Malenadu Mitra
ರಾಜ್ಯ ಶಿವಮೊಗ್ಗ

ಕಾಲಮಿತಿಯೊಳಗೆ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ: ಸಿ.ಸಿ.ಪಾಟಿಲ್

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಲೋಕೋಪಯೋಗಿ ಸಚಿವರಿಂದ ಶಂಕುಸ್ಥಾಪನೆ


ಶಿವಮೊಗ್ಗ ಲೋಕಸಭಾ ಕ್ಷೇತ್ರದ ನಗರ ಮತ್ತು ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಯಲ್ಲಿ ಇಂದು ಶಂಕುಸ್ಥಾಪನೆಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಇಂದಿನಿಂದಲೇ ಆರಂಭಿಸಿ ಕಾಲ ಮಿತಿಯೊಳಗೆ ಅತ್ಯುತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕಾಮಗಾರಿ ಪೂರ್ಣಗೊಳ್ಳಲು ಲೋಕೋಪಯೋಗಿ ಇಲಾಖೆಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟಿಲ್ ಭರವಸೆ ನೀಡಿದರು.
ಇಂದು ನಗರದ ಅರಕೇಶ್ವರ ದೇವಸ್ಥಾನದ ಬಳಿ ರೂ.516.96 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 13 ರ ಕಿ.ಮೀ422 ರಿಂದ 523.60(ಚಿತ್ರದುರ್ಗದಿಂದ ಶಿವಮೊಗ್ಗ) ವರೆಗಿನ ರಸ್ತೆ ಮೇಲ್ದರ್ಜೆಗೇರಿಸುವ ಬಾಕಿ ಉಳಿದಿರುವ ಕಾಮಗಾರಿ, ರೂ.43.90 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 13 ರ ಕಿ.ಮೀ 525 ರಲ್ಲಿ ರೈಲ್ವೇ ಸರಪಳಿ 60/950 ರ ಶಿವಮೊಗ್ಗ ನಗರದ ವಿದ್ಯಾನಗರ ಬಳಿ ವೃತ್ತಾಕಾರದ ರೈಲ್ವೇ ಮೇಲ್ಸುತುವೆ ನಿರ್ಮಾಣ ಹಾಗೂ ರೂ.20.12 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 206 ರ ಕಿ.ಮೀ.207.80 ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ತುಂಗಾ ನದಿಗೆ ಮತ್ತೊಂದು ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.


ಶಿವಮೊಗ್ಗ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ, ಉಸ್ತುವಾರಿ ಸಚಿವರು ಮತ್ತು ಸಂಸದರ ಸಹಯೋಗದಲ್ಲಿ ಅತ್ಯುತ್ತಮ ಅಭಿವೃದ್ದಿ ಕೆಲಸಗಳು ಆಗಿವೆ. ಬಹುತೇಕ ಎಲ್ಲ ಕೆಲಸಗಳು ಆಗಿವೆ. ಏನಾದರೂ ಬಾಕಿ ಇದ್ದರೆ ಅದಕ್ಕೆ ನಮ್ಮ ಇಲಾಖೆ ಸಹಕಾರ ಸಂಪೂರ್ಣ ಇದೆ.
ಗ್ರಾಮೀಣಾಭಿವೃದ್ದಿ ಮತ್ತು ಲೋಕೋಪಯೋಗಿ ಇಲಾಖೆಗಳ ಸಹಯೋಗದಲ್ಲಿ ಉತ್ತಮ ಕೆಲಸಗಳು ಆದಲ್ಲಿ ಸಾರ್ವಜನಿಕರಿಗೆ ಎಲ್ಲ ರೀತಿಯಲ್ಲಿ ಅನುಕೂಲವಾಗಲಿದೆ. ಇಂದು ಶಂಕುಸ್ಥಾಪನೆಗೊಂಡಿರುವ ಕಾಮಗಾರಿಗಳು ಯಶಸ್ವಿಯಾಗಿ ನೆರವೇರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವಿಮಾನ ನಿಲ್ದಾಣದ ಕೆಲಸವನ್ನು ಸಹ ಗುಣಮಟ್ಟದೊಂದಿಗೆ ಕಾಕಲಮಿತಿಯಲ್ಲಿ ಪೂರ್ಣಗೊಳಿಸಲು ತಿಳಿಸಿದ್ದೇನೆ ಎಂದರು.


ಸಂಸದ ಬಿ.ವೈ.ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 13 ಕಿ.ಮೀ422 ರಿಂದ 523.60(ಚಿತ್ರದುರ್ಗದಿಂದ ಶಿವಮೊಗ್ಗ) ವರೆಗಿನ ರಸ್ತೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ 2014 ರಲ್ಲೇ ಮಂಜೂರಾತಿ ದೊರೆತಿದ್ದು, ಚನ್ನಗಿರಿವರೆಗೆ ಕಾಮಗಾರಿ ನಡೆದು ರೂ.100 ಕೋಟಿ ಕಾಮಗಾರಿ ಬಾಕಿ ಇತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಕೇಂದ್ರದ ನಿತಿನ್ ಗಡ್ಕರಿಯವನ್ನು ಭೇಟಿ ಮಾಡಿ ಈ ಕಾಮಗಾರಿಗೆ ರೂ.400 ಕೋಟಿ ಹೆಚ್ಚುವರಿ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಜಿಲ್ಲೆಯ ರೂ.8 ಸಾವಿರ ಕೋಟಿ ಅನುದಾನ ತಂದು ಅಭಿವೃದ್ದಿ ಕೆಲಸಗಳನ್ನು ಕಾರ್ಯಗತಗೊಳಿಸುತ್ತಿರುವ ಸಂಸದರಿಗೆ ಅಭಿನಂದನೆಗಳು.
ಲೋಕೋಪಯೋಗಿ ಸಚಿವರು ನಗರದಲ್ಲಿ ಆರಂಭಿಸಲಾಗಿರುವ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುವವರೆಗೆ ನಮಗೆ ನೆರವು ನೀಡಬೇಕೆಂದು ಆಗ್ರಹಿಸಿದರು. ವಿಮಾನ ನಿಲ್ದಾಣದಿಂದ ಜಿಲ್ಲೆಯಲ್ಲಿ ಉದ್ಯೋಗಾವಕಾಶ, ಕೈಗಾರಿಕಾ ಕ್ಷೇತ್ರ ಬೆಳೆಯಲಿದ್ದು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಗಂಧೂರು ಕೇಬಲ್ ಬ್ರಿಡ್ಜ್ ಮತ್ತು ವಿದ್ಯಾನಗರ ವೃತ್ತಾಕಾರದ ಮೇಲ್ಸೇತುವೆ ಪಿಪಿಟಿ ಪ್ರದರ್ಶನ ಬಿತ್ತರಿಸಲಾಯಿತು.

ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಕ್ಷಮೆ ಕೋರಿದ ಸಚಿವ-ಸಂಸದರು: ಕಾರ್ಯಕ್ರಮಕ್ಕೂ ಮುನ್ನ ವಿಧಾನ ಪರಿಷತ್ ಶಾಸಕ ಆರ್.ಪ್ರಸನ್ನ ಕುಮಾರ್‍ರನ್ನು ಶಿಷ್ಟಾಚಾರದಂತೆ ಆಹ್ವಾನಿಸಿಲ್ಲ ಎಂದು ಪಕ್ಷದ ಕಾರ್ಯಕರ್ತರು ಪ್ರತಿಭಟಿಸಿದರು. ವೇದಿಕೆಯಲ್ಲಿ ಸಚಿವರು ಮತ್ತು ಸಂಸದರು ಈ ಬಗ್ಗೆ ಕ್ಷಮೆ ಕೋರಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಆರ್.ಪ್ರಸನ್ನಕುಮಾರ್, ಆರ್ಯ ವೈಶ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಮಹಾನಗಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಸದಸ್ಯೆ ಯಮನಾ ರಂಗನಾಥ್, ಪಾಲಿಕೆ ಸದಸ್ಯರು, ಪದಾಧಿಕಾರಿಗಳು, ಅಧಿಕಾರಿಗಳು ಇದ್ದರು.

Ad Widget

Related posts

ಸರಕಾರಿ ನೌಕರರಿಗೆ ನೈತಿಕ ಬೆಂಬಲ ಬೇಕು

Malenadu Mirror Desk

ಹೆಚ್ಚುವರಿ ಕೆಲಸ ಬೇಡ: ಅಂಗನವಾಡಿ ಕಾರ್ಯಕರ್ತೆಯರು

Malenadu Mirror Desk

ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಈಶ್ವರಪ್ಪ ಮನೆ ಮುಂದೆ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.