ಮ್ಯಾಮ್ಕೋಸ್ ಅಭಿನಂದನಾ ಸಮಾರಂಭದಲ್ಲಿ ಸಚಿವ ಆರಗ ಜ್ಞಾನೇಂದ್ರ ಇಂಗಿತ
ಅಡಕೆಗೆ ಶಾಶ್ವತವಾದ ಒಂದು ರಕ್ಷಣಾ ಕವಚ ಸಿಗಬೇಕಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅವರು ಸೋಮವಾರ ಮ್ಯಾಮ್ಕೋಸ್‍ನಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಡಕೆ ಟಾಸ್ಕ್‍ಫೋರ್ಸ್ ಮಾಡಿ ಹತ್ತು ಕೋಟಿ ಅನುದಾನ ನೀಡಲಾಗಿದೆ. ಅಡಕೆ ನಿಷೇಧದ ಗುಮ್ಮ ಆಗಾಗ ಕಾಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಸಚಿವರು ಕೇಂದ್ರ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ನಮ್ಮ ಕುಟುಂಬ ಅಡಕೆ ಉದ್ಯಮದ ಮೂಲಕವೇ ಜೀವನ ಕಂಡುಕೊಂಡಿದ್ದು, ಈ ಅವಿನಾಭಾವ ಸಂಬಂಧದ ಕಾರಣಕ್ಕೆ ಅಡಕೆ ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ನಾನು ಸದಾ ಕೈ ಜೋಡಿಸುವೆ ಎಂದು ಹೇಳಿದರು. ಎಚ್.ಎಸ್.ಮಂಜಪ್ಪ, ಮ್ಯಾಮ್ಕೋಸ್ ಉಪಾಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ ಮಾತನಾಡಿದರು. ಈ ಸಂದರ್ಭ ಉಭಯ ಸಚಿವರುಗಳನ್ನು ಅಭಿನಂದಿಸಿ ಅಡಕೆ ಬೆಳೆಗಾರರ ಸಮಸ್ಯೆ ಹೆಚ್ಚಿನ ಗಮನ ಕೊಡಲು ಮನವಿ ಮಾಡಲಾಯಿತು.