ದೇಶಾದ್ಯಂತ ನೆಟ್ ವರ್ಕ್ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಬದ್ಧವಾಗಿದ್ದು 2024 ರ ವೇಳೆ ಭಾರತ್ ನೆಟ್ ಯೋಜನೆಯಡಿ 6 ಲಕ್ಷ ಹಳ್ಳಿಗಳಿಗೆ ಡಿಜಿಟಲ್ ಸಂವಹನ ಸಂಪರ್ಕ ಕಲ್ಪಿಸಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ದಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ನೆಟ್ ಪ್ರಾಯೋಗಿಕ ಯೋಜನೆ ಈಗಾಗಲೇ ಹಮ್ಮಿಕೊಂಡಿದ್ದು, ಪ್ರಾಯೋಗಿಕ ಯೋಜನೆಯಡಿ ರಾಜ್ಯದ ಪ್ರತಿ ಜಿಲ್ಲೆಯ ಒಂದು ಹಳ್ಳಿಯನ್ನು ಡಿಜಿಟಲ್ ಹಳ್ಳಿಯಾಗಿ ಅಭಿವೃದ್ಧಿಪಡಿಸಲಾಗುವುದು. ಇದನ್ನು ವಿಸ್ತರಿಸುವ ಜೊತೆಗೆ ಗ್ರಾಮೀಣ ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ರಾಜ್ಯಾದ್ಯಂತ ಡಿಜಿಟಲ್ ಸಂವಹನ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ರಾಜ್ಯದ 6 ಲಕ್ಷ ಹಳ್ಳಿಗಳಲ್ಲಿ ಇಂಟರ್ನೆಟ್ ಡಿಜಿಟಲ್ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ರಾಜ್ಯದ ಪ್ರತಿ ಜಿಲ್ಲೆಯ ಒಂದು ಹಳ್ಳಿಯನ್ನು ಪೈಲಟ್ ಪ್ರಾಜೆಕ್ಟ್ ಅಗಿ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ 6 ಲಕ್ಷ ಹಳ್ಳಿಗಳಿಗೂ ಡಿಜಿಟಲ್ ಸಂವಹನ ಸಂಪರ್ಕ ಕಲ್ಪಿಸಲಾಗುವುದು ಎಂದರು.
ರಾಜ್ಯದಲ್ಲಿ ಉದ್ಯೋಗಾವಕಾಶಗಳು ಬೆಂಗಳೂರು ಕೇಂದ್ರಿತವಾಗಿದ್ದು, ಇದನ್ನು ರಾಜ್ಯಾದ್ಯಂತ ಇತರೆ ಜಿಲ್ಲೆಗಳಿಗೂ ವಿಕೇಂದ್ರೀಕರಣಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದ ಅವರು, ಈಗಾಗಲೇ ಕೋವಿಡ್ ಪರಿಣಾಮ ವರ್ಕ್ ಫ್ರಂ ಹೋಂ ನಡೆಯುತ್ತಿದ್ದು, ಸಮರ್ಪಕ ಸಂವಹನ ಸಂಪರ್ಕಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದಲ್ಲಿ ರಾಜ್ಯದ ಅಭಿವೃದ್ದಿಗೆ ಪೂರಕವಾಗಲಿದೆ ಎಂದರು.
ಉದ್ಯೋಗ ಸೃಷ್ಟಿಯ ಅವಕಾಶ
ದೇಶದಲ್ಲಿ ಎರಡು ಮಾರ್ಗಗಳಲ್ಲಿ ಉದ್ಯೋಗ ಸೃಷ್ಟಿಯ ಅವಕಾಶಗಳನ್ನು ನಾವು ನೋಡುತ್ತಿದ್ದೇವೆ. ಉನ್ನತ ಶಿಕ್ಷಣ ಮತ್ತು ವೃತ್ತಿ ಕೌಶಲ್ಯದ ಸಮಾನಾಂತರ ಮಾರ್ಗಗಳಲ್ಲಿ ಕಾಣಬಹುದಾಗಿದೆ. ಸಣ್ಣ ಕೈಗಾರಿಕೆ ಮತ್ತು ಕುಶಲ ಕೈಗಾರಿಕೆಗಳಿಗೆ ಸೂಕ್ತ ತರಬೇತಿ ನೀಡುವುದಲ್ಲದೆ. ಬ್ಯಾಂಕ್ ಮೂಲಕ ಆರ್ಥಿಕ ನೆರವು ದೊರಕಿಸಿಕೊಡುವ ಬಗ್ಗೆಯೂ ಯೋಜನೆಯನ್ನು ಪುನರ್ ರೂಪಿಸಲಾಗುವುದು ಎಂದು ತಿಳಿಸಿದರು.
ನಮ್ಮಲ್ಲಿ ಪದವೀಧರರಿದ್ದಾರೆ. ಉದ್ಯೋಗಗಳಿಸುವ ಕೌಶಲ್ಯವಿದೆ. ತಾಂತ್ರಿಕತೆ ಜಾಸ್ತಿಯಾಗಿದೆ. ಹಿಂದೆ ಗುರಿ ಕೈಗಾರಿಕೆಗಳ ಮೂಲಕ ತಯಾರಾದ ವಸ್ತುಗಳನ್ನು ಮಾರುಕಟ್ಟೆಗೆ ತಂದು ಮಾರಲಾಗುತ್ತಿತ್ತು. ಈಗ ಇ-ಕಾಮರ್ಸ್ ಮೂಲಕ ಮಾರುಕಟ್ಟೆ ಸೃಷ್ಠಿಯಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ಞಾನ, ಸಂಪರ್ಕ ಸಂವಹನ ಹಾಗೂ ವೃತ್ತಿ ಕೌಶಲ್ಯ ಅಭಿವೃದ್ದಿಗೆ ವಿಪುಲ ಅವಕಾಶವಿದ್ದು, ಇದಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ದರಾಗಿದ್ದೇವೆ. ಕೋವಿಡ್ ನಂತರದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಂಪರ್ಕದಿಂದ ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗವಕಾಶದ ಸಾಧ್ಯತೆಗಳು ತೆರೆದಿದ್ದು, ಇದಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅಗತ್ಯವಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯ ಅಭಿವೃದ್ದಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಇದ್ದರು.