ಅದೊಂದು ಹೃದಯಸ್ಪರ್ಶಿ ಸಮಾರಂಭ. ದೂರದ ಅಮೇರಿಕಾದಲ್ಲಿ ನೆಲೆಸಿರುವ ಮಲೆನಾಡಿನ ಕುಟುಂಬ ತನ್ನ ಜನ್ಮಭೂಮಿಯ ಋಣ ತೀರಿಸಿದ ಸಂತೃಪ್ತ ಭಾವ. ಸೇವೆ, ದಾನ ಧರ್ಮ ಎಂದು ಭಾಷಣ ಹೊಡೆದು ಪೇಪರ್‌ನಲ್ಲಿ ಫೋಟೋ ಹಾಕಿಸಿಕೊಳ್ಳುವ ಜನರೇ ಹೆಚ್ಚಿರುವ ಈ ಕಾಲದಲ್ಲಿ ಇದೊಂದು ಅವಿಸ್ಮರಣೀಯ ಸೇವಾ ಕಾರ್ಯ.
ಹೌದು!. ಶಿವಮೊಗ್ಗದ ಭೂಪಾಳಂ ಚಂದ್ರಶೇಖರಯ್ಯ ಕುಟುಂಬ ಮೊದಲಿಂದಲೂ ಶಿವಮೊಗ್ಗ ಜಿಲ್ಲೆಗೆ ತಾಯ್ತನ ತೋರಿದ ಕುಟುಂಬ. ಈ ಕುಟುಂಬದ ಕುಡಿಗಳಾದ ಅಂದರೆ ಚಂದ್ರಶೇಖರಯ್ಯ ಅವರ ಮಕ್ಕಳಾದ ಡಾ.ಭೂಪಾಳಂ ನಿರ್ಮಲಾ,ಡಾ.ಭೂಪಾಳಂ ರುಕ್ಮಯ್ಯ ಅವರು ತರೀಕೆರೆ ಮೂಲದ ಡಾ.ಕೃಷ್ಣ ಸಿ. ಮೂರ್ತಿ ಅವರೊಂದಿಗೆ ಸೇರಿ ಜತೆಯಲ್ಲಿ ಅಮೇರಿಕಾದಲ್ಲಿ ನೆಲೆಸಿರುವ ಮೈಸೂರು ಮೆಡಿಕಲ್ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಹಾಯವನ್ನೂ ಪಡೆದುಕೊಂಡು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ೫ ಕೋಟಿ ರೂ. ಮೌಲ್ಯದ ವಿವಿಧ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಅಮೇರಿಕಾ ದೇಶದ ಕೆಂಟುಕಿ ಮತ್ತು ಲೂಯಿಸ್‌ವೆಲ್ಲೆಯಲ್ಲಿ ಆಸ್ಪತ್ರೆ ಹೊಂದಿರುವ ಭೂಪಾಳಂ ಕುಟುಂಬ ತಮ್ಮ ತಾಯ್ನೆಲಕ್ಕೆ ಏನಾದರೂ ನೆರವು ನೀಡಬೇಕೆಂಬ ಹಂಬಲದಲ್ಲಿರುವಾಗಲೇ ಕೋವಿಡ್ ಸಂಕಷ್ಟ ಎದುರಾಗಿದೆ. ಇದೇ ಸಂದರ್ಭ ಬಳಸಿಕೊಂಡ ಅವರು ಕೋವಿಡ್ ಮಾತರವಲ್ಲದೆ, ಸಾಮಾನ್ಯ ಆಸ್ಪತ್ರೆಗೂ ಅಗತ್ಯವಿರುವ ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ಉಪಕರಣ ಹಾಗೂ ಪೀಠೋಪಕರಣಗಳನ್ನು ಅಲ್ಲಿಂದಲೇ ಕಳಿಸಿದ್ದಾರೆ. ಶಿವಮೊಗ್ಗ ರೋಟರಿ ಕ್ಲಬ್ ಮಧ್ಯಸ್ಥಿಕೆಯಲ್ಲಿ ಈ ಎಲ್ಲ ಉಪಕರಣಗಳು ಮೆಗ್ಗಾನ್ ಆಸ್ಪತ್ರೆ ತಲುಪಿವೆ.
ಕೆಎಸ್‌ಐಡಿಸಿ ಉಪಾಧ್ಯಕ್ಷ ಎಸ್.ದತ್ತಾತ್ರಿ, ಡಾ.ಪಿ.ನಾರಾಯಣ್, ಶರ‍್ನಾಳಿ ಕಿಶೋರ್ ಸೇರಿದಂತೆ ಹಲವರು ಸಚಿವ ಈಶ್ವರಪ್ಪರ ಮೂಲಕ ಸರಕಾರದ ಮಟ್ಟದಲ್ಲಿ ವ್ಯಹರಿಸಿ ಅಮೇರಿಕಾದಿಂದ ಬಂದ ಸರಕುಗಳನ್ನು ಆಸ್ಪತ್ರೆ ಆವರಣಕ್ಕೆ ತಲುಪಿಸುವಲ್ಲಿ ಸಹಕರಿಸಿದ್ದಾರೆ.
ಭೂಪಾಳಂ ಕುಟುಂಬದ ಸೇವೆ ಅನನ್ಯ
ಉಪಕರಣಗಳನ್ನು ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಭೂಪಾಳಂ ಕುಟುಂಬದ ಸಮಾಜ ಸಏವೆ ಅನನ್ಯವಾದುದು. ಕೋವಿಡ್ ಮೂರನೇ ಅಲೆ ಅಲ್ಲ ಮೂವತ್ತನೇ ಅಲೆ ಬಂದರೂ ಚಿಕಿತ್ಸೆ ನೀಡಲು ಆಸ್ಪತ್ರೆ ಈಗ ಸುಸಜ್ಜಿತವಾಗಿದೆ. ಮೆಗ್ಗಾನ್ ಆಸ್ಪತ್ರೆ ಆಮೂಲಕ ಶಿವಮೊಗ್ಗದ ಜನತೆಗೆ ಅನುಕೂಲ ಮಾಡಿಕೊಟ್ಟ ಎಲ್ಲ ದಾನಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಮೆಗ್ಗಾನ್ ಆಸ್ಪತ್ರೆ ಸುಸಜ್ಜಿತವಾದ ಯಂತ್ರೋಪಕರಣಗಳಿAದ ರೋಗಿಗಳ ಚಿಕಿತ್ಸೆಗೆ ಸರ್ವಸಿದ್ಧ್ದವಾಗಿದೆ. ಕೊವಿಡ್ ೩ನೆಯ ಅಲ್ಲ, ೩೦ನೆಯ ಅಲೆ ಬಂದರೂ ಯಶಸ್ವಿಯಾಗಿ ಅದನ್ನು ಎದುರಿಸಲು ಸಿದ್ದರಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು. ಈ ಸಂದರ್ಭ ಭೂಪಳಂ ಕುಟುಂಬದ ಹಿರಿಯರಾದ ನಾಗಾರ್ಜುನ ಅವರನ್ನು ಗೌರವಿಸಿದರು.
ರೋಟರಿ ಮಾಜಿ ಗವರ್ನರ್ ಡಾ ಪಿ. ನಾರಾಯಣ, ಎಸ್. ದತ್ತಾತ್ರಿ ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷ ಕಿಶೋರ್ ಶೀರ್ನಾಳಿ, ಸಿಮ್ಸ್ ನಿರ್ದೇಶಕ ಡಾ|| ಓ. ಎಸ್. ಸಿದ್ದಪ್ಪ , ಮೆಗ್ಗಾನ್ ಮುಖ್ಯ ವೈದ್ಯ ಡಾ||. ಎಸ್. ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.