ಹಿಂದುತ್ವ ಕವಚ ತೊಟ್ಟವರು ಈಗ ಎಲ್ಲಿ ಅಡಗಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಗಿ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ದೇವಸ್ಥಾನ ಕೆಡವಿರುವುದು ಅಕ್ಷಮ್ಯ ಅಪರಾಧವಾಗಿದೆ. ಸರ್ಕಾರ ಅಧಿಕಾರಿಗಳ ಮೇಲೆ ತಪ್ಪನ್ನು ವರ್ಗಾಯಿಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಆಕಸ್ಮಾತ್ ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಕೆಲಸವಾಗಿದ್ದರೆ ಈ ಬಿಜೆಪಿಯವರ ಹಾರಾಟ, ಹೋರಾಟಗಳನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಮಾತು ಮಾತಿಗೂ ಬಾಯಿ ನೋವಾಗುವ ಹಾಗೇ ಅರಚಿಕೊಳ್ಳುತ್ತಿದ್ದ ಶೋಭಾ ಕರಂದ್ಲಾಜೆಯವರು ಈಗ ಎಲ್ಲಿದ್ದಾರೋ ಗೊತ್ತಿಲ್ಲ. ಹಿಂದೂ ಕವಚ ತೊಟ್ಟವರು ಅಡಗಿಕೊಂಡಿದ್ದಾರೆ. ಸರ್ಕಾರದ ವಿರುದ್ಧ ಧ್ವನಿಯನ್ನು ಎತ್ತುತ್ತಿಲ್ಲ. ಕೇವಲ ಸಿಂಪಥಿ ಗಿಟ್ಟಿಸುವುದರಲ್ಲಿ ನಿರತರಾಗಿದ್ದಾರೆ. ಸುದ್ದಿ ಪ್ರಚಾರಕರು ಸುಪ್ರೀಂ ಕೋರ್ಟ್ ಆದೇಶದ ನಡುವೆಯೂ ವ್ಯವಸ್ಥಿತವಾಗಿ ನಡೆದುಕೊಳ್ಳಲು ಸರ್ಕಾರಕ್ಕೆ ಅವಕಾಶವಿತ್ತು. ಆದರೆ, ಅದು ಹಾಗೇ ಮಾಡಲಿಲ್ಲ. ಒಟ್ಟಾರೆ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ. ಹಲವು ವರ್ಷಗಳಿಂದ ತನ್ನ ಬದುಕನ್ನು ಮೂರಾಬಟ್ಟೆಯಾಗಿ ಮಾಡಿಕೊಂಡಿರುವ ಅವರನ್ನು ಸರ್ಕಾರ ಕೈಬಿಟ್ಟಿದೆ. ಅಂತಹ ಸಂತ್ರಸ್ತರ ಪರವಾಗಿ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದರು.
ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಾಗರದ ವ್ಯಕ್ತಿಯೊಬ್ಬರು ನಿಧನ ಹೊಂದಿದ್ದಾರೆ. ಇದಕ್ಕೆ ಕಾರಣ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಸಿಗದೇ ಇರುವುದು. ಕೊರೋನಾ ಇಲ್ಲದಿದ್ದರೂ ಕೂಡ ಅಲ್ಲಿ ವೆಂಟಿಲೇಟರ್ ಇಲ್ಲ ಎಂದರೆ ಹೇಗೆ? ಸದನದಲ್ಲಿ ಶಾಸಕ ಹರತಾಳು ಹಾಲಪ್ಪ ಈ ಬಗ್ಗೆ ಪ್ರಶ್ನೆ ಮಾಡಿದ್ದರೂ ಕೂಡ ಮುಖ್ಯಮಂತ್ರಿಗಳೇ ವೆಂಟಿಲೇಟರ್ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಆ ದಿನವೇ ವ್ಯಕ್ತಿ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಹೇಳಿದರೂ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗುವುದಿಲ್ಲ ಎಂದರೆ ಇದು ಆಡಳಿತದ ವೈಫಲ್ಯವಾಗಿದೆ. ಆರೋಗ್ಯ ಸಚಿವರು ರಾಜೀನಾಮೆ ಕೊಡುವುದು ಒಳಿತು ಎಂದರು.
ಮಲೆನಾಡು ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ ಬಗೆಹರಿದಿಲ್ಲ. ಎಂಪಿ ರಾಘವೇಂದ್ರ ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅವರಿಗೆ ಅಪ್ಪನ ರಾಜೀನಾಮೆ ಬಗ್ಗೆ ಚಿಂತೆಯಾಗಿದೆಯೇ ಹೊರತು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿಲ್ಲ. ಸರ್ಕಾರದ ಹುಂಡಿಯೇ ಖಾಲಿಯಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಾಂತವೀರನಾಯ್ಕ್, ವೈ.ಹೆಚ್. ನಾಗರಾಜ್, ವಿಶ್ವನಾಥ್ ಕಾಶಿ, ಜಿ.ಡಿ. ಮಂಜುನಾಥ್, ಸೋಮಶೇಖರ್ ಬಾವಿಗೆರೆ, ರಾಜ್ ಕುಮಾರ್ ಇದ್ದರು.