ಕಾಗೋಡು ರಾಜ್ಯ ಕಂಡ ಅಪರೂಪದ ರಾಜಕಾರಣಿ. ಬದುಕಿನುದ್ದಕ್ಕೂ ಜನಪರ ಕಾಳಜಿ ಇರಿಸಿಕೊಂಡು ಅದರಲ್ಲಿಯೆ ಸಂತೃಪ್ತಿ ಕಂಡ ಕಾಗೋಡು ಅವರು ನಮ್ಮಂತಹ ಯುವ ರಾಜಕಾರಣಿಗಳಿಗೆ ಮಾರ್ಗದರ್ಶಕರು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಕಾಗೋಡು ತಿಮ್ಮಪ್ಪ ಅವರ ೯೦ನೇ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ಸಾಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ೯೦ನೇ ವರ್ಷದ ಹುಟ್ಟುಹಬ್ಬ ಅವರ ಸಾರ್ಥಕ ಬದುಕಿಗೆ ಹಿಡಿದ ಕನ್ನಡಿಯಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ನಂತರ ಕಾಗೋಡು ತಿಮ್ಮಪ್ಪ ಅವರು ರಾಜಕೀಯವಾಗಿ, ಸಾಮಾಜಿಕವಾಗಿ ಛಾಪು ಮೂಡಿಸಿದ್ದಾರೆ. ರಾಜ್ಯದ ಜನರಿಗೆ ಬಂಗಾರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನೀಡಿದ ಕೊಡುಗೆಯಂತೆ ಕಾಗೋಡು ತಿಮ್ಮಪ್ಪ ಅವರು ಶಾಸಕರಾಗಿದ್ದಾಗ, ಸಚಿವರಾಗಿದ್ದಾಗ ನೀಡಿದ ಕೊಡುಗೆ ಅವಿಸ್ಮರಣೀಯವಾದದ್ದು ಎಂದು ಹೇಳಿದರು.
ಕಾಗೋಡು ತಿಮ್ಮಪ್ಪ ಅವರ ಅಧಿಕಾರ ಅವಧಿಯಲ್ಲಿ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಭೂಮಿಹಕ್ಕು ಕೊಟ್ಟು, ಅವರು ಸ್ವಾವಲಂಬಿಗಳಾಗಿ ಬದುಕು ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಸದಾ ಜನರ ಪರವಾಗಿ ಚಿಂತಿಸುವ ಕಾಗೋಡು ತಿಮ್ಮಪ್ಪ ಅವರದ್ದು ಒಂದರ್ಥದಲ್ಲಿ ಅನುಕರಣೀಯ ರಾಜಕೀಯವಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು, ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು, ಪ್ರಮುಖರಾದ ಕೆ.ಹೊಳೆಯಪ್ಪ, ಅಣ್ಣಪ್ಪ ಭೀಮನೇರಿ, ಸೋಮಶೇಖರ ಲ್ಯಾವಿಗೆರೆ, ಎಲ್.ಚಂದ್ರಪ್ಪ, ಗಣಪತಿ ಮಂಡಗಳಲೆ, ಅಶೋಕ ಬೇಳೂರು, ರವಿ ಜಂಬೂರುಮನೆ, ದೀಪಾ ಕಾಗೋಡು, ರಮಲೋ ಕಾಗೋಡು ಇನ್ನಿತರರು ಹಾಜರಿದ್ದರು.
ಜಿಲ್ಲೆಯಾದ್ಯಂತ ಇರುವ ಕಾಗೋಡು ತಿಮ್ಮಪ್ಪ ಅವರ ಅಭಿಮಾನಿಗಳು ಬೆಳಗ್ಗೆಯಿಂದ ಸಂಜೆ ತನಕ ಬಂದು ತಮ್ಮ ನೆಚ್ಚಿನ ನಾಯಕನಿಗೆ ಜನ್ಮದಿನದ ಶುಭಾಶಯ ಕೋರಿದರು.
೯೦ರ ಇಳಿವಯಸ್ಸಿನಲ್ಲಿಯೂ ಲವಲವಿಕೆಯಿಂದ ಇದ್ದ ಕಾಗೋಡು ತಿಮ್ಮಪ್ಪ ಅವರು ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.