ಹಣಗೆರೆ ಕಟ್ಟೆಯಲ್ಲಿ ಪ್ರಾಣಿ ಬಲಿ ನಿಷೇಧವಿದ್ದರೂ ಭಕ್ತರಿಂದ ಆದೇಶ ಉಲ್ಲಂಘನೆ . ಭಕ್ತರ ವಾಹನ ತಪಾಸಣೆಗಿಳಿದ ಗ್ರಾಮಸ್ಥರು
ರಾಜ್ಯದ ಪ್ರಸಿದ್ದ ಸೌಹಾರ್ದ ಧಾರ್ಮಿಕ ಕೇಂದ್ರ ಹಣಗೆರೆ ಕಟ್ಟೆಯಲ್ಲಿ ಪ್ರಾಣಿ ಬಲಿ ನಿಷೇಧ ಮಾಡಿದ್ದರೂ,ಭಕ್ತರು ಆದೇಶ ಉಲ್ಲಂಘಿಸುವುದಕ್ಕೆ ಸ್ಥಳೀಯರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.ಸೌಹಾರ್ಧ ಧಾರ್ಮಿಕ ಕ್ಷೇತ್ರಕ್ಕೆ ಬರುವ ಭಕ್ತರ ಪ್ರತಿ ವಾಹನವನ್ನು ಸ್ಥಳೀಯರೇ ತಪಾಸಣೆ ಆರಂಭಿಸಿದ್ದಾರೆ.
ಹೌದು,ತೀರ್ಥಹಳ್ಳಿ ತಾಲೂಕಿನ ಹಣಗೆರೆ ಗ್ರಾಮದ ಶ್ರೀ ಚೌಡೇಶ್ವರಿ,ಭೂತರಾಯ ಮತ್ತು ಸಯ್ಯದ್ ಸಾದತ್ ದರ್ಗಾ ಹೆಸರುವಾಸಿ ಧಾರ್ಮಿಕ ಕ್ಷೇತ್ರವಾಗಿದೆ.ಇದು ಹಿಂದು-ಮುಸ್ಲಿಂ ಭಾವೈಕ್ಯತೆಯ ಕ್ಷೇತ್ರ.ತಮ್ಮ ಇಷ್ಟಾರ್ಥ,ಹರಕೆಗಳು ಈಡೇರಬೇಕಿದ್ದರೆ ಪ್ರಾಣಿ ಬಲಿ ಕೊಡಬೇಕು ಎಂಬ ನಂಬಿಕೆ ಇಲ್ಲಿದೆ.ಆದರೆ ಕಳೆದ ವರ್ಷ ತೀರ್ಥಹಳ್ಳಿ ತಹಶೀಲ್ದಾರ್ ಅವರು ಪ್ರಾಣಿ ಬಲಿ ನಿಷೇಧಿಸಿದ್ದರು.ಆದರೂ ಪ್ರಾಣಿ ಬಲಿ ಮುಂದುವರೆದಿತ್ತು.ಹಾಗಾಗಿ ತಹಶೀಲ್ದಾರ್ ಆದೇಶವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ತೀರ್ಮಾನಿಸಿದ ಹಣಗೆರೆ,ಕೆರಹಳ್ಳಿ ಗ್ರಾಮಸ್ಥರು,ಭಕ್ತರ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.ಕುರಿ-ಕೋಳಿ ಇದ್ದರೆ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ, ಭಕ್ತರನ್ನು ಮಾತ್ರ ದೇಗುಲದ ಒಳಗೆ ಬಿಡುವ ಮೂಲಕ ಪ್ರಾಣಿ ಬಲಿ ಕೊಡದಂತೆ ನೋಡಿಕೊಳ್ಳುತ್ತಿದ್ದಾರೆ.
ಭಕ್ತರ ದಂಡು-ಕುರಿಕೋಳಿ ಬಲಿ
ಹಣಗೆರೆ ಧಾರ್ಮಿಕ ಕ್ಷೇತ್ರಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡೇ ಹರಿದುಬರುತ್ತದೆ.ಅಮಾವಾಸೆ-ಹುಣ್ಣಿಮೆ ದಿನದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸಿ,ಹರಕೆ ಈಡೇರಿಸುವಂತೆ ಬಹುತೇಕರು ಪ್ರಾಣಿಬಲಿ ಕೊಡುತ್ತಾರೆ. ಸಾಮಾನ್ಯ ದಿನಗಳಲ್ಲಿ ೩೦೦ ರಿಂದ ೫೦೦ ಕೋಳಿ ಬಲಿ,೫ ರಿಂದ ೧೦ ಕುರಿಗಳನ್ನು ಬಲಿಕೊಡಲಾಗುತ್ತದೆ.ವಾರದ ಕೊನೆಯದಿನವಾದ ಭಾನುವಾರದಂದು ೧೫೦೦ಕ್ಕೂ ಹೆಚ್ಚು ಕೋಳಿ ಹಾಗೂ ೧೫ರಿಂದ ೨೦ ಕುರಿಗಳನ್ನು ಬಲಿ ಕೊಡಲಾಗುತ್ತದೆ ಎಂದು ಸ್ಥಳೀಯರು ಪತ್ರಿಕೆಗೆ ಮಾಹಿತಿ ನೀಡಿದಾರೆ.
ಗ್ರಾಮಸ್ಥರೇಕೆ ತಪಾಸಣೆ ನಡೆಸುತ್ತಿದ್ದಾರೆ:
ಪ್ರಾಣಿ ಬಲಿ ಕೊಟ್ಟವರು ಪಕ್ಷದ ಅರಣ್ಯದಲ್ಲಿ ಅಡುಗೆ ಮಾಡಿ ಊಟ ಮಾಡಿ ತೆರಳುತ್ತಾರೆ.ಆದರೆ,ಕಸ,ಬಟ್ಟೆಗಳನ್ನು ಅರಣ್ಯದಲ್ಲಿ ಬಿಸಾಡಿ ಹೋಗುತ್ತಾರೆ.ಇದರಿಂದ ಸುತ್ತಮುತ್ತಲಿನ ವಾತಾವರಣ ಮಲಿನಗೊಂಡಿದೆ.ದುರ್ವಾಸನೆ ಬರಲು ಆರಂಭವಾಗಿದೆ.ಹಣಗೆರೆ,ಕೆರೆಹಳ್ಳಿ, ಸುತ್ತಮುತ್ತಲ ಗ್ರಾಮಸ್ಥರಲ್ಲಿ ರೋಗದ ಭೀತಿ ಎದುರಾಗಿದೆ.ಅಲ್ಲದೇ ವನ್ಯಜೀವಿಗಳಿಗೂ ಕಂಟಕವಾಗಿದೆ.ಹೀಗಾಗಿ ಪ್ರಾಣಿ ಬಲಿ ನಿಷೇಧಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಈ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲು ಸ್ಥಳೀಯ ಗ್ರಾಮಸ್ಥರೇ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಾತಿನ ಚಕಮಕಿ
ಹಣಗೆರೆ ರಸ್ತೆಯಲ್ಲಿ ಗ್ರಾಮಸ್ಥರು ವಾಹನ ತಪಾಸಣೆ ನಡೆಸುತ್ತಿದ್ದಂತೆ ಕೆಲವು ಭಕ್ತರು ಸ್ಥಳೀಯರೊಂದಿಗೆ ವಾಗ್ವಾದಕ್ಕೀಳಿದರು.ಇದ್ಯಾವುದಕ್ಕೆ ಬಗ್ಗದ ಸ್ಥಳೀಯರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರು.ವಾಹನದಲ್ಲಿ ಅಡುಗೆ ವಸ್ತುಗಳು,ಕೋಳಿ,ಕುರಿ ಇದ್ದರೆ ಅವುಗಳನ್ನು ಸ್ಥಳೀಯರು ವಶಕ್ಕೆ ಪಡೆದುಕೊಂಡರು.ದೇಗುಲಕ್ಕೆ ತೆರಳಿ ಪೂಜೆ ಮುಗಿಸಿಬಂದ ಬಳಿಕ ಕೋಳಿ-ಕುರಿ,ಅಡುಗೆ ವಸ್ತುಗಳನ್ನು ಕೊಟ್ಟು ಕಳಿಸಿದರು.ಅರಣ್ಯದಲ್ಲಿ ಅಡುಗೆ ಮಾಡುವುದಕ್ಕೆ ಬಿಡದೇ ಹಿಂದಕ್ಕೆ ಕಳುಹಿಸಿದರು.ಗ್ರಾಮಸ್ಥರು ತಪಾಸಣೆ ನಡೆಸುತ್ತಿದ್ದಂತೆ ಮಾಳೂರು ಠಾಣೆ ಪೊಲೀಸರು ಕೂಡ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಜಗಳಕ್ಕಿಳಿಯುತ್ತಿದ್ದ ಪ್ರವಾಸಿಗರಿಗೆ-ಭಕ್ತರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದರು.