ಶಿವಮೊಗ್ಗ,ಆ.೨೬: ಏಳು ವರ್ಷ ಪ್ರೀತಿಸಿದ್ದ ಹುಡುಗಿ ತನ್ನಿಂದ ಅಂತರ ಕಾಪಾಡಿಕೊಂಡಿದ್ದಳೆಂದು ಕುಪಿತಗೊಂಡಿದ್ದ ಯುವಕನೊಬ್ಬ ಆಕೆಯನ್ನು ಕೊಲೆಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ರಿಪ್ಪನ್‌ಪೇಟೆ ಸಮೀಪದ ಬೆಳ್ಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಬಾಳೇಕೊಡ್ಲು ಸಮೀಪ ನಡೆದಿದೆ.
ಭಟ್ಕಳ&ಸಾಗರ ತಾಲೂಕು ಗಡಿಯಲ್ಲಿರುವ ಬಾನುಕುಳಿ ಗ್ರಾಮದ ಕವಿತಾ(೨೧) ಕೊಲೆಯಾದ ಯುವತಿ. ಶಿವಮೊಗ್ಗದ ನಂಜಪ್ಪ ಬಿಎಸ್ಸಿ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಕವಿತಾ ಎರಡು ದಿನದ ಹಿಂದೆ ಹಾಸ್ಟೆಲ್‌ನಿಂದ ಹೊರಹೋದವಳು ಬಂದಿರಲಿಲ್ಲ. ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸರಿಗೆ ದೂರು ನೀಡಲಾಗಿತ್ತು. ಹೀಗೆ ನಾಪತ್ತೆಯಾಗಿದ್ದ ಕವಿತಾ ಶವ ಬಾಳೇಕೊಡ್ಲು ಕಾಡಿನಲ್ಲಿ ಪತ್ತೆಯಾಗಿದೆ.
ಘಟನೆ ವಿವರ
ಕವಿತಾ ಮತ್ತು ರಿಪ್ಪನ್ ಪೇಟೆ ಸಮೀಪದ ತಳಲೆ ಗ್ರಾಮದ ಶಿವಮೂರ್ತಿ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನರ್ಸಿಂಗ್ ಕೋರ್ಸ್‌ಗೆ ಸೇರಿದ ಮೇಲೆ ಕವಿತಾ ಭದ್ರಾವತಿಯ ಯುವಕನೊಬ್ಬನೊಂದಿಗೆ ಅನೋನ್ಯವಾಗಿದ್ದಳೆನ್ನಲಾಗಿದೆ. ಈ ವಿಷಯ ತಿಳಿದ ಶಿವಮೂರ್ತಿ ಮೊನ್ನೆ ಹಾಸ್ಟೆಲ್‌ಗೆ ಬಂದು ಕವಿತಾಳನ್ನು ಪುಸಲಾಯಿಸಿ ಹೊರಗೆ ಕರೆದುಕೊಂಡು ಹೋಗಿದ್ದನೆನ್ನಲಾಗಿದೆ. ಕವಿತಾ ಜತೆ ಪ್ರೇಮ ನಿರಾಕರಣೆ ಬಗ್ಗೆ ತಗಾದೆ ತೆಗೆದ ಶಿವಮೂರ್ತಿ ಕವಿತಾಳನ್ನು ಕೊಲೆಮಾಡಿದ್ದಾನೆನ್ನಲಾಗಿದೆ. ಸ್ಥಳೀಯ ನಿವಾಸಿಗಳು ಕಾಡಿನಲ್ಲಿ ಶವ ಇರುವುದನ್ನು ಪೊಲೀಸರಿಗೆ ತಿಳಿಸಿದ್ದಾರೆ. ಶವ ಪತ್ತೆಯಾಗಿರುವುದು ತಿಳಿಯುತ್ತಿದ್ದಂತೆ ಮರಣಪತ್ರ ಬರೆದಿಟ್ಟ ಶಿವಮೂರ್ತಿ ವಿಷ ಸೇವಿಸಿದ್ದಾನೆ. ತಕ್ಷಣ ಪೋಷಕರು ಶಿವಮೂರ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತುಂಗಾನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದರಿಂದ ಕವಿತಾ ಕೊಲೆ ಬಗ್ಗೆ ಮತ್ತಷ್ಟು ತನಿಖೆ ನಡೆಯಬೇಕಿದೆ.