ಸ್ವಾತಂತ್ರ್ಯದ ಅಮೃತ ಮಹೋತ್ಸವ
ಶಿವಮೊಗ್ಗ, ಆ.29 : ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ವರ್ಷವಿಡೀ ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳು ಯುವ ಜನರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ನೆನಪಿಸುತ್ತಾ, ರಾಷ್ಟ್ರೀಯತೆ ಸ್ಪೂರ್ತಿಯನ್ನು ತುಂಬಲು ಪ್ರೇರಕವಾಗಲಿ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಭಾನುವಾರ ಶಿವಮೊಗ್ಗ ರಂಗಾಯಣ ಮತ್ತು ಜಿಲ್ಲಾಡಳಿತ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ `ರಂಗಾಮೃತ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 75ವರ್ಷಗಳಲ್ಲಿ ದೇಶ ಮಾಡಿರುವ ಸಾಧನೆ, ಪ್ರಗತಿಗಳ ಬಗ್ಗೆ ನೆನಪಿಸುವಂತಹ ಕಾರ್ಯಕ್ರಮ ಇದಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಬದುಕು, ತ್ಯಾಗಗಳು ಯುವ ಜನರಿಗೆ ಸ್ಪೂರ್ತಿಯಾಗಬೇಕಿದೆ. ಪ್ರತಿಯೊಬ್ಬರೂ ಅವರ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸುವುದೇ ದೇಶವನ್ನು ಕಟ್ಟುವ ಕಾರ್ಯ. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರ ಪಾಲುದಾರಿಕೆ ಅಗತ್ಯ. ಎಲ್ಲರೂ ತಮ್ಮ ಪಾಲಿನ ಕಾರ್ಯ ನಿರ್ವಹಿಸಿದರೆ ದೇಶ ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಲು ಸಾಧ್ಯವಿದೆ ಎಂದರು.
ಕೋವಿಡ್ ನಡುವೆಯೇ ಬದುಕನ್ನು ಕಟ್ಟಿಕೊಳ್ಳಲು ನಾವು ಕಲಿಯುತ್ತಿದ್ದೇವೆ. ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುತ್ತಾ, ಕನಿಷ್ಟ ಶಿಸ್ತನ್ನು ಪಾಲಿಸಿದರೆ ಕೋವಿಡ್ ಎದುರಿಸಿ ಬದುಕಲು ಸಾಧ್ಯವಿದೆ ಎಂದು ಅವರು ಹೇಳಿದರು.
ರಂಗ ಸಮಾಜದ ಸದಸ್ಯ ಹಾಲಸ್ವಾಮಿ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಅಸಂಖ್ಯಾತ ಜನಸಾಮಾನ್ಯರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಈಸೂರು ಹೋರಾಟ ಚರಿತ್ರೆ ಪುಟದಲ್ಲಿ ಅಜರಾಮರವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಅವರು ಮಾತನಾಡಿ, ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಮಾತ್ರ ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯ ಎಂದರು.
ಹಿರಿಯ ರಂಗಕಲಾವಿದ ಪದ್ಮನಾಭ ಭಟ್ ಅವರು ಉಪಸ್ಥಿತರಿದ್ದರು. ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತಾಧಿಕಾರಿ ಶಫಿ ಸಾದುದ್ದೀನ್ ವಂದಿಸಿದರು. ವತ್ಸಲಾ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ರಂಗಾಯಣ ಕಲಾವಿದರ ದೇಶಭಕ್ತಿ ಸಂಗೀತ, ಈಸೂರು ಶೂರರು ಮತ್ತು ವಿದುರಾಶ್ವಥದಲ್ಲಿ ಸ್ವಾತಂತ್ರ್ಯದ ಬೆಳಕು ಎಂಬ ಎರಡು ಕಿರು ನಾಟಕ ಪ್ರದರ್ಶನ, ಸಹಚೇತನ ನಾಟ್ಯಾಲಯ ಕಲಾವಿದರಿಂದ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನ ಮತ್ತು ನಟಮಿತ್ರರು ತೀರ್ಥಹಳ್ಳಿ ಕಲಾವಿದರಿಂದ ಮೂಕಾಭಿನಯ ಮೆಚ್ಚುಗೆಗೆ ಪಾತ್ರವಾದವು.