ಆ ಹುಡುಗಿ ಹಾಡುತ್ತಿದ್ದರೆ ಶರಾವತಿ ನದಿಯಲ್ಲಿ ಅಲೆಗಳೇಳುತ್ತಿದ್ದವು, ನೆಲದ ಸಂಸ್ಕøತಿಯ ತಾಯಿಮನೆಯಂತಿರುವ ಕರೂರು ಸೀಮೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಆಕೆಯ ಅದ್ಭುತ ಗಾನಸಿರಿಗೆ ಕೇಳುಗರು ತಲೆದೂಗುತ್ತಿದ್ದರು. ಬಡತನದಲ್ಲಿಯೇ ಅರಳಿದ ಅಗಾಧ ಪ್ರತಿಭೆ ಬೆಳಗುವುದು ಕ್ರೂರ ವಿಧಿಗೆ ಬೇಕಿರಲಿಲ್ಲ ಅನಿಸತ್ತೆ ಅದಕ್ಕಾಗಿ ಆಕೆಯ ಧ್ವನಿಯನ್ನು ಉಡುಗಿಸಿಬಿಟ್ಟ.
ಇದು ಭಾನುವಾರವಷ್ಡೆ ಸಾವಿಗೀಡಾದ ಸಾಗರ ತಾಲೂಕು ಕುದರೂರು ಪಂಚಾಯಿತಿ ವ್ಯಾಪ್ತಿಯ ಹಿಳ್ಳೋಡಿ ಗ್ರಾಮದ ಶ್ರೀಲಕ್ಷ್ಮಿಯ ದುರಂತ ಕತೆ.
ಮನೆಗೆ ಗಂಡು ಮಗನಂತೆ ಇದ್ದ ಶ್ರೀ ಲಕ್ಷ್ಮಿ (22) ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದಲ್ಲದೆ, ತನ್ನ ಸಂಗೀತದ ಜರ್ನಿಗೂ ಅನುಕೂಲ ಎಂದು ಇತ್ತೀಚೆಗಷ್ಟೆ ಬೆಂಗಳೂರಿಗೆ ಹೋಗಿದ್ದಳು. ಪಿಜಿಯೊಂದರಲ್ಲಿ ವಾಸ್ತವ್ಯಕ್ಕಿದ್ದ ಲಕ್ಷ್ಮಿ ಭಾನುವಾರ ನೀರು ಕಾಯಿಸುವಾಗ ವಾಟರ್ ಹೀಟರ್‍ನಲ್ಲಿ ಪ್ರವಹಿಸಿದ್ದ ವಿದ್ಯುತ್ ಶಾಕ್‍ನಿಂದಾಗಿ ದುರಂತ ಸಾವಿಗೀಡಾಗಿದ್ದಾಳೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿರುವ ಚಿದಾನಂದ್ ಭಟ್ ಹಾಗೂ ಗಾಯತ್ರಿ ದಂಪತಿಗೆ ಇಬ್ಬರೂ ಹೆಣ್ಣು ಮಕ್ಕಳು ಹಿರಿಯ ಮಗಳು ಮನೆಗೆ ಗಂಡು ಮಗನಂತೆ ಇದ್ದಳು, ಬಾಲ್ಯದಿಂದಲೂ ಪ್ರತಿಭಾವಂತೆಯಾಗಿದ್ದ ಶ್ರೀ ಲಕ್ಷ್ಮಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಎಲ್ಲರಿಗಿಂತ ಮುಂದಿದ್ದಳು.
ಇತ್ತೀಚೆಗೆ ಸಂಗೀತದ ಸ್ಪರ್ಧೆಯೊಂದಕ್ಕೆ ಆಡಿಷನ್‍ಗೂ ಹೋಗಿ ಬಂದಿದ್ದಳು. ಅಕ್ಕರೆಯ ಮಗಳ ಸಾಧನೆಗೆ ಪ್ರೋತ್ಸಾಹ ನೀಡುತ್ತಿದ್ದ ಪೋಷಕರು ಮುಂದೆ ಮಗಳು ದೊಡ್ಡ ಸಾಧಕಿಯಾಗುತ್ತಾಳೆ ಎಂಬ ಕನಸು ಕಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದೆ.ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸಂಗೀತ ಸಂಪತ್ತು ಹೋಯ್ತು
ಕರೂರು ಹೋಬಳಿಯ ಗಾನಕೋಗಿಲೆ ಎಂದೇ ನಾವೆಲ್ಲ ಕರೆಯುತ್ತಿದ್ದೆವು. ಪ್ರತಿಭಾಕಾರಂಜಿ ಲಘು ಸಂಗೀತದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಳು. ಅವಳ ಅಗಲಿಕೆಯಿಂದ ಕರೂರು ಸೀಮೆಯ ಒಂದು ಸಂಗೀತ ಸಂಪತ್ತು ಇಲ್ಲವಾದಂತಾಗಿದೆ ಎನ್ನುತ್ತಾರೆ ಶ್ರೀಲಕ್ಷ್ಮಿಯ ಶಾಲಾ ಗುರುಗಳಾದ ಮೂಕಪ್ಪ ಹಾರಿಗೆ. ತಾನು ಕಲಿತು ನೂರಾರು ಜನ ಶಿಷ್ಯೆಯರನ್ನು ಹೊಂದಿದ್ದ ಲಕ್ಷ್ಮಿ ಅಗಲಿಕೆಗೆ ಇಡೀ ಸೀಮೆಯ ಜನರ ಹೃದಯ ಭಾರವಾಗಿದೆ. ದೇವರು ಒಬ್ಬ ಸಾಧಕಿಯನ್ನು ಅಕಾಲಿಕವಾಗಿ ಕರೆದುಕೊಳ್ಳಬಾರದಿತ್ತು ಎಂದು ಮೂಕಪ್ಪ ಅವರು ಕಂಬನಿ ಮಿಡಿದಿದ್ದಾರೆ.