ಸೊರಬ ಬಿಜೆಪಿಯಲ್ಲಿ ಮತ್ತೆ ಮೂಲ ಮತ್ತು ವಲಸಿಗರ ನಡುವಿನ ಕಿತ್ತಾಟ ಆರಂಭವಾಗಿದ್ದು, ಪುರಸಭೆಯ ಮೊದಲ ಅಧ್ಯಕ್ಷ ಎಂ.ಡಿ.ಉಮೇಶ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಬಿಜೆಪಿ ಸದಸ್ಯರೇ ಸಹಿಹಾಕಿದ್ದಾರೆ. ಶಾಸಕ ಕುಮಾರ ಬಂಗಾರಪ್ಪ ಅವರ ಬಣ ಹಾಗೂ ಮೂಲ ಬಿಜೆಪಿ ಬಣದ ನಡುವಿನ ಭಿನ್ನಮತದ ಮುಂದುವರಿದ ಭಾಗವೇ ಈ ಬೆಳವಣಿಗೆ ಎಂದು ಹೇಳಲಾಗಿದೆ.
ಪುರಸಭೆ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿಯೇ ಬಿಜೆಪಿ ಜಿಲ್ಲಾಘಟಕ ಮೂಲ ಬಿಜೆಪಿಯವರಿಗೆ ಅಧಿಕಾರ ಕೊಡುವ ಇರಾದೆ ಹೊಂದಿತ್ತು. ಆದರೆ ತಮ್ಮ ಆಪ್ತ ಎಂ.ಡಿ ಉಮೇಶ್ ಅವರನ್ನು ಅಧ್ಯಕ್ಷಗಾದಿಯಲ್ಲಿ ಕೂರಿಸುವಲ್ಲಿ ಕುಮಾರ್ ಯಶಸ್ವಿಯಾಗಿದ್ದರು. ಅಧ್ಯಕ್ಷರು ಬಿಜೆಪಿಯ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯಲಿಲ್ಲ. ಅವರು ನೀಡುತ್ತಿದ್ದ ಸಲಹೆಗಳನ್ನು ಕಡೆಗಣಿಸಿದ್ದಾರೆ. ಏಕಮುಖ ಅಧಿಕಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪುರಸಭೆಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ನೀಡಬೇಕೆಂದು ಬಿಜೆಪಿಯವರೂ ಸೇರಿದಂತೆ 10 ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಒಟ್ಟು 12 ಸದಸ್ಯರಿರುವ ಪುರಸಭೆಯಲ್ಲಿ ಬಿಜೆಪಿ 6, ಕಾಂಗ್ರೆಸ್ 4 ,ಜೆಡಿಎಸ್ 1 ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.
ರಾಜಕೀಯ ಬದಲಾವಣೆ:
ಮಧುಬಂಗಾರಪ್ಪ ಅವರು ಕಾಂಗ್ರೆಸ್‍ಗೆ ಬಂದ ಬಳಿಕ ಸೊರಬದಲ್ಲಿ ಅನೇಕ ಬಿಜೆಪಿ ಮುಖಂಡರು ಕಾಂಗ್ರೆಸ್‍ಗೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಬದಲಾವಣೆಗಳ ಲಕ್ಷಣ ಕಂಡುಬರುತ್ತಿದೆ. ಕುಮಾರ್‍ಬಂಗಾರಪ್ಪ ಅವರೊಂದಿಗೆ ಮೂಲ ಬಿಜೆಪಿಯವರಿಗಿರುವ ಅಸಮಾಧಾನವನ್ನು ಪ್ರತಿಪಕ್ಷ ಕಾಂಗ್ರೆಸ್ ಬಳಸಿಕೊಳ್ಳುವ ಸಾಧ್ಯತೆಯಿದೆ. ಬಿಜೆಪಿ, ಕಾಂಗ್ರೆಸ್ ಸದಸ್ಯರೂ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮುಂದಾಗಿರುವುದು ಮುಂದಿನ ದಿನದಲ್ಲಿ ಏನಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ
ಸೊರಬ ಬಿಜೆಪಿ ಭಿನ್ನಮತದಲ್ಲಿ ಜಿಲ್ಲಾಬಿಜೆಪಿ ಹಲವು ಸುತ್ತಿನ ಮಾತುಕತೆ ಹಿಂದೇ ನಡೆಸಿತ್ತು. ಈಗ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು ಭಾನುವಾರ ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ಶಾಸಕ ಕುಮಾರ ಬಂಗಾರಪ್ಪ ಮತ್ತು ಜಿಲ್ಲಾ ಮುಖಂಡರೊಂದಿಗೆ ಸಭೆ ನಡೆಸಿ ಪುರಸಭೆಯಲ್ಲಿನ ಗೊಂದಲಗಳನ್ನು ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆನ್ನಲಾಗಿದೆ.
ಸೊರಬ ಬಿಜೆಪಿಯಲ್ಲಿ ಮೂಲ-ವಲಸೆ ಎಂಬ ಭಿನಾಭಿಪ್ರಾಯವಿಲ್ಲ. ಸದಸ್ಯರ ನಡುವೆ ಸಣ್ಣ ವ್ಯತ್ಯಾಸಗಳಿವೆ. ಅವುಗಳನ್ನು ಬಗೆಹರಿಸಲಾಗುವುದು. ಎಲ್ಲರೂ ಒಂದಾಗಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಂತಹ ಯಾವುದೇ ಗೊಂದಲಗಳಿಲ್ಲ
-ಕುಮಾರ್ ಬಂಗಾರಪ್ಪ. ಶಾಸಕರು, ಸೊರಬ