ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿಕಾರಿಪುರ ತಾಲ್ಲೂಕಿನ ಗ್ರಾಮದಲ್ಲಿ ಆಗಸ್ಟ್ ೧೪ ರಂದು ಬೆಳಗ್ಗೆ ೧೧ ಗಂಟೆಗೆ ಸ್ವಾತಂತ್ರ್ಯ ಸೇನಾನಿಗಳ ಮತ್ತು ಹುತಾತ್ಮರ ದಿನಾಚರಣೆಯನ್ನು ವಿಶೇಷವಾಗಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ೭೫ ನೇ ವರ್ಷದ ಅಂಗವಾಗಿ ಈ ಸಾರ್ವಜನಿಕ ಸಭೆ ಆಯೋಜಿಸಿದ್ದು, ಇದರಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ, ಬಿ.ಕೆ. ಸಂಗಮೇಶ್, ಸಿ.ಎಂ. ಇಬ್ರಾಹಿಂ, ಆರ್. ಪ್ರಸನ್ನಕುಮಾರ್, ಮಧುಬಂಗಾರಪ್ಪ, ಕೆ.ಬಿ. ಪ್ರಸನ್ನಕುಮಾರ್, ಎಚ್.ಎಂ. ಚಂದ್ರಶೇಖರಪ್ಪ, ಆರ್.ಎಂ. ಮಂಜುನಾಥಗೌಡ, ಗೋಪಾಲಕೃಷ್ಣ ಬೇಳೂರು, ಶಾಂತವೀರಪ್ಪಗೌಡ, ತೀ.ನಾ. ಶ್ರೀನಿವಾಸ್, ಮಂಜುನಾಥ ಭಂಡಾರಿ, ಪ್ರಫುಲ್ಲಾ ಮಧುಕರ್, ಗೋಣಿ ಮಾಲತೇಶ್, ಎಸ್.ಪಿ. ದಿನೇಶ್, ರಾಜುತಲ್ಲೂರು ಮೊದಲಾದವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ಚಳವಳಿ, ಹುತಾತ್ಮರಾದ ಸ್ವಾತಂತ್ರ್ಯ ಯೋಧರ ಬಗ್ಗೆ ಯುವ ಸಮುದಾಯಕ್ಕೆ ತಿಳಿಸಿಕೊಡುವ ಕಾರ್ಯಕ್ರಮ ಇದಾಗಿದೆ. ಸ್ವಾತಂತ್ರ್ಯ ಚಳವಳಿ ನಡೆದಿರುವ ಬಗ್ಗೆ ಯುವ ಸಮುದಾಯಕ್ಕೆ ಗೊತ್ತಿಲ್ಲ. ಇದನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಎಐಸಿಸಿ ಸೂಚನೆಯ ಮೇರೆಗೆ ಇದನ್ನು ಆಯೋಜನೆ ಮಾಡಲಾಗಿದೆ ಎಂದರು.
ಮಹಾತ್ಮ ಗಾಂಧಿಜಿಯವರ ನೇತೃತ್ವದ ಹೋರಾಟಗಳಾದ ಕ್ವಿಟ್ ಇಂಡಿಯಾ ಚಳವಳಿ, ಉಪ್ಪಿನ ಸತ್ಯಾಗ್ರಹ, ಅಹಸಕಾರ ಚಳವಳಿ, ಅಹಿಂಸಾ ಚಳವಳಿ ಮೊದಲಾದವುಗಳನ್ನು ಯುವಕರಿಗೆ ನೆನಪಿಸಲಾಗುತ್ತದೆ. ಇಂದು ನಕಲಿ ದೇಶಭಕ್ತಿ ಪ್ರದರ್ಶಿಸುತ್ತಿರುವವರ ಮುಖವಾಡ ಕಳಚುವ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಶಾಸಕ ಆರ್. ಪ್ರಸನ್ನಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಸದಸ್ಯ ಎಚ್.ಸಿ. ಯೋಗೀಶ್, ಮುಖಂಡರಾದ ಸಿ.ಎಸ್. ಚಂದ್ರಭೂಪಾಲ್, ಚಂದ್ರಶೇಖರ್, ರಂಗಸ್ವಾಮಿ ಇದ್ದರು.
ಹರಕುಬಾಯಿಯ, ಜ್ಞಾನವಿಲ್ಲದ, ನಕಲಿ ದೇಶಭಕ್ತರಾದ ಸಿ.ಟಿ. ರವಿ, ಈಶ್ವರಪ್ಪ, ಶೋಭಾ ಕರಂದ್ಲಾಜೆ ಮುಂತಾದವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಸುಂದರೇಶ್ ಆಗ್ರಹಿಸಿದರು.
ನೆಹರು, ಇಂದಿರಾಗಾಂಧಿ ಬಗ್ಗೆ ಸಿ.ಟಿ. ರವಿ, ಕೆ.ಎಸ್. ಈಶ್ವರಪ್ಪ, ಶೋಭಾ ಕರಂದ್ಲಾಜೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಹಸಿದವರಿಗೆ ಅನ್ನ ಕೊಡುವ ಯೋಗ್ಯತೆ ಇಲ್ಲದವರು. ಇವರೆಲ್ಲ ಮಂತ್ರಿಗಳು, ಯಾರನ್ನು ಹೇಗೆ ಟೀಕೆ ಮಾಡಬೇಕು ಎಂಬ ಅರಿವಿಲ್ಲದವರು. ಮುಗ್ಧ ಜನರ ಮೇಲೆ ಭಾವನಾತ್ಮಕ ಹೇಳಿಕೆಗಳನ್ನು ನೀಡುತ್ತಾ ರಾಷ್ಟ್ರವನ್ನು ಬಡತನಕ್ಕೆ ದೂಡುವ ಇವರು ಸಚಿವರಾಗುವ ಯೋಗ್ಯತೆ ಇಲ್ಲದವರು ಇವರ ಹುಚ್ಚು ಮತ್ತು ಅಸಂಬಂದ್ಧ ಹೇಳಿಕೆಗಳನ್ನು ಪರಿಗಣಿಸಿ ರಾಜ್ಯಪಾಲರು ಈಶ್ವರಪ್ಪ ಅವರನ್ನು ಸಂಪುಟದಿಂದ, ಸಿ.ಟಿ. ರವಿ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.