Malenadu Mitra
ರಾಜ್ಯ ಶಿವಮೊಗ್ಗ

ಮಾಧ್ಯಮಗಳು ಭಾಷೆಯನ್ನು ಭ್ರಷ್ಟಗೊಳಿಸಬಾರದು


ಮಾಧ್ಯಮ ಅಕಾಡೆಮಿ ಸದಸ್ಯರನ್ನು ಅಭಿನಂದಿಸಿದ ಮರುಳಸಿದ್ಧ ಸ್ವಾಮೀಜಿ ಸಲಹೆ

ಜನಪ್ರಿಯತೆಗಳಿಸುವ ಭರದಲ್ಲಿ ಮಾಧ್ಯಮಗಳು ಭಾಷೆಯನ್ನು ಭ್ರಷ್ಟಗೊಳಿಸಬಾರದು ಎಂದು ಶಿವಮೊಗ್ಗ ಬಸವಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಅಭಿಪ್ರಾಯಪಟ್ಟರು. ಪತ್ರಿಕಾಭವನದಲ್ಲಿ ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ನೂತನ ಸದಸ್ಯರನ್ನು ಅಭಿನಂದಿಸಿ ಅವರು ಆಶೀರ್ವಚನ ನೀಡಿದರು.
ಮಾಧ್ಯಮ ಕ್ಷೇತ್ರದಲ್ಲಿನ ಪೈಪೋಟಿಯಿಂದಾಗಿ ಇಂದು ಜನಪ್ರಿಯತೆಯ ಬೆನ್ನು ಬಿದ್ದಿರುವ ಅಂತರ್ಜಾಲ ಮಾದ್ಯಮಗಳಲ್ಲಿ ಪ್ರಕಟವಾಗುವ ತಲೆಬರಹಗಳಿಗೂ ಒಳಗಿನ ಸುದ್ದಿಗೂ ಸಂಬಂಧವೇ ಇರುವುದಿಲ್ಲ. ಪ್ರಮುಖ ಮಾಧ್ಯಮ ಸಂಸ್ಥೆಗಳ ಡಿಜಿಟಲ್ ಆವೃತಿಗಳೂ ಇದಕ್ಕೆ ಹೊರತಲ್ಲ. ಯಾವುದೇ ಕ್ಷೇತ್ರ ಉದ್ಯಮವಾಗಿ ಬೆಳೆದಾಗ ಸಮುದಾಯಕ್ಕೆ ಒಳಿತಾಗುತ್ತದೆ. ಅದರೆ ಅದು ಸಮಾಜದ ಮೇಲೆ ಅಡ್ಡ ಪರಿಣಾಮ ಬೀರಬಾರದು. ಪ್ರಜಾಪ್ರಭುತ್ವದ ಕಾವಲು ನಾಯಿ, ನಾಲ್ಕನೇ ಅಂಗ ಎಂದೆಲ್ಲ ಕರೆಸಿಕೊಳ್ಳುವ ಮಾಧ್ಯಮ ಕ್ಷೇತ್ರದ ಮೇಲೆ ಅಪಾರವಾದ ಜವಾಬ್ದಾರಿಯಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಪತ್ರಿಕಾ ವೃತ್ತಿ ಅತ್ಯಂತ ಕಠಿಣವಾದುದು, ಪತ್ರಕರ್ತ ಸದಾ ಕ್ರಿಯಾಶೀಲನೂ ಮತ್ತು ಸೃಜನ ಶೀಲ ಬರಹಗಾರನೂ ಆಗಿರಬೇಕು. ನಿತ್ಯಸಾಹಿತಿಯಾದ ಪತ್ರಕರ್ತ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ಬರೆಯಬೇಕು. ಐಡೆಂಟಿಟಿಗಾಗಿ ಪತ್ರಕರ್ತ ಎಂದು ಹೇಳಿಕೊಳ್ಳುವ ಮಂದಿಯೂ ಸಮಾಜದಲ್ಲಿರುವುದು ನೋವಿನ ಸಂಗತಿ. ಶಿವಮೊಗ್ಗ ಪತ್ರಿಕೋದ್ಯಮಕ್ಕೆ ತನ್ನದೇ ಆದ ಹೆಗ್ಗಳಿಕೆ ಇದೆ. ಕೊರೊನ ಕಾಲದಲ್ಲಿ ಪತ್ರಿಕಾ ವೃತ್ತಿ ಸಂಕಷ್ಟದಲ್ಲಿದೆ. ಮಾಧ್ಯಮ ಅಕಾಡೆಮಿಯಿಂದ ಪತ್ರಕರ್ತರ ಆರೋಗ್ಯಕ್ಕೆ ಪೂರಕವಾದ ಯೋಜನೆ ರೂಪಿಸುವಲ್ಲಿ ನೂತನ ಸದಸ್ಯರು ಶ್ರಮಿಸಲಿ ಎಂದು ಹೇಳಿದರು.

ನೈತಿಕ ಚೌಕಟ್ಟು


ಅಭಿನಂದಿತರಾದ ಮಾದ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಎಸ್ ಯಡಗೆರೆ ಅವರು ಮಾತನಾಡಿ, ಇಂದಿನ ಪತ್ರಕರ್ತರಲ್ಲಿ ಅಧ್ಯಯನದ ಕೊರತೆ ಇದೆ. ಪತ್ರಕರ್ತನಿಗೆ ತಾನು ಬರೆದ ವರದಿಯಿಂದ ವ್ಯವಸ್ಥೆಯಲ್ಲಿ ಏನಾದರೂ ಬದಲಾವಣೆ ಆದರೆ ಅದಕ್ಕಿಂತ ಸಂಭ್ರಮ ಮತ್ತೊಂದಿಲ್ಲ. ಇಂತಹ ಸಮಾಜಮುಖಿ ವರದಿಗಳನ್ನು ಬರೆದ ನನಗೆ ಹೆಮ್ಮೆಯಿದೆ. ಪತ್ರಕರ್ತರು ತಮಗೆ ತಾವೇ ಒಂದು ನೈತಿಕ ಚೌಕಟ್ಟು ಹಾಕಿಕೊಳ್ಳಬೇಕೆಂದು ಸಲಹೆ ನೀಡಿದರು.
ಅಭಿನಂದನೆ ಸ್ವೀಕರಿಸಿದ ಮತ್ತೊಬ್ಬ ಸದಸ್ಯ ಕೆ.ವಿ ಶಿವಕುಮಾರ್ ಮಾತನಾಡಿ, ಉದ್ಯಮದ ದೃಷ್ಟಿಯಿಂದ ಬಂದ ನನಗೆ ಒಂದು ಪತ್ರಿಕಾ ಸಂಸ್ಥೆ ಕಟ್ಟುವ ಅವಕಾಶ ದೊರೆಯಿತು. ಮಾಧ್ಯಮ ಅಕಾಡೆಮಿ ಕೇವಲ ರಾಜಧಾನಿಗೆ ಸೀಮಿತ ಎಂಬ ಆರೋಪಗಳಿವೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿಯೂ ಹೆಚ್ಚು ಕಾರ್ಯಕ್ರಮ ನಡೆಸುವ ಉದ್ದೇಶವಿದೆ ಎಂದು ಹೇಳಿದರು.ಪತ್ರಕರ್ತರ ಸಂಘದ ರಾಜ್ಯ ಪ್ರತಿನಿಧಿ ಎನ್.ರವಿಕುಮಾರ್ ಮಾತನಾಡಿ. ಮಾಧ್ಯಮ ಅಕಾಡೆಮಿಗೆ ಶಿವಮೊಗ್ಗದ ಇಬ್ಬರು ನೇಮಕ ಆಗಿರುವುದು ಸಂತೋಷದ ಸಂಗತಿ. ಅಕಾಡೆಮಿಯಿಂದ ಪುಸ್ತಕ ಪ್ರಕಟಣೆಗೆ ಬರೀ ಹಿರಿಯರಿಗೆ ಅವಕಾಶ ಕೊಡದೆ ಪ್ರತಿಭಾವಂತ ಯುವ ಪತ್ರಕರ್ತರಿಗೂ ಅವಕಾಶ ಸಿಗಬೇಕೆಂದು ಹೇಳಿದರು.

ಹಿರಿತನ ಹಾಗೂ ಅವರ ಕೆಲಸಕ್ಕೆ ಮನ್ನಣೆ ನೀಡಬೇಕು


ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಮಾಧ್ಯಮ ಅಕಾಡೆಮಿಯಿಂದ ಪ್ರಶಸ್ತಿಗೆ ಪತ್ರಕರ್ತರ ಆಯ್ಕೆ ಮಾಡುವಾಗ ಹಿರಿತನ ಹಾಗೂ ಅವರ ಕೆಲಸಕ್ಕೆ ಮನ್ನಣೆ ನೀಡಬೇಕು. ಈವರೆಗೆ ಆದ ತಪ್ಪುಗಳನ್ನು ಮುಂದಿನವರು ಮಾಡುವುದು ಬೇಡ. ಪತ್ರಿಕೆಗಳನ್ನು ಗುರುತಿಸುವಾಗಲೂ ಇದೇ ಮಾನದಂಡ ಬಳಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅಕಾಡೆಮಿಯ ನೂತನ ಸದಸ್ಯರು ಕಾರ್ಯಪ್ರವೃತ್ತರಾಗಬೇಕೆಂಬ ಸಲಹೆ ನೀಡಿದರು.
ಅಭಿನಂದಿತರನ್ನು ಕುರಿತು ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ, ಹಿರಿಯ ಪತ್ರಕರ್ತ ರಾಮಚಂದ್ರ ವಿ.ಗುಣಾರಿ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ ಸ್ವಾಗತಿಸಿದರೆ, ಸಂತೋಷ್ ಕಾಚಿನಕಟ್ಟೆ ಅವರು ಕಾರ್ಯಕ್ರಮ ನಿರೂಪಿಸಿದರು.

Ad Widget

Related posts

ಕನ್ನಡ ಕಟ್ಟುವಲ್ಲಿ ಬದ್ಧತೆ ಮುಖ್ಯ: ಡಿ.ಮಂಜುನಾಥ್

Malenadu Mirror Desk

ಒಕ್ಕಲಿಗರ ಯುವ ವೇದಿಕೆಯಿಂದ ಆಹಾರ ವಿತರಣೆ

Malenadu Mirror Desk

ಶಿಲ್ಪಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಕೆ.ಜ್ಞಾನೇಶ್ವರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.