ತೆರಿಗೆ ಹಣ ಹೆಚ್ಚಾಗಿರುವುದನ್ನು ವಿರೋಧಿಸಿ, ಮಹಾನಗರ ಪಾಲಿಕೆ ಆಡಳಿತ ವೈಖರಿ ಖಂಡಿಸಿ ಬುಧವಾರ ಗೋಪಿ ವೃತ್ತದ ಶ್ರೀನಿಧಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಅಣ್ಣಾ ಹಜಾರೆ ಹೋರಾಟ ಸಮಿತಿ ಕರಪತ್ರ ಬಿಡುಗಡೆ ಮಾಡುವ ಮೂಲಕ ತನ್ನ ಆಕ್ರೋಶ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಯ ದುರಾಡಳಿತ ಹಾಗು ನಮ್ಮ ತೆರಿಗೆ ಹಣವನ್ನು ಲಂಗುಲಗಾಮ್ ಇಲ್ಲದೆ ಮನಸೋಇಚ್ಛೆ ದುಂದುವೆಚ್ಚ ಮಾಡುತ್ತಿರುವುದರ ಬಗ್ಗೆ ಸೇರಿದಂತೆ ಸುಮಾರು ೧೫ ಅಂಶಗಳನ್ನು ಸಾರ್ವಜನಿಕ ಕರಪತ್ರದಲ್ಲಿ ಅಳವಡಿಸಿ ಮುದ್ರಿಸಲಾಗಿದ್ದು, ಈ ಕರಪತ್ರವನ್ನು ಮನೆಮನೆಗೆ ತಲುಪಿಸುವ ಮುಖಾಂತರ ಪ್ರಜ್ಞಾವಂತ ನಾಗರೀಕರು, ಜನಸಾಮಾನ್ಯರು ಸಂಬಂಧಪಟ್ಟವರನ್ನು ಈ ಬಗ್ಗೆ ಪ್ರಶ್ನೆ ಮಾಡಬೇಕೆಂಬುದು ಸಮಿತಿಯ ಉದ್ದೇಶವಾಗಿದೆ ಎಂದು ಸಮಿತಿ ತಿಳಿಸಿದೆ.
ಸ್ಮಾರ್ಟ್ಸಿಟಿಗಾಗಿ ಪ್ರತ್ಯೇಕವಾಗಿ ಐಎಎಸ್ ಅಧಿಕಾರಿ ನೇಮಕ ಮಾಡಬೇಕು. ಈಗಾಗಲೇ ಮುಗಿದ ಕಾಮಗಾರಿಗಳು ಸಾಕಷ್ಟು ಕಳಪೆಯಾಗಿದ್ದು, ತನಿಖೆ ನಡೆಸಬೇಕು. ದುಂದುವೆಚ್ಚ ತಡೆಯಬೇಕು. ಪಾಲಿಕೆ ಆಸ್ತಿ ಕಬಳಿಕೆ ನಿಲ್ಲಬೇಕು. ಎಲ್ಲಾ ಒತ್ತುವರಿ ಜಾಗಗಳ ತೆರವುಗೊಳಿಸಬೇಕು. ವಿದ್ಯಾನಗರದ ಕಂಟ್ರಿಕ್ಲಬ್ ಹೋಗುವ ರಸ್ತೆಗೆ ಸಂಬಂಧಿಸಿದಂತೆ ಸುಮಾರು ೩೪ ಎಕರೆ ಜಾಗವನ್ನು ಅಧಿಕಾರಿಗಳು ಪರಭಾರೆ ಮಾಡಿದ್ದಾರೆ. ಅದನ್ನು ವಾಪಾಸ್ಸು ಪಡೆಯಬೇಕು ಸೇರಿದಂತೆ ಸುಮಾರು ೧೫ ಅಂಶಗಳನ್ನು ಕರಪತ್ರದಲ್ಲಿ ಮುದ್ರಿಸಲಾಗಿದೆ.
ಕರಪತ್ರದಲ್ಲಿರುವ ಅಂಶಗಳನ್ನು ಇನ್ನು ೧೫ದಿನದಲ್ಲಿ ಬಗೆಹರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಅಶೋಕ್ ಯಾದವ್, ಕೆ.ವಿ.ವಸಂತಕುಮಾರ್, ಎಸ್.ಬಿ.ಅಶೋಕ್ ಕುಮಾರ್, ಡಾ.ಎಸ್.ಎಲ್.ಎನ್. ನಾಯಕ್, ಡಾ.ಚಿಕ್ಕಸ್ವಾಮಿ, ಡಾ.ಸತೀಶ್ ಕುಮಾರ್ ಶೆಟ್ಟಿ, ಡಾ.ಶ್ರೀನಿವಾಸ್, ಡಾ.ನಾಗರಾಜ್, ಟಿ.ಆರ್.ಅಶ್ವಥ್ ನಾರಾಯಣ ಶೆಟ್ಟಿ, ಪುಟ್ಟಯ್ಯ, ರೈತ ಸಂಘದ ಮುಖಂಡ ಹೆಚ್.ಆರ್.ಬಸವರಾಜಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
previous post