ದೇನೆ ಪಕ್ಷ ಅವಕಾಶ ಕೊಟ್ಟರೆ ಕೆಲಸ ಮಾಡುತ್ತೇವೆ ಎಂದು ಹಾಲಪ್ಪ ಹೇಳಿದರು.
ಸವಾಲುಗಳಿವೆ, ಹುದ್ದೆ ಬೇಕೇ ಬೇಕು
ನಾಲ್ಕೂವರೆ ದಶಕಗಳ ಸಂಘಟನೆ ಸೇವೆಗೆ ಯಡಿಯೂರಪ್ಪ ಅವರಿಗೆ ಪಕ್ಷ ಸಾಕಷ್ಟು ಅವಕಾಶ ನೀಡಿತ್ತು. ಈಗ ಅವರು ಕಿರಿಯರಿಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಶಿವಮೊಗ್ಗದಲ್ಲಿ ಸಾಕಷ್ಟು ಅನುಭವಿ ರಾಜಕಾರಣಿಗಳಿದ್ದಾರೆ. ಇಲ್ಲಿ ಸವಾಲುಗಳೂ ಇವೆ ಈ ಕಾರಣದಿಂದ ಜಿಲ್ಲೆಗೆ ಸಚಿವ ಸ್ಥಾನಗಳು ಸಿಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಯಡಿಯೂರಪ್ಪರ ಜತೆಯಲ್ಲಿಯೇ ರಾಜಕಾರಣಕ್ಕೆ ಬಂದಿರುವ ಆರಗ ಜ್ಞಾನೇಂದ್ರ, ಅನುಭವಿಯಾದ ಹರತಾಳು ಹಾಲಪ್ಪ, ಮಂತ್ರಿಯಾಗಿ ಅನುಭವವುಳ್ಳ ಕುಮಾರ್ ಬಂಗಾರಪ್ಪ ಇದ್ದಾರೆ. ಮಂತ್ರಿಮಂಡಲದಲ್ಲಿ ಅವಕಾಶ ಬೇಕು. ಜಿಲ್ಲೆಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪರ ನೇತೃತ್ವದಲ್ಲಿ ಸಾಕಷ್ಟು ಕೆಲಸ ಆಗಿವೆ. ಇನ್ನೂ ಆಗಬೇಕಿದೆ ಈ ಕಾರಣದಿಂದ ನಮ್ಮ ಜಿಲ್ಲೆಗೆ ಪ್ರಾತಿನಿಧ್ಯ ಬೇಕು ಎಂದು ಸಂಸದರು ಅಭಿಪ್ರಾಯಪಟ್ಟರು.