ಮನೋವೈದ್ಯರಾಗಿ ಪ್ರವೃತ್ತಿಯಲ್ಲಿ ತೊಡಗಿ ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿರುವ ಶಿವಮೊಗ್ಗದ ಡಾ. ಅರವಿಂದ್ ಎಸ್.ಟಿ. ಅವರಿಗೆ ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಶಾಖೆಯು ಈ ವರ್ಷದ ‘ಡಾ. ಎಸ್.ಎಸ್. ಜಯರಾಮ್’ ಪ್ರಶಸ್ತಿ ನೀಡಿದೆ.
ಡಾ. ಅರವಿಂದ್ ಎಸ್.ಟಿ. ಅವರು ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಆದರ್ಶ ಪ್ರಾಯ ಹಾಗೂ ಅನುಕರಣಿಯ ಸೇವೆ ಸಲ್ಲಿಸುತ್ತಿದ್ದು, ತಮ್ಮ ಭಾಷಣಗಳ, ವಿಚಾರ ಸಂಕಿರಣಗಳ, ಪತ್ರಿಕೆಗಳಲ್ಲಿ ಬರಹ, ಟಿವಿ ಹಾಗೂ ಆಕಾಶವಾಣಿಯಲ್ಲಿ ಸಂದರ್ಶನಗಳ ಮೂಲಕ ಸಮಾಜದಲ್ಲಿ ಮಾನಸಿಕ ಆರೋಗ್ಯ ಕುರಿತು ಜಾಗೃತಿ ಹಾಗೂ ಅರಿವನ್ನು ಮೂಡಿಸುತ್ತಿದ್ದು, ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಐಎಂಎ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ.ಪರಮೇಶ್ವರ್ ಶಿಗ್ಗಾಂವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸೆ18 ಹಾಗೂ19ರಂದು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಭಾರತೀಯ ಮನೋವೈದ್ಯಕೀಯ ಸಂಘದ ವಾರ್ಷಿಕ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಡಾ. ಅರವಿಂದ್ ಎಸ್.ಟಿ. ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದ ಅವರು, ಡಾ.ಅರವಿಂದ್ ಅವರಿಗೆ ಸಮಾಜ ಸೇವೆಯ ಕಳಕಳಿಯಿದ್ದು, ಇನ್ನೂ ಹೆಚ್ಚಿನ ಸೇವೆ ಮಾಡಿ ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಾರೈಸಿದರು.
ಖ್ಯಾತ ಮನೋವೈದ್ಯರಾದ ಡಾ.ಎ.ಶಿವರಾಮಕೃಷ್ಣ ಮಾತನಾಡಿ, ಡಾ.ಅರವಿಂದ್ ಅವರು ಸಮಾಜದ ಆರೋಗ್ಯವೃದ್ಧಿಗೆ ಯಾವುದೇ ಆಪೇಕ್ಷೆ ಪಡೆಯದೆ ಶ್ರಮಿಸುತ್ತಿದ್ದು, ಇವರ ಸೇವಾ ಮನೋಭಾವ ಮೆಚ್ಚುವಂತಹದು. ಯುವ ಜನಾಂಗಕ್ಕೆ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಇವರಿಗೆ ಪ್ರಶಸ್ತಿ ಬಂದಿರುವುದಕ್ಕೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಅರವಿಂದ್ ಎಸ್.ಟಿ., ಪ್ರೊ. ಕಿರಣ್‌ದೇಸಾಯಿ, ಡಾ. ಐಶ್ವರ್ಯ ಉಪಸ್ಥಿತರಿದ್ದರು.
ಪ್ರಶಸ್ತಿ ನನ್ನನ್ನು ಬೆಳೆಸಿ ಈ ಮಟ್ಟಕ್ಕೆ ತಂದ ಕುಟುಂಬ , ಕಲಿಕೆಯುದ್ದಕ್ಕೂ ನನಗೆ ಪ್ರೇರಕ ಶಕ್ತಿಯಾಗಿದ್ದ ಎಲ್ಲ ಗುರುಹಿರಿಯರಿಗೆ ಈ ಪ್ರಶಸ್ತಿಯ ಶ್ರೇಯಸ್ಸು ಸಲ್ಲುತ್ತದೆ. ಸ್ವಾಸ್ಥ್ಯ ಸಮಾಜ ನಿರ್ಮಾಣದ ಕಾಯಕ ನಿರಂತರವಾಗಿರುತ್ತದೆ
ಡಾ.ಅರವಿಂದ್