ಮದುವೆಯಾಗುವ ಮುನ್ನ ಗರ್ಭವತಿಯಾದ ಅಶ್ವಿನಿ(೨೦) ಎಂಬಾಕೆ ಪ್ರಸವ ಸಂದರ್ಭ ಮಗುವಿನೊಂದಿಗೆ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ತಾಲೂಕು ಕುಂಸಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನಿ, ಭದ್ರಾವತಿ ಮೂಲದ ಬಸವರಾಜ್‌ನನ್ನು ಪ್ರೀತಿಸುತ್ತಿದ್ದಳು ಎಂದು ಮೂಲಗಳಿಂದ ತಿಳಿದು ಬಂದಿದೆ. ಬಸವರಾಜ್ ಅಶ್ವಿನಿ ಒಟ್ಟಿಗಿದ್ದು ವಿವಾಹವಾಗಬೇಕಿತ್ತು. ಆದರೆ ವಿವಾಹಕ್ಕೂ ಮೊದಲೇ ಅಶ್ವಿನಿ ಗರ್ಭವತಿಯಾಗಿದ್ದು, ಮನೆಯವರಿಂದ ವಿಷಯ ಮುಚ್ಚಿಟ್ಟಿದ್ದಳು. ಮಗಳಲ್ಲಿನ ದೈಹಿಕ ಬದಲಾವಣೆ ಗಮನಿಸಿದ ತಾಯಿ ಪ್ರಶ್ನೆಮಾಡಿದಾಗ ಅಶ್ವಿನಿ ವಿಷಯ ಮರೆಮಾಚಿದ್ದಳೆನ್ನಲಾಗಿದೆ. ಆದರೆ ಅಶ್ವಿನಿಗೆ ಏಳು ತಿಂಗಳು ತುಂಬುತ್ತಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಮನೆಯವರಿಗೆ ವಿಷಯ ತಿಳಿಸದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾಗಿದ್ದಾಳೆ. ಆಸ್ಪತ್ರೆಯಲ್ಲಿ ಪ್ರಸವ ಪೂರ್ವ ಬ್ಲೀಡಿಂಗ್ ಆಗಿದ್ದು, ಶಿಶು ಗರ್ಭದಲ್ಲಿಯೇ ತೀರಿಕೊಂಡಿತ್ತು. ಎರಡು ತಾಸಿನ ಬಳಿಕ ಅಶ್ವಿನಿ ಕೂಡ ಸಾವನ್ನಪ್ಪಿದ್ದಾಳೆ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರಿಂದ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ.
ಅಶ್ವಿನಿ ಹಾಗು ಮಗುವಿನ ಸಾವಿಗೆ ಕಾರಣನಾದ ಬಸವರಾಜ್ ಮತ್ತು ಮತ್ತಿಬ್ಬರು ಯುವಕರನ್ನು ಬಂಧಿಸಲು ಕುಂಸಿ ಪೊಲೀಸರು ಬಲೆ ಬೀಸಿದ್ದಾರೆ. ಇತ್ತೀಚೆಗೆ ಬಸವರಾಜ್ ಕುಂಸಿಗೆ ಬಂದು ಒಂದು ವಾರ ಅಶ್ವಿನಿ ಮನೆಯಲ್ಲಿ ತಂಗಿದ್ದ ಮಾಹಿತಿ ಪ್ರಾಥಮಿಕವಾಗಿ ಲಭ್ಯವಾಗಿದೆ.