ಸೊರಬ ಈಡಿಗ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಚಿವ ಈಶ್ವರಪ್ಪ
ಈಡಿಗ ಸಮುದಾಯದ ಭವನ ಸರ್ಕಾರದ ಭವನವಾಗದೆ ಸಮಾಜದ ಭವನವಾಗಿ ನಿರ್ಮಾಣಗೊಳ್ಳುವಲ್ಲಿ ಸಮಾಜ ಬಾಂಧವರು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕರೆ ನೀಡಿದರು. ಶುಕ್ರವಾರ ಸೊರಬ ಪಟ್ಟಣದ ಸಾಗರ ರಸ್ತೆಯಲ್ಲಿರುವ ನಿವೇಶನದಲ್ಲಿ ತಾಲೂಕು ಆರ್ಯ ಈಡಿಗ (ದೀವರ) ಸಮಾಜದ ಸಮುದಾಯ ಭವನದ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರದ ಅನುದಾನದ ಜತೆಗೆ ಸಮಾಜ ಬಾಂಧವರು ಸಹಕಾರ ನೀಡುವ ಮೂಲಕ ಸಮುದಾಯ ಭವನ ನಿರ್ಮಾಣ ಕಾರ್ಯವು ಶೀಘ್ರವಾಗಿ ಪೂರ್ಣಗೊಳ್ಳಬೇಕು ಎಂದ ಅವರು, ನನ್ನ ರಾಜಕೀಯ ಜೀವನದಲ್ಲಿ ಮಾಜಿ ಮುಖ್ಯ ಮಂತ್ರಿ ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಯಡಿಯೂರಪ್ಪ ಅವರು ಹಾಸುಹೊಕ್ಕಾಗಿದ್ದು, ಸಿಗಂದೂರು ದೇವಸ್ಥಾನದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಬೆರೆಸುವುದಿಲ್ಲ. ಒಂದು ವೇಳೆ ದೇವರ ಹೆಸರಿನಲ್ಲಿ ಯಾರೇ ರಾಜಕಾರಣ ಮಾಡಿದರೂ ಅವರ ಕುಟುಂಬಕ್ಕೆ ಒಳಿತಾಗುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿಯೇ ಮಾದರಿ ಭವನ ನಿರ್ಮಾಣಗೊಳ್ಳಲು ಮುಂದಾಗಿರುವುದ ಸಂತಸ ತಂದಿದೆ. ಈ ಸಮುದಾಯ ಭವನವು ಸಮಾಜದ ಸಂಘಟನೆಗೆ ಶಕ್ತಿಯಾಗಬೇಕು ಎಂದ ಅವರು, ರಾಜಕಾರಣ ಬೇರೆ ಸಂಘಟನೆ ಬೇರೆ ಆದರೆ ಒಳ್ಳೆಯ ಕೆಲಸಕ್ಕೆ ಮತ್ಸರವಿಲ್ಲ ಎಂದರು. ಈಡಿಗರ ಸಮುದಾಯ ಭವನ ಪೂರ್ಣಗೊಳ್ಳುವ ತನಕ ಸದಾ ತಮಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಮಾಜದಲ್ಲಿ ಅಸ್ಪಶ್ರ್ಯತೆ, ಮೌಢ್ಯಗಳ ವಿರುದ್ಧ ಹೋರಾಡಿದ ನಾರಾಯಣ ಗುರುಗಳ ವಿಚಾರಧಾರೆಗಳು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಹಿಂದುಳಿದ ವರ್ಗಗಳ ಸಮುದಾಯವಾದ ಈಡಿಗ ಸಮಾಜಕ್ಕೆ ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಅವರ ಕೊಡುಗೆ ಇದ್ದು, ಜನರ ನಂಬಿಕೆ, ವಿಶ್ವಾಸದ ಮೂಲಕ ಪ್ರತಿಯೊಬ್ಬರು ಸಮುದಾಯಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಚಿಂತನೆ ಸರ್ಕಾರದ ಮುಂದಿದೆ ಎಂದು ತಿಳಿಸಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ತಾಲೂಕು ಆರ್ಯ ಈಡಿಗ (ದೀವರ) ಸಮಾಜದ ಅಧ್ಯಕ್ಷ ಅಜ್ಜಪ್ಪ ಪ್ರಾಸ್ತಾವಿಕ ಮಾತನಾಡಿದರು.
ಸಿಗಂದೂರು ದೇವಾಲಯದ ಧರ್ಮದರ್ಶಿ ಢಾ. ರಾಮಪ್ಪ, ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ. ತಾಲೂಕು ಸಂಘದ ಮಾಜಿ ಅಧ್ಯಕ್ಷ ಹನುಮಂತಪ್ಪ ಯಲಸಿ, ಪುರಸಭೆ ಅಧ್ಯಕ್ಷ ಎಂ.ಡಿ.ಉಮೇಶ್, ತಹಸೀಲ್ದಾರ್ ಶಿವಾನಂದ ಪಿ.ರಾಣೆ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಕೆ.ಮಂಜುನಾಥ್, ವೈ.ಜಿ.ಪುಟ್ಟಸ್ವಾಮಿ, ತಬಲಿ ಬಂಗಾರಪ್ಪ, ಎಂ.ಡಿ.ಶೇಖರ್, ಎಚ್,ಗಣಪತಿ, ಜಿ.ಡಿ.ನಾಯಕ್, ನಾಗರಾಜ್ ಚಿಕ್ಕಸವಿ, ಹನುಮಂತಪ್ಪ ಯಲಸಿ, ಪರಶುರಾಮ ಸಣಬೈಲ್, ಲಿಂಗೇಶ್, ಶಾಂತಮ್ಮ, ಸಮಿತ್ರಾ ಸೇರಿದಂತೆ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇತರರಿದ್ದರು. ತಾಲೂಕಿನ ಈಡಿಗ ಸಮಾಜಕ್ಕೆ ನಿವೇಶನ ದೊರೆಯಲು ಕಾರಣೀಕರ್ತರಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು.
ಈಡೇರಿದ ಬಂಗಾರಪ್ಪ ಕನಸು
ವೇದಿಕೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಶಾಸಕ ಕುಮಾರ ಬಂಗಾರಪ್ಪ ಅವರು, ಸೊರಬ ತಾಲೂಕಿನಲ್ಲಿ ದೀವರು ಸೇರಿದಂತೆ ತಳಸಮುದಾಯಕ್ಕೆ ಸ್ವಾಭಿಮಾನ ಮತ್ತು ಶಕ್ತಿ ನೀಡಿದವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ. ಬಹುಸಂಖ್ಯಾತ ಸಮುದಾಯಗಳು ತನ್ನೊಂದಿಗೆ ಚಿಕ್ಕಸಮಾಜಗಳನ್ನು ಕೊಂಡೊಯ್ಯಬೇಕೆಂದು ಅವರು ಹೇಳುತ್ತಿದ್ದರು. ಈಡಿಗ ಸಮಾಜಕ್ಕೆ ಸೊರಬದಲ್ಲಿ ಒಂದು ಸಮುದಾಯ ಭವನ ನಿರ್ಮಾಣ ಮಾಡಬೇಕೆಂಬ ಆಸೆ ಅವರಿಗಿತ್ತು. ಇಂದು ಈ ಭವ್ಯ ಭವನಕ್ಕೆ ಅಡಿಗಲ್ಲು ಹಾಕಿದ್ದು, ಬಂಗಾರಪ್ಪರ ಕನಸು ನನಸಾಗಲಿದೆ ಎಂದರು.
ತಾಲೂಕಿನ ಎಲ್ಲಾ ಸಮುದಾಯಗಳಿಗೂ ನಿವೇಶನ ಕೊಡುವ ಚಿಂತನೆ ಇದೆ. ಎಲ್ಲ ಜಾತಿ ಸಮುದಾಯಗಳನ್ನು ಸಮನ್ವಯತೆಯಿಂದ ಮೊದಲಿಂದಲೂ ನೋಡಿಕೊಂಡು ಬರಲಾಗುತ್ತಿದೆ. ಮುಂದೆಯೂ ಅದನ್ನು ಮುಂದುವರಿಸುತ್ತೇನೆ ಎಂದು ಶಾಸಕರು, ಬ್ರಹ್ಮರ್ಷಿ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ರಚನೆ ಆಗಬೇಕಿದೆ. ಅವರ ಹೆಸರಿನಲ್ಲಿ ಒಂದು ಮೆಡಿಕಲ್ ಕಾಲೇಜು ಆರಂಭಿಸುವ ಚಿಂತನೆಯೂ ಸರಕಾಋದ ಸರಕಾರದ ಮುಂದಿದೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಬಗ್ಗೆ ಭರವಸೆ ನೀಡಿದ್ದರು ಎಂದರು.