ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸಿಯೇ ಶಾಲೆಗಳನ್ನು ಆರಂಭಿಸಲಾಗಿದೆ ಎಂದು ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಎನ್. ರಮೇಶ್ ಹೇಳಿದರು.
ಅವರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ೯ ಮತ್ತು ೧೦ ನೇ ತರಗತಿ ವಿದ್ಯಾರ್ಥಿಗಳನ್ನು ಅತ್ಯಂತ ಉತ್ಸಾಹದಿಂದ ಬರಮಾಡಿಕೊಂಡು ಗುಲಾಬಿ ನೀಡಿ ಆರತಿ ಬೆಳಗುವುದರ ಮೂಲಕ ಶಾಲೆ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೇ ನಮ್ಮ ಶಾಲೆಯಲ್ಲಿ ಅನುಸರಿಸಲಾಗುತ್ತಿದೆ. ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ ಮೊದಲಾದವುಗಳನ್ನು ಕಡ್ಡಾಯವಾಗಿ ಪಾಲಿಸಲಾಗಿದೆ. ಒಂದು ಬೆಂಚ್ ಗೆ ಕೇವಲ ಇಬ್ಬರು ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಲಾಗುತ್ತಿದೆ. ೯ ಮತ್ತು ೧೦ ನೇ ತರಗತಿಗೆ ಮಾತ್ರ ಶಾಲೆ ಆರಂಭಿಸಲಾಗಿದ್ದು, ಸರ್ಕಾರದ ಮಾರ್ಗಸೂಚಿ ಬಂದ ನಂತರ ೮ ನೇ ತರಗತಿ ಆರಂಭಿಸಲಾಗುವುದು ಎಂದರು.
ಸರ್ಕಾರ ಶಿಕ್ಷಣ ತಜ್ಞರ ಜೊತೆ ಚರ್ಚಿಸಿಯೇ ಈ ತೀರ್ಮಾನ ಕೈಗೊಂಡಿದೆ. ಇದು ಸ್ವಾಗತಾರ್ಹವಾಗಿದೆ. ಪಾಸಿಟಿವಿಟಿ ದರ ಶೇಕಡ ೨ ಕ್ಕಿಂತ ಕಡಿಮೆ ಇರುವು ಜಿಲ್ಲೆಗಳಲ್ಲಿ ಮಾತ್ರ ಶಾಲೆಗಳು ಆರಂಭವಾಗಿವೆ. ನಮ್ಮ ಸಂಸ್ಥೆಯಲ್ಲಿ ಈಗಾಗಲೇ ಆನ್ ಲೈನ್ ತರಗತಿಗಳ ಮೂಲಕ ಶಿಕ್ಷಕರು ಪಾಠಗಳನ್ನು ಬೋಧಿಸಿದ್ದಾರೆ. ಈಗ ಮತ್ತೆ ಭೌತಿಕ ತರಗತಿ ಆರಂಭವಾಗುವುದರಿಂದ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂದರು.
ಪೋಷಕರ ಒಪ್ಪಿಗೆ ಪಡೆದೇ ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ. ನಮ್ಮ ಶಾಲೆಯಲ್ಲಿ ೧೦೦ ಕ್ಕೆ ೧೦೦ ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಎಲ್ಲರಿಗೂ ಕಟ್ಟೆಚ್ಚರ ನೀಡಲಾಗಿದೆ. ಯಾರೂ ಒಟ್ಟಾಗಿ ಸೇರಿಕೊಂಡು ಮಾತಾಡಬೇಡಿ ಎಂದು ತಿಳಿಸಲಾಗಿದೆ. ಶಿಕ್ಷಕರಿಗೂ ಸಹ ತರಬೇತಿ ನೀಡಲಾಗಿದೆ. ಸಾಕಷ್ಟು ಸುರಕ್ಷತಾ ಕ್ರಮ ಅನುಸರಿಸಲಾಗಿದೆ. ಮಾಸ್ಕ್ ಮರೆತು ಬಂದ ವಿದ್ಯಾರ್ಥಿಗಳಿಗೆ ಶಾಲೆಯಿಂದಲೇ ಮಾಸ್ಕ್ ನೀಡಲಾಗಿದೆ. ಬಹುದಿನಗಳ ನಂತರ ಶಾಲೆ ಆರಂಭವಾಗಿರುವುದರಿಂದ ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಶಾಲೆಗೆ ಬಂದಿದ್ದಾರೆ. ಅವರ ಮುಖದಲ್ಲಿ ಸಂತಸ ಕಂಡು ಬಂದಿದ್ದು, ಯಾವುದೇ ತೊಂದರೆಯಾಗದಂತೆ ಶಾಲೆ ಆರಂಭಿಸಲಾಗಿದೆ ಎಂದರು.
ಶಾಲೆಯ ಪ್ರಾಂಶುಪಾಲೆ ಬಿ.ಜೆ. ಸುನಿತಾ ದೇವಿ, ಉಪ ಪ್ರಾಂಶುಪಾಲ ಪ್ರವೀಣ್, ಶಿಕ್ಷಕಿಯರಾದ ಮಂಗಳಾ, ಭಾಗ್ಯ ಮೊದಲಾದವರಿದ್ದರು.