ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಕಾಯಂಗೊಳಿಸಬೇಕು. ಉನ್ನತ ಶೈಕ್ಷಣಿಕ ಸಾಲ ಹಾಗೂ ಬಡ್ಡಿ ಮನ್ನಾ ಮಾಡಬೇಕು, ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಬೇಕು ಎಂಬ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಹಾಗೂ ಎಸ್. ರುದ್ರೇಗೌಡ ಆಗ್ರಹಿಸಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಈಗ ತೀವ್ರ ಸಂಕಷ್ಟದಲ್ಲಿದ್ದಾರೆ. ಸುಮಾರು ೨೦ ವರ್ಷಗಳಿಂದ ಕನಿಷ್ಠ ಗೌರವಧನದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ನೆರವು ನೀಡುವುದು, ಅವರನ್ನು ಕಾಯಂಗೊಳಿಸುವುದು ಸರ್ಕಾರದ ಕರ್ತವ್ಯವವಾಗಿದೆ. ಇದಕ್ಕಾಗಿ ಸರ್ಕಾರ ಒಂದು ಅಧ್ಯಯನ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರು ಹೊಸಬರಿಗಿಂತ ಹೆಚ್ಚಿನ ಅನುಭವ ಹೊಂದಿದ್ದಾರೆ. ಈಗಾಗಲೇ ವಯೋಮಿತಿ ಮೀರುತ್ತಿದೆ. ಅಲ್ಲದೇ, ಕಳೆದ ೧೦ ತಿಂಗಳ ಗೌರವಧನದಲ್ಲಿ ಮೂರು ತಿಂಗಳು ಮಾತ್ರ ಗೌರವಧನ ನೀಡಲಾಗಿದೆ. ಕೂಡಲೇ ಗೌರವಧನ ನೀಡಬೇಕು. ಮತ್ತು ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವ ಸಲುವಾಗಿಯೇ ಸರ್ಕಾರ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ಉನ್ನತ ಶಿಕ್ಷಣಕ್ಕಾಗಿ ರೈತರ, ಮಧ್ಯಮವರ್ಗದ ಬಡವರ ಮಕ್ಕಳು ಸಾಲ ಪಡೆದಿದ್ದಾರೆ. ಕೊರೋನಾದ ಸಂದರ್ಭದಲ್ಲಿ ಯಾವ ದುಡಿಮೆ ಇಲ್ಲದೇ ಸಂಕಷ್ಟ ಅನುಭವಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಶೈಕ್ಷಣಿಕ ಸಾಲ ಪಡೆದಿದ್ದಾರೆ. ಹಣ ಕಟ್ಟಲು ಕಷ್ಟವಾಗುತ್ತಿದೆ. ಆದ್ದರಿಂದ ಉನ್ನತ ಶಿಕ್ಷಣದ ಶೈಕ್ಷಣಿಕ ಸಾಲ ಹಾಗೂ ಬಡ್ಡಿಯನ್ನು ಮನ್ನಾ ಮಾಡುವಂತೆ ಆಗ್ರಹಿಸಿದರು.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಶ್ರೀನಿವಾಸಾಚಾರಿ ಸಮಿತಿ ನೀಡಿರುವ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಇನ್ನು ಮುಂದೆ ಹೊರಗುತ್ತಿಗೆ ಆಗಲಿ, ಒಳಗುತ್ತಿಗೆಯಾಗಲಿ ಇರಬಾರದು. ಇದೊಂದು ನಾಗರಿಕ ಶೋಷಣೆಯಾಗಿದೆ. ಈ ವ್ಯವಸ್ಥೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದರು.