ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬ ತತ್ತ್ವ ಮತ್ತು ಸಿದ್ಧಾಂತವನ್ನು ಪ್ರತಿಪಾದಿಸಿದ್ದ ಬ್ರಹ್ಮರ್ಷಿ ನಾರಾಯಣ ಗುರುಗಳು ಮನುಕುಲದ ಮಾರ್ಗದರ್ಶಕರು ಎಂದು ಗ್ರಾಮೀಣಾಭಿವೃಧ್ಧಿ, ಪಂಚಾಯತ್‌ರಾಜ್ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಸರಳ ಸಮಾರಂಭವನ್ನು ಉದ್ಘಾಟಿಸಿ, ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರುಮಾತನಾಡುತ್ತಿದ್ದರು.
ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಅಡತಡೆಯನ್ನುಂಟು ಮಾಡುವ ವ್ಯಕ್ತಿ, ಸಂಘಟನೆಗಳು ಎಲ್ಲೆಲ್ಲಿಯೂ ಇರುತ್ತವೆ. ಇವೆಲ್ಲವನ್ನು ಗಮನಿಸಿದ ನಾರಾಯಣಗುರುಗಳು ಜಾತಿ, ಮತ ಮತ್ತು ದೇವರ ಬಗ್ಗೆ ಅಪೂರ್ವ ಕಲ್ಪನೆಯನ್ನು ಹೊಂದಿದ್ದರು ಎಂದರು.
ನಾರಾಯಣಗುರುಗಳು ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಶಕ್ತಿಶಾಲಿಗಳಾಗಿ. ಜಾತಿ ಯಾವುದಾದರೇನು ಮನುಷ್ಯ ಒಳ್ಳೆಯವನಾದರೆ ಸಾಕು. ಅನ್ಯರ ಸಂತೋಷದಲ್ಲಿ ತನ್ನ ಸಂತೋಷ ಕಾಣಬೇಕು ತನ್ನ ಸಂತೋಷದ ದಾರಿ ಇತರರಿಗೆ ಸಂತೋಷ ನೀಡುವಂತಿರಬೇಕು. ಮನುಕುಲದ ಉನ್ನತಿ ಎಂಬ ಸಂದೇಶ ಎಲ್ಲೆಡೆ ಸಾರಿದರು ಎಂದರು.
ನಾರಾಯಣ ಗುರುಗಳಂತಹ ಅನೇಕ ಮಹನೀಯರ ಮಾರ್ಗದರ್ಶನದಂತೆ ಇಂದು ಸಮಾಜದಲ್ಲಿ ಅನೇಕ ಸುಧಾರಣೆಗಳು ಕಂಡುಬಂದಿವೆ. ಎಲ್ಲ ಜಾತಿ ಮತ ಭಾಷೆ ಬಣ್ಣಗಳಿಲ್ಲದೆ ಮನುಷ್ಯ ಜಾತಿ ಒಂದಾಗಬೇಕು ಎಂಬುದು ಎಲ್ಲಾ ಮಹನೀಯರ ಆಶಯವಾಗಿತ್ತು ಎಂದವರು ನುಡಿದರು.
ವಿಧಾನ ಪರಿಷತ್ ಸದಸ್ಯ ರುದ್ರೇಗೌಡರು, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ದತ್ತಾತ್ರಿ, ಜ್ಞಾನೇಶ್ವರ್, ಮೇಯರ್ ಸುನಿತಾ ಅಣ್ಣಪ್ಪ, ನಾರಾಯಣಗುರು ಬಿಲ್ಲವ ಸಮಾಜದ ಅಧ್ಯಕ್ಷ ಭುಜಂಗ, ಆರ್ಯ ಈಡಿಗ ಸಮಾಜದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು.
ಸಿಗಂದೂರು ದೇಗುಲದಲ್ಲಿ ನಾರಾಯಣಗುರು ಜಯಂತಿ
ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದಲ್ಲಿ ಸೋಮವಾರ ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಧರ್ಮದರ್ಶಿ ಡಾ.ರಾಮಪ್ಪ ಅವರು ದೇಗುಲದ ಆವರಣದಲ್ಲಿರುವ ಗುರುಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದರು. ಜಯಂತಿ ನಿಮಿತ್ತ ದೇವಸ್ಥಾನದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನೆರವೇರಿದವು. ಈ ಸಂದರ್ಭ ಸಂದೇಶ ನೀಡಿದ ಧರ್ಮದರ್ಶಿಗಳು, ಜನರು ಶಿಕ್ಷಣ ಪಡೆದಾಗ ಮಾತ್ರ ಸರ್ವಾಂಗೀಣ ಏಳಿಗೆ ಹೊಂದಬಹುದು ಎಂದು ಹೇಳಿದರು. ಈ ಸಂದರ್ಭ ದೇಗುಲದ ಅರ್ಚಕರು ಸ್ವಯಂಸೇವಕರು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು. ಕೋವಿಡ್ ಮಾರ್ಗಸೂಚಿಯಂತೆ ದೇಗುಲಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು.