ನೋ ನೆಟ್ವರ್ಕ್ -ನೋ ವೋಟಿಂಗ್ ಅಭಿಯಾನಕ್ಕೆ ನಾನು ಬೆಂಬಲಿಸುತ್ತೇನೆ. ನನ್ನ ಕ್ಷೇತ್ರದ ಶೇ 50 ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಇದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ಅವರು ಶನಿವಾರ ಶೀವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನೆಟ್ ವರ್ಕ್ ಸಮಸ್ಯೆ ಕುರಿತು ಸಂಸದರಾದ ಬಿ.ವೈ ರಾಘವೇಂದ್ರಅವರೊಂದಿಗೆ ನೆಡೆದ ಸಭೆಯಲ್ಲಿ ಮಾತನಾಡಿದರು.
ಸಾಗರ-ಹೊಸನಗರ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿದ್ದು, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಐಟಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುವ (ಮನೆಯಿಂದಲೇ ಕೆಲಸ) ಉದ್ಯೋಗಿಗಳಿಗೆ ಅನಾನುಕೂಲಗಳಾಗುತ್ತಿದೆ. ಈ ಕಾರಣದಿಂದ ಜನರ ಅಭಿಯಾನಕ್ಕೆ ನನ್ನ ಬೆಂಬಲ ಇದೆ. ಸರಕಾರದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಸತತ ಪ್ರಯತ್ನವಿದೆ ಎಂದು ಹೇಳಿದರು.
ಶುಕ್ರವಾರ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ಖಾಸಗಿ ನೆಟ್ ವರ್ಕ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸುತ್ತೇವೆ, ನನ್ನ ಕ್ಷೇತ್ರದ ಶೇ 50% ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ ಇದೆ, ಗುಡ್ಡಗಾಡು ಪ್ರದೇಶ ವಾಗಿರುವುದರಿಂದ ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ಕೆಲ ತಿಂಗಳಲ್ಲಿ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಂಸದ ರಾಘವೇಂದ್ರ ಅವರು ಮಾತನಾಡಿ, ಖಾಸಗಿ ಕಂಪನಿಗಳ ಮುಖ್ಯಸ್ಥರು ತಂತ್ರಜ್ಞರ ಜತೆ ಮಾತುಕತೆ ಮಾಡಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತೇವೆ. ಜನರ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಶಿವಕುಮಾರ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್ ಮುಖಂಡರಾದ ಪ್ರಸನ್ನ ಕೆರೆಕೈ, ಟಿ.ಡಿ ಮೇಘರಾಜ್, ವಿನಾಯಕ್ ರಾವ್, ನಾಗರಾಜ್ ಬೊಬ್ಬಿಗೆ, ಸುಧೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ಕ್ಷೇತ್ರದ ಜನ ನನಗೆ ಕೇಳ್ತಾರೆ. ಆನ್ ಲೈನ್ ಶಿಕ್ಷಣವೂ ಇಲ್ಲವಾಗಿದೆ. ಊರಿಗೆ ಹೋಗುವುದೇ ಕಷ್ಟವಾಗಿದೆ. ಈ ಬಗ್ಗೆ ಸಂಸದರೂ ಮುತುವರ್ಜಿ ವಹಿಸಬೇಕು
– ಹರತಾಳು ಹಾಲಪ್ಪ, ಶಾಸಕರು,ಸಾಗರ