ಸೊರಬ: ವೀರಶೈವ ಲಿಂಗಾಯತ ಬೇರೆಯಲ್ಲ ಎಂಬ ಅರಿವು ಮೂಡಿ ಒಂದಾಗುವ ದಿನಗಳು ಸಮೀಪದಲ್ಲಿವೆ ಎಂದು ಜಡೆ ಸಂಸ್ಥಾನ ಮಠ, ಸೊರಬ ಮುರುಘಾ ಮಠದ ಡಾ.ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾ ಮಠದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಮಂಗಳವಾರ ಹಮ್ಮಿಕೊಂಡ ಶ್ರೀ ವೀರಭದ್ರೇಶ್ವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವೀರಭದ್ರ ಸ್ವಾಮಿ, ಗಣಪತಿ ದೇವರಿಗೆ ಜನರು ವಿಶೇಷ ಪ್ರಾಧಾನ್ಯತೆ ನೀಡಿದ್ದಾರೆ. ಕೌಟುಂಬಿಕ ವ್ಯವಸ್ಥೆ ಭದ್ರಪಡಿಸಲು ವೀರಭದ್ರ ಸ್ವಾಮಿ ಚರಿತ್ರೆ ಮಹತ್ವದ್ದಾಗಿದೆ. ವೀರಶೈವ ಲಿಂಗಾಯತ ಪರಂಪರೆಯಲ್ಲಿ ವೀರಭದ್ರ ಸ್ವಾಮಿ ಪ್ರಮುಖ ದೇವರಾಗಿದೆ. ವೀರತ್ವ, ಶೂರತ್ವ ಇರುವ ಯಡಿಯೂರಪ್ಪ ಅವರಿಗೆ ವೀರಭದ್ರೇಶ್ವರ ಸ್ವಾಮಿ ಪ್ರಶಸ್ತಿ ನೀಡುತ್ತಿರುವುದು ಅಭಿನಂದನರ್ಹ ಎಂದರು.
ಜಡೆ ಹಿರೆಮಠ, ಸೊರಬ ಕಾನುಕೇರಿ ಮಠದ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾರನಾಡಿ, ಭಾದ್ರಪದ ಮಾಸ ಎರಡನೇ ಮಂಗಳವಾರ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಎಲ್ಲರ ಮನೆ ದೇವರಾದ ವೀರಭದ್ರ ಸ್ವಾಮಿ ಮನೋದೇವರಾಗಿದ್ದಾನೆ. ಶ್ರೀ ದೇವರಿಗೆ ಗುಣವಾಚಕ ಹೆಸರಿದ್ದು ಜನತೆ ಹಾಗೂ ಕುಟುಂಬಕ್ಕೆ ವೀರ, ಶೌರ್ಯ, ಭದ್ರತೆ ಕೊಡುವ ಗುಣ ದೇವರಿಗೆ ಎಂದರು.
ಗೇರುಕೊಪ್ಪ ಹಾಗೂ ಮಂಟೂರು ಮಠದ ಶಿವಲಿಂಗ ಸ್ವಾಮೀಜಿ, ಅಕ್ಕನ ಬಳಗದ ಅಧ್ಯಕ್ಷೆ ರೇಣುಕಮ್ಮ ಗೌಳಿ, ನಾಗರಾಜ್ ಗುತ್ತಿ ಮಾತನಾಡಿದರು.
ತಾಲೂಕು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಸಂದೀಪ ಯಲವಳ್ಳಿ ಪ್ರಾಸ್ತಾವಿಕ ಮಾತನಾಡಿದರು.
ಸೊರಬ ಟೌನ್ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಲಿಂಗರಾಜ್ ದೂಪದ ಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಕ್ಕನ ಬಳಗದವರು ಪ್ರಾರ್ಥಿಸಿ, ನಿಜಗುಣ ಚಂದ್ರಶೇಖರ್ ಸ್ವಾಗತಿಸಿ, ಶಿವರಾಜ್ ವಂದಿಸಿ, ಜಯಮಾಲ ನಿರೂಪಿಸಿದರು.
ಶ್ರೀ ವೀರಭದ್ರೇಶ್ವರ ದೇವರ ಭಾವಚಿತ್ರವನ್ನು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.