Malenadu Mitra
ರಾಜ್ಯ ಶಿವಮೊಗ್ಗ

ರೈತ ಸಂಘಟನೆಗಳ ಹೋರಾಟಕ್ಕೆ ಶಕ್ತಿ ತುಂಬಿದ ಎನ್.ಡಿ.ಸುಂದರೇಶ್

ರೈತ ಸಂಘಟನೆಗಳ ಹೋರಾಟಕ್ಕೆ ಶಕ್ತಿ ತುಂಬಿದವರು ಹಾಗೂ ರೈತ ಚಳವಳಿಯ ರೂವಾರಿ ಆಗಿದ್ದವರು ಎನ್.ಡಿ.ಸುಂದರೇಶ್ ಎಂದು ಎನ್.ಡಿ.ಸುಂದರೇಶ್ ಪ್ರತಿಷ್ಠಾನದ ಅಧ್ಯಕ್ಷೆ ಶೋಭಾ ಸುಂದರೇಶ್ ಹೇಳಿದರು.
ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪದಲ್ಲಿರುವ ಸಾಹಿತ್ಯ ಭವನದಲ್ಲಿ ಎನ್.ಡಿ.ಸುಂದರೇಶ್ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಎನ್.ಡಿ.ಸುಂದರೇಶ್ ಅವರ ಜನ್ಮದಿನೋತ್ಸವ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬದುಕು ಆರಂಭಿಸಿದಾಗ ರೈತರ ಸಮಸ್ಯೆಗಳು ಸುಂದರೇಶ್ ಅವರ ಗಮನಕ್ಕೆ ಬಂದಿತು. ಆರಂಭದಲ್ಲಿ ರೈತರ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ ನಂತರದಲ್ಲಿ ಸುಂದರೇಶ್ ಅವರು ರೈತ ಹೋರಾಟಕ್ಕಿಳಿದು ಅನೇಕ ಹೋರಾಟಗಳಿಗೆ ಸಾಕ್ಷಿಯಾದರು. ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಸಮಸ್ಯೆಗಳನ್ನು ಪರಿಹರಿಸುವಂತೆ ಸರ್ಕಾರಗಳಿಗೆ ಎಚ್ಚರಿಸುವ ಕೆಲಸವನ್ನು ನಿರಂತರವಾಗಿ ಮಾಡಿದರು ಎಂದು ತಿಳಿಸಿದರು.
ಎಚ್.ಎಸ್.ರುದ್ರಪ್ಪ, ಪ್ರೊ. ನಂಜುಂಡಸ್ವಾಮಿ ಅವರೊಂದಿಗೆ ರಾಜ್ಯಾದ್ಯಂತ ಓಡಾಟ ನಡೆಸುವ ಮೂಲಕ ರಾಜ್ಯಾದ್ಯಂತ ರೈತ ಸಂಘಟನೆಗಳಿಗೆ ಬಲ ತುಂಬಿದರು. ರೈತರ ಚಳವಳಿ, ಪ್ರತಿಭಟನೆ, ಹೋರಾಟ, ವಿಧಾನಸೌಧ ಚಲೋದಂತಹ ನೂರಾರು ಹೋರಾಟಗಳಲ್ಲಿ ಪಾಲ್ಗೊಂಡು ರೈತರ ಶಕ್ತಿಯಾಗಿ ಕೆಲಸ ಮಾಡಿದರು. ದೆಹಲಿಯಲ್ಲೂ ರೈತ ಹೋರಾಟಗಳನ್ನು ನಡೆಸಿದ್ದರು ಎಂದರು.
ಚಿತ್ರ ನಿರ್ದೇಶಕ, ರೈತ ಹೋರಾಟಗಾರ ಎನ್.ಆರ್.ನಂಜುಂಡೇಗೌಡರು ಮಾತನಾಡಿ, ಎನ್.ಡಿ.ಸುಂದರೇಶ್ ಅವರ ಹೋರಾಟದ ಬದುಕು ಎಲ್ಲರಿಗೂ ಮಾರ್ಗದರ್ಶಿ. ಅವರ ಜೀವನ ಹತ್ತಿರದಿಂದ ನೋಡಿದ ಹಾಗೂ ಅವರ ಬದುಕಿನ ಬಗ್ಗೆ ಅಧ್ಯಯನ ನಡೆಸಿದ ಎಲ್ಲರಿಗೂ ಸ್ಫೂರ್ತಿಯಾಗಿ ನಿಲ್ಲುತ್ತಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯಾದ್ಯಂತ ರೈತ ಹೋರಾಟಗಳಲ್ಲಿ ಭಾಗಿಯಾದ ಅವರ ಶಕ್ತಿಯ ಅಗಾಧತೆ ಪರಿಚಯವಾಗುತ್ತದೆ ಎಂದು ತಿಳಿಸಿದರು.


ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಯಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಿದರು. ರೈತರು ಅತ್ಯಂತ ಗೌರವಯುತವಾಗಿ ಬದುಕುವ ಆಲೋಚನೆಯನ್ನು ಎಲ್ಲ ರೈತರಲ್ಲಿಯೂ ಮೂಡಿಸಿದರು. ರೈತರು ಅನ್ಯಾಯಕ್ಕೊಳಗಾದ ಎಲ್ಲ ಸಂದರ್ಭದಲ್ಲಿಯೂ ಹೋರಾಟದ ಮೂಲಕ ಧ್ವನಿಯಾಗಿದ್ದರು ಎಂದು ಹೇಳಿದರು.
ದೇಶದ ಅನ್ನದಾತರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹತ್ತಾರು ನೀತಿಗಳನ್ನು ಜಾರಿಗೆ ಬರಬೇಕಾದ ಅಗತ್ಯವಿದೆ. ರೈತರ ಏಳಿಗೆಗೆ ಸರ್ಕಾರಗಳು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.


ಎನ್.ಡಿ.ಸುಂದರೇಶ್ ಅವರ ಬದುಕು ಮತ್ತು ರೈತ ಹೋರಾಟ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿ, ರೈತ ಹೋರಾಟಗಾರ ಎನ್.ಡಿ.ಸುಂದರೇಶ್ ಅವರ ಜೀವನವೇ ಒಂದು ಹೋರಾಟ. ರೈತರ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಹೋರಾಟ ನಡೆಸಿದರು. ಅವರ ಜೀವನ ನಡೆಸಿದ ಹಾದಿ ಬಗ್ಗೆ ಯುವರೈತರು ಅಧ್ಯಯನ ನಡೆಸಬೇಕು. ಚಳವಳಿ ನಾಯಕ ಸುಂದರೇಶ್ ಅವರಂತೆ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರುದ್ರಮುನಿ ಎನ್.ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಂ.ಎನ್.ಸುಂದರರಾಜ್, ಪ್ರಾಧ್ಯಾಪಕಿ ವಾಣಿ ಭಂಡಾರಿ ಉಪನ್ಯಾಸ ನಡೆಸಿಕೊಟ್ಟರು. ಎನ್.ಡಿ.ಸುಂದರೇಶ್ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಎಚ್.ಎಸ್.ರುದ್ರೇಶ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ೧೫-೨೦ ಕವಿಗಳು ಭಾಗವಹಿಸಿದ್ದರು.
ಪ್ರಮುಖರಾದ ಚನ್ನಬಸಪ್ಪ ನ್ಯಾಮತಿ, ಗೋಪಜ್ಜಿ ನಾಗಪ್ಪ, ಸುಮಿತ್ರಮ್ಮ, ಎನ್.ಎಸ್.ಸುಧಾಂಶು, ಹಸನ್ ಬೆಳ್ಳಿಗನೂಡು ಮತ್ತಿತರರು ಉಪಸ್ಥಿತರಿದ್ದರು.

Ad Widget

Related posts

ರಾಜ್ಯದಲ್ಲೇ ಮೊದಲ ಬಾರಿಗೆ ಕಪ್ಪೆ ಹಬ್ಬ

Malenadu Mirror Desk

ಶಿವಮೊಗ್ಗ ನಗರದಲ್ಲಿ ಕೊರೊನ ಹೆಚ್ಚಳ

Malenadu Mirror Desk

ಸಾಗರ ಕ್ಷೇತ್ರದಲ್ಲಿ ಹಾಲಪ್ಪರ ಭರದ ಪ್ರಚಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.