ಅವೈಜ್ಞಾನಿಕ ಮತ್ತು ಅಸಂಬದ್ಧ ಆಸ್ತಿ ತೆರಿಗೆ ವಿರೋಧಿಸಿ ಆ.25 ರಂದು ಬೆಳಿಗ್ಗೆ ೧೧ ಗಂಟೆಗೆ ಮಹಾನಗರಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್ , ಪಾಲಿಕೆ ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಏರಿಸಿರುವುದನ್ನು ನಮ್ಮ ಒಕ್ಕೂಟ ಖಂಡಿಸುತ್ತಲೇ ಬಂದಿದೆ. ಈ ಬಗ್ಗೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಪ್ರತಿಭಟನೆ ಮಾಡಿದ್ದೇವೆ. ಕರಪತ್ರ ಹಂಚಿದ್ದೇವೆ. ಸಚಿವರಿಗೆ ತಿಳಿಸಿದ್ದೇವೆ. ಸರ್ಕಾರದ ಮಟ್ಟದಲ್ಲೂ ಮಾತನಾಡಿದ್ದೆವು. ಆದರೆ, ನಮ್ಮ ಯಾವುದೇ ಹೋರಾಟಕ್ಕೂ ಸರ್ಕಾರವಾಗಲಿ, ಪಾಲಿಕೆಯಾಗಲಿ, ಜಿಲ್ಲಾಡಳಿತವಾಗಲಿ, ಸಚಿವರಾಗಲಿ ಸ್ಪಂದಿಸಲಿಲ್ಲ. ಹಾಗಾಗಿ 2ನೇ ಹಂತದಲ್ಲಿ ನಾವು ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ನಾಳೆ ಪಾಲಿಕೆಗೆ ಮುತ್ತಿಗೆ ಹಾಕಲಿದ್ದೇವೆ ಎಂದರು.
ಶಿವಮೊಗ್ಗದಲ್ಲಿ ಆಸ್ತಿ ತೆರಿಗೆ ಅತ್ಯಂತ ದುಬಾರಯಾಗಿದೆ. ಅದು ಹೇಗೆ ನಿರ್ಧಾರ ಮಾಡಿದ್ದಾರೋ ನಿರ್ಧಾರ ಮಾಡಿದ್ದವರಿಗೆ ಗೊತ್ತಿಲ್ಲ. ಒಂದೊಂದು ರೋಡಿಗೆ ಒಂದೊಂದು ತೆರಿಗೆ ಇದೆ. ತೆರಿಗೆ ಹೆಚ್ಚಳ ಶೇ.100 ಕ್ಕೂ ಹೆಚ್ಚಿದೆ. ಮುಂದೊಂದು ದಿನ ಆಸ್ತಿ ಮಾರಿ ತೆರಿಗೆ ಕಟ್ಟುವಂತಹ ಸ್ಥಿತಿ ಬಂದರೆ ಆಶ್ಚರ್ಯವೇ ಇಲ್ಲ. ಒಕ್ಕೂಟ ಈ ಬಗ್ಗ ಅಂಕಿ ಅಂಶಗಳ ಸಮೇತ ಜಿಲ್ಲಾಡಳಿತಕ್ಕೆ ಪಾಲಿಕೆಗೆ ತಿಳಿಸಿದೆ. ಅಷ್ಟೆ ಏಕೆ ಸಚಿವರನ್ನು ಕೂಡ ಮನವಿ ಮಾಡಿದೆ. ಮೊದ ಮೊದಲು ಸ್ಪಂದಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಈಗ ಮೌನವಾಗಿ ಬಿಟ್ಟಿದ್ದಾರೆ. ಯಾವ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಕೋವೀಡ್ ಸಂಕಷ್ಟಕ್ಕೆ ಜನರು ತುತ್ತಾಗಿದ್ದಾರೆ. ಇತಂಹ ಸಂದರ್ಭದಲ್ಲಿ ತೆರಿಗೆಯನ್ನೇ ರದ್ದು ಮಾಡಬೇಕಿತ್ತು. ಆದರೆ ಪಾಲಿಕೆಯು ತೆರಿಯನ್ನು ಏರಿಸಿ ಇದು ಸರ್ಕಾರದ ನೀತಿ ಎನ್ನುತ್ತಿದ್ದಾರೆ. ಈ ತೆರಿಗೆ ಪಾಲಿಸಿ ಬೆಂಗಳೂರಿಗೆ ಮಾತ್ರ ಅನ್ವಯಿಸುವುದಿಲ್ಲ. ಏಕೆಂದರೆ ಅವೈಜ್ಞಾನಿಕವಾಗಿ ಎಸ್.ಆರ್. ದರ ಆಧರಿಸಿ ತೆರಿಗೆಯನ್ನು ವಿಧಿಸಲಾಗುತ್ತಿದೆ. ಈ ಪದ್ದತಿಯನ್ನು ಯಾವ ಬುದ್ದಿವಂತರು ಹೇಳಿಕೊಟ್ಟರೋ ಗೊತ್ತಿಲ್ಲ. ಖಾಲಿ ನಿವೇಶನಗಳಿಗೂ ತೆರಿಗೆ ಏರಿಕೆಯಾಗಿದೆ. ಸಂಕಷ್ಟದ ವರ್ಷದಲ್ಲಿ ತೆರಿಗೆ ಹೆಚ್ಚಿಸಿರುವುದು ಯಾವುದೇ ಕಾರಣಕ್ಕೂ ತರವಲ್ಲ. ಕೂಡಲೇ ತೆರಿಗೆ ಇಳಿಸಬೇಕು. ಎಸ್.ಆರ್.ದರ ನಿಗದಿಮಾಡಬಾರದು ಎಂಬುದು ನಮ್ಮ ಹಕ್ಕೊತ್ತಾಯವಾಗಿದೆ ಎಂದರು.
ಸಾರ್ವಜನಿಕರು, ಸಂಘ ಸಂಸ್ಥೆಗಳು, ವಿವಿಧ ಬಡಾವಣೆಗಳ ನಿವಾಸಿ ಸಂಘದವರು ತಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಈ ಹೋರಾಟವನ್ನು ನಮ್ಮ ಒಕ್ಕೂಟ ಕೈಗೆತ್ತಿಕೊಂಡಿದೆ. ಅವೈಜ್ಞಾನಿಕ ತೆರಿಗೆಯನ್ನು ವಾಪಸ್ ತೆಗೆದುಕೊಳ್ಳುವವರೆಗೂ ನಮ್ಮ ಉಗ್ರ ಹೋರಾಟ ಅನಿವಾರ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಬಿ.ವಿ.ಗೋಪಾಲಕೃಷ್ಣ, ಪದಾಧಿಕಾರಿಗಳಾದ ಡಾ. ಸತೀಶ್ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯ, ಸೀತಾರಾಮ್, ಅಶೋಕ್ಕುಮಾರ್ ಇದ್ದರು.