ಏಳು ವರ್ಷ ಪ್ರೀತಿಸಿದ್ದ ಹುಡುಗಿ ತನ್ನಿಂದ ಅಂತರ ಕಾಪಾಡಿಕೊಂಡಿದ್ದಳೆಂದು ಕುಪಿತಗೊಂಡು ಯುವತಿಯನ್ನು ಕೊಲೆ ಮಾಡಿ ವಿಷ ಕುಡಿದಿದ್ದ ಪಾಗಲ್ ಪ್ರೇಮಿ ಶಿವಮೂರ್ತಿ(೨೨)ಯೂ ಸಾವುಕಂಡಿದ್ದಾನೆ. ಕಗ್ಗಲಿಜಡ್ಡಿನ ಶಿವಮೂರ್ತಿ ಶಿವಮೊಗ್ಗದ ನರ್ಸಿಂಗ್ ಹಾಸ್ಟೆಲ್‌ನಿಂದ ಕವಿತಾಳನ್ನು ಬಾಳೆಕೊಡ್ಲು ಕಾಡಿಗೆ ಕರೆತಂದು ವೇಲಿನಿಂದ ಕುತ್ತಿಗೆ ಬಿಗಿದು ಕೊಲೆಮಾಡಿದ್ದು. ಶಿವಮೊಗ್ಗ ನಂಜಪ್ಪ ನರ್ಸಿಂಗ್ ಕಾಲೇಜಿನ ಹಾಸ್ಟೆಲ್‌ನವರು ವಿದ್ಯಾರ್ಥಿನಿ ನಾಪತ್ತೆ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.
ಕಾಡಿನಲ್ಲಿ ಯುವತಿ ಶವ ಪತ್ತೆಯಾಗುತ್ತಿದ್ದಂತೆ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದ ಶಿವಮೂರ್ತಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆತ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾನೆ.
ಘಟನೆ ವಿವರ:
ಭಟ್ಕಳ-ಸಾಗರ ತಾಲೂಕು ಗಡಿಯಲ್ಲಿರುವ ಬಾನುಕುಳಿ ಗ್ರಾಮದ ಕವಿತಾ(೨೧) ಮತ್ತು ರಿಪ್ಪನ್ ಪೇಟೆ ಸಮೀಪದ ತಳಲೆ ಕಗ್ಗಲಿಜಡ್ಡು ಗ್ರಾಮದ ಶಿವಮೂರ್ತಿ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನರ್ಸಿಂಗ್ ಕೋರ್ಸ್‌ಗೆ ಸೇರಿದ ಮೇಲೆ ಕವಿತಾ ಭದ್ರಾವತಿಯ ಯುವಕನೊಬ್ಬನೊಂದಿಗೆ ಅನೋನ್ಯವಾಗಿದ್ದಳೆನ್ನಲಾಗಿದೆ. ಈ ವಿಷಯ ತಿಳಿದ ಶಿವಮೂರ್ತಿ ಮೊನ್ನೆ ಹಾಸ್ಟೆಲ್‌ಗೆ ಬಂದು ಕವಿತಾಳನ್ನು ಪುಸಲಾಯಿಸಿ ಹೊರಗೆ ಕರೆದುಕೊಂಡು ಹೋಗಿದ್ದನೆನ್ನಲಾಗಿದೆ. ಕವಿತಾ ಜತೆ ಪ್ರೇಮ ನಿರಾಕರಣೆ ಬಗ್ಗೆ ತಗಾದೆ ತೆಗೆದ ಶಿವಮೂರ್ತಿ ಕವಿತಾಳನ್ನು ಕೊಲೆಮಾಡಿದ್ದನು. ಸ್ಥಳೀಯ ನಿವಾಸಿಗಳು ಕಾಡಿನಲ್ಲಿ ಶವ ಇರುವುದನ್ನು ಪೊಲೀಸರಿಗೆ ತಿಳಿಸಿದ್ದಾರೆ. ಶವ ಪತ್ತೆಯಾಗಿರುವುದು ತಿಳಿಯುತ್ತಿದ್ದಂತೆ ಮರಣಪತ್ರ ಬರೆದಿಟ್ಟ ಶಿವಮೂರ್ತಿ ವಿಷ ಸೇವಿಸಿದ್ದನು. ತುಂಗಾನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರೀತಿ ಪ್ರೇಮದ ಹೆಸರಲ್ಲಿ ಎರಡು ಯುವ ಜೀವಗಳು ಬಲಿಯಾದಂತಾಗಿದೆ. ಸ್ನೇಹಿತರು ಮತ್ತು ಪೋಷಕರು ಇಬ್ಬರಿಗೂ ಕರೆದು ಬುದ್ದಿ ಹೇಳಿದ್ದರೆ ಎರಡು ಜೀವಗಳನ್ನ ಉಳಿಸಬಹುದಿತ್ತೇನೊ. ಪಾಗಲ್ ಪ್ರೇಮಿಯಿಂದ ಮಗಳನ್ನು ಕಳೆದುಕೊಂಡ ಕವಿತಾ ಪೋಷಕರ ರೋದನೆ ಹೇಳತೀರದಾಗಿದೆ.