ಬೆಂಗಳೂರಿಂದ ಮಾವನ ಮನೆಗೆ ಖುಷಿಖುಷಿಯಾಗಿಯೇ ಬಂದಿದ್ದ ಅಳಿಯ, ಕುಟುಂಬವನ್ನು ಕಾರವಾರ ಜಿಲ್ಲೆಗೆ ಪ್ರವಾಸನೂ ಕರೆದುಕೊಂಡು ಹೋಗಿದ್ದ. ಆದರೆ ವಾಪಸ್ ಊರಿಗೆ ಹೋಗುವಾಗಲೇ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡು ತುಂಬಿ ಹರಿವ ಚಾನಲ್‌ಗೆ ಕಾರನ್ನು ಹಾರಿಸಿ ಜೀವನಯಾತ್ರೆ ಮುಗಿಸಿಬಿಟ್ಟ. ನಿಜಕ್ಕೂ ಈ ಸನ್ನಿವೇಶ ಅತ್ಯಂತ ಹೃದಯ ವಿದ್ರಾವಕವಾದದ್ದು, ಬಂಧುವೊಬ್ಬರಿಗೆ ಫೋನ್ ಮಾಡಿ ಹತ್ತು ನಿಮಿಷದಲ್ಲಿ ನಾವೆಲ್ಲಾ ಸಾಯ್ತೇವೆ ಎಂದು ವಾಟ್ಸ್ ಆ್ಯಪ್‌ನಲ್ಲಿ ವಾಯ್ಸ್ ಮೆಸೇಜ್ ಕಳಿಸಿದ್ದು, ಎಷ್ಟೇ ಸಾಂತ್ವನ ಹೇಳಿದರು ಅವರು ನಿರ್ಧಾರ ಬದಲಿಸದೆ ತಾವು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರನ್ನು ಭದ್ರಾ ನಾಲೆಗೆ ಇಳಿಸಿಯೇ ಬಿಟ್ಟರು. ಅತ್ತೆ ಮತ್ತು ಅಳಿಯ ಸಾವಿಗೀಡಾದರೆ, ಅದೃಷ್ಟವಶಾತ್ ಪತ್ನಿ ಮತ್ತು ಮಗ ಈಜಿ ದಡ ಸೇರಿದ್ದಾರೆ.
ಇದು ಭದ್ರಾವತಿ ಜೇಡಿಕಟ್ಟೆಯ ಅಳಿಯ ಮಂಜುನಾಥ್ ಕುಟುಂಬದ ದುರಂತ ಕತೆ. ಬೆಂಗಳೂರಿನ ಗಿರಿನಗರದಲ್ಲಿ ವಾಸವಿದ್ದ ಮಂಜುನಾಥ್‌ಗೆ ಭದ್ರಾವತಿ ಜೇಡಿಕಟ್ಟೆಯ ನೀತು ಎಂಬುವರನ್ನು ವಿವಾಹ ಮಾಡಿಕೊಡಲಾಗಿತ್ತು. ನೀತು ಅವರ ತಾಯಿ ಸುನಂದಮ್ಮ ಸಹ ಮಗಳೊಂದಿಗೆ ಬೆಂಗಳೂರಿನಲ್ಲಿಯೇ ವಾಸವಾಗಿದ್ದರು. ಈಚೆಗೆ ಅತ್ತೆ ,ಪತ್ನಿ ಮತ್ತು ಮಗ ಧ್ಯಾನ್ ಜತೆ ಮಂಜುನಾಥ್ ಭದ್ರಾವತಿಗೆ ಬಂದಿದ್ದರು. ಪ್ರವಾಸ ಮುಗಿಸಿ ಬುಧವಾರ ರಾತ್ರಿ ವಾಪಸ್ ಬೆಂಗಳೂರಿಗೆ ಕುಟುಂಬ ಹೋಗುತ್ತಿತ್ತು.
ನಾವೆಲ್ಲಾ ಸಾಯ್ತೇವೆ:
ಮಂಜುನಾಥ್ ಅವರು ರಾಜು ಎಂಬುವವರಿಗೆ ವಾಯ್ಸ್ ಮೆಸೇಜ್ ಕಳಿಸಿ ನಾವು ಕೆಲವೇ ನಿಮಿಷದಲ್ಲಿ ಸಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ರಾಜು ಅವರು ಎಷ್ಟೇ ಸಂತೈಸಿದರೂ, ಮಂಜುನಾಥ್ ಅವರು ನನಗೆ ಎಲ್ಲಾ ಮೋಸ ಮಾಡಿದರು ಎಂದು ತರೀಕೆರೆ ತಾಲೂಕು ಎಂ.ಸಿ.ಹಳ್ಳಿ ಬಳಿ ತುಂಬಿ ಹರಿಯುವ ಭದ್ರಾ ನಾಲೆಗೆ ಕಾರು ಹಾರಿಸಿಯೇ ಬಿಟ್ಟಿದ್ದಾರೆ. ಕಾರು ನೀರಿಗೆ ಬೀಳುತ್ತಲ್ಲೇ ಪತ್ನಿ ನೀತು ಮತ್ತು ಮಗ ಧ್ಯಾನ್ ಈಜಿ ದಡ ಸೇರಿದ್ದಾರೆ. ಅತ್ತೆ ಸುನಂದಮ್ಮ ಸೀಟ್ ಬೆಲ್ಟ್ ಹಾಕಿಕೊಂಡು ಕಾರಿನಲ್ಲಿಯೇ ಸಾವಿಗೀಡಾಗಿದ್ದಾರೆ. ಹೊರಗೆ ಬಿದ್ದಿದ್ದ ಮಂಜುನಾಥ್ ಕೂಡಾ ದುರಂತ ಸಾವುಕಂಡಿದ್ದಾರೆ.
ಜೇಡಿಕಟ್ಟೆಯಲ್ಲಿ ಕುಟುಂಬ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಹಾಗಂತ ಮನೆಯಲ್ಲಿ ಯಾವ ಗಲಾಟೆಗಳು ನಡೆದಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಸತ್ಯ ಇನ್ನಷ್ಟೇ ಹೊರಬರಬೇಕಿದೆ.