Malenadu Mitra
ರಾಜ್ಯ ಶಿವಮೊಗ್ಗ

ತಂದೆ ಹಾದಿಯಲ್ಲೇ ಸಾಗಿ, ನಿಮ್ಮ ಋಣ ತೀರಿಸುವೆ

ಸಾರ್ಥಕ ಸಂವತ್ಸರ ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ ಭರವಸೆ

ಶಿಕಾರಿಪುರ ಆ ೧೬ : ತಂದೆ ಬಿ ಎಸ್ ಯಡಿಯೂರಪ್ಪ ರವರಿಗೆ ರಾಜಕೀಯ ನೆಲೆ ನೀಡಿರುವ ತಾಲ್ಲೂಕು ಹಾಗೂ ಜಿಲ್ಲೆಯ ಜನತೆಯ ಋಣ ತೀರಿಸಲು ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರು ಸಾಲದು. ಪುರಸಭಾ ಸದಸ್ಯರಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಯಾಗುವವರೆಗೂ ನನ್ನ ತಂದೆಯ ಕೈ ಹಿಡಿದು ಬೆಳೆಸಿದ್ದೀರಿ. ಇಂಥವರ ಮಗನಾಗಿ ಹುಟ್ಟಿದ ನನ್ನನ್ನೂ ಸಹ ಪುರಸಭಾ ಸದಸ್ಯನಿಂದ, ಲೋಕಸಭಾ ಸದಸ್ಯನಾಗಿಸಿದ್ದೀರಿ ಈ ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ಋಣವನ್ನು ತೀರಿಸಲು ಸಾಧ್ಯವಿಲ್ಲ.. ಇದು ಸಂಸದ ಬಿ.ವೈ. ರಾಘವೇಂದ್ರ ಅವರು ಹೇಳಿದ ಭಾವುಕ ನುಡಿ.
ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಕುಮದ್ವತಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸಾರ್ಥಕ ಸಂವತ್ಸರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಕೀಯ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಹಸ್ರಾರು ಹಿರಿಯರ ಆಶೀರ್ವಾದ ಮತ್ತು ಬೆಂಬಲಿಗರ ಶ್ರಮದಿಂದ ಸಂಸದನನ್ನಾಗಿಸಿದೆ. ಇದಕ್ಕೆ ತಕ್ಕಂತೆ ತಾಲ್ಲೂಕು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಲ್ಲದೆ, ತಂದೆಯವರು ತೋರಿಸಿಕೊಟ್ಟ ಹಾದಿಯಲ್ಲೇ ಅವರು ಇಟ್ಟು ಹೆಜ್ಜೆಯಲ್ಲೇ ನಿಮ್ಮೆಲ್ಲರ ಸಹಕಾರದಿಂದ ನಾನು ಮುಂದುವರಿಯುತ್ತೇನೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು, ಸರ್ಕಾರದ ಹಲವಾರು ಯೋಜನೆಗಳನ್ನ ಸಮಾಜದ ಎಲ್ಲಾ ವರ್ಗಗಳ ಜನತೆಗೆ ತಲುಪುವಂತೆ ಮಾಡಲು ಮುಂದಾಗುತ್ತೇನೆ ಎಂದು ತಿಳಿಸಿದರು.

ಉತ್ತಮ ಖಾತೆಯನ್ನು ಕೊಡಿಸಿದ್ದಾರೆ

ರಾಜ್ಯ ಸರ್ಕಾರದ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ತಾವು ಸಂಘ ಪರಿವಾರದಿಂದ ಆಗಮಿಸಿದ್ದು, ೧೯೭೩ ರಿಂದ ಬಿ ಎಸ್ ಯಡಿಯೂರಪ್ಪರವರ ಒಡನಾಡಿಯಾಗಿದ್ದೇನೆ. ೧೯೮೩ ರಿಂದಲೇ ನಾನು ರಾಜಕೀಯ ಪ್ರವೇಶಿಸಿ ಅಂದು ಪ್ರಥಮಬಾರಿಗೆ ವಿಧಾನಸಭಾ ಚುನಾವಣೆಗೆ ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಆಗ ಕೇವಲ ೨ ಸಾವಿರ ಮತಗಳಿಂದ ಸೋತೆ. ಹೀಗೆ ೯ ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದು, ೧೯೯೪ ರಿಂದ ವಿಧಾನ ಸಭೆಗೆ ಪ್ರವೇಶಿಸಿದ್ದ ನಾನು, ನಿರಂತರವಾಗಿ ತೀರ್ಥಹಳ್ಳಿ ಮತ್ತು ಹೊಸನಗರದ ಜನತೆಯ ಕಷ್ಟ ಕಾರ್ಪಿಣ್ಯಗಳಿಗೆ ಅವರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ೪ ಬಾರಿ ಗೆಲುವು ಸಾಧಿಸಿದ್ದೇನೆ.

ನನ್ನನು ಗಮನಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಸದ ಬಿ ವೈ ರಾಘವೇಂದ್ರರವರು ಮತ್ತು ಸಂಘ ಪರಿವಾರದವರು ನನಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನ ಮಾಡಿದ್ದರ ಫಲವಾಗಿ ಈಗ ನನಗೆ ಅತ್ಯಂತ ಜವಾಬ್ದಾರಿಯ ಉತ್ತಮ ಖಾತೆಯನ್ನು ಕೊಡಿಸಿದ್ದಾರೆ ನನಗೆ ಅತ್ಯಂತ ಸಂತೋಷವಾಗಿದ್ದು ಇವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಶಾಸಕನಾಗಿ ಸ್ವ ಕ್ಷೇತ್ರದಲ್ಲಿಯೇ ಇರುತ್ತಿದ್ದ ನಾನು ಈಗ ರಾಜ್ಯ ಸುತ್ತುವಂತೆ ಮಾಡಲಾಗಿದೆ. ನಾನು ಸಚಿವನಾದ ನಂತರ ನನ್ನ ಕ್ಷೇತ್ರದ ತೀರ್ಥಹಳ್ಳಿ ಮತ್ತು ಹೊಸನಗರದ ಜನತೆಗೆ ಮನವಿ ಮಾಡಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ನನಗೆ ಜವಾಬ್ದಾರಿ ನೀಡಲಾಗಿರುವ ಹುದ್ದೆಗೆ ಗೌರವ ತರುವ ಪ್ರಯತ್ನ ಮಾಡುತ್ತೇನೆ ಎಂದರು.

ಸಂಸದ ಬಿ ವೈ ರಾಘವೇಂದ್ರರವರಿಗೆ ಶಿಕಾರಿಪುರ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಬಿ ಎಸ್ ಯಡಿಯೂರಪ್ಪರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಅತಿ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಸಂಸದ ಬಿ ವೈ ರಾಘವೇಂದ್ರರವರು ಕೂಡ ಕೇಂದ್ರ ಸರ್ಕಾರದಿಂದ ಹಲವು ರೀತಿಯಲ್ಲಿ ಅಭಿವೃದ್ಧಿ ಯೋಜನೆ ಜಾರಿಗೆ ತಂದು ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ. ಜಿಲ್ಲೆಯಲ್ಲಿ ೧೫ ವರ್ಷಗಳ ಕಾಲ ಸಂಸದರಾದವರು ಜಿಲ್ಲೆಯನ್ನು ಯಾವುದೇ ರೀತಿಯ ಅನುದಾನವಿಲ್ಲದೆ ಅಭಿವೃದ್ಧಿ ಪಡಿಸಿಲ್ಲ. ಆದರೆ ಬಿ ವೈ ರಾಘವೇಂದ್ರರವರು ಸಂಸದರಾದ ನಂತರ ಜಿಲ್ಲೆಯು ಅಭಿವೃದ್ಧಿಯಲ್ಲಿ ಚಿತ್ರಣವೇ ಬದಲಾಗುತ್ತಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ೫೫ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ ಭಗವಂತನು ಅವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಶಕ್ತಿ ನೀಡಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

ಸಾಗರ ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಜಿಲ್ಲೆಯ ಬಿಜೆಪಿ ಶಾಸಕರಾಗಿರುವ ನಾವು ಸಂಘ ಪರಿವಾರದಿಂದ ಆಗಮಿಸಿದ್ದ ಜ್ಞಾನೇಂದ್ರ ಅವರು, ಬಿ ಎಸ್ ಯಡಿಯೂರಪ್ಪರವರು ಪ್ರಥಮ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೇ ಸಚಿವರಾಗಬೇಕಿತ್ತು ಆ ಸಮಯದಲ್ಲಿ ಅವರು ಸೋಲು ಕಂಡ ಕಾರಣ ಆ ಅವಕಾಶ ನನಗೆ ಸಿಕ್ಕಿತ್ತು. ಆಗ ಅವರು ಸೋತರೂ ಪರವಾಗಿಲ್ಲ ಈಗ ಉತ್ತಮ ಜವಾಬ್ದಾರಿಯುತ ಖಾತೆಯೇ ಪಡೆದಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.

ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ ಬಿ ಅಶೋಕ್ ನಾಯಕ್, ಬೈಂದೂರು ಶಾಸಕ ಶಿವಕುಮಾರ್ ಶೆಟ್ಟಿ, ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಎಂಎಡಿಬಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ರಾಜ್ಯ ಅರಣ್ಯ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಕೆ ರೇವಣಪ್ಪ, ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಅಭಿಮಾನಿಗಳು ಹಾಜರಿದ್ದರು.

Ad Widget

Related posts

ಶರಾವತಿ ಸಂತ್ರಸ್ತರ ಪರವಾಗಿ ಸಿಎಂ ಮನೆಗೂ ಮುತ್ತಿಗೆ ಹಾಕ್ತೇವೆ ಮನೆಗೆ ಬರುತ್ತೇವೆಂದರೆ ನಮ್ಮ ಪ್ರತಿನಿಧಿಯಾದ ಸಂಸದರಿಗೇಕೆ ಭಯ

Malenadu Mirror Desk

ಅಗೆದಷ್ಟೂ ಆಳವಾಗುತ್ತಿರುವ ಹುಣಸೋಡು ಸ್ಫೋಟ, ಕ್ವಾರಿ ಆರಂಭಕ್ಕೆ ರಾಜಕೀಯ ಒತ್ತಡ

Malenadu Mirror Desk

ತಾಯಿ- ಮಗನ ಬಲಿ ಪಡೆದ ಮಹಾಮಾರಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.