ಕೃಷಿ, ವಿದ್ಯುತ್ ಮುಂತಾದ ರೈತವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದ ಅಂಗವಾಗಿ ಸೆ.೨೭ರಂದು ಕರೆ ನೀಡಿರುವ ಭಾರತ್ ಬಂದ್‌ಗೆ ಜಿಲ್ಲಾ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ದೆಹಲಿಯಲ್ಲಿ ಕೃಷಿ ಕಾಯ್ದೆಗಳ ವಿರೋಧಿಸಿ ಕಳೆದ ೧೦ ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ತಿರುಗಿಯೂ ನೋಡುತ್ತಿಲ್ಲ. ಇದೊಂದು ಪ್ರಾಯೋಜಿತ ಕಾರ್ಯಕ್ರಮ ಎಂದು ರೈತರನ್ನೇ ಹಂಗಿಸುತ್ತಿದ್ದಾರೆ. ಈ ಕಾಯ್ದೆಗಳು ರೈತರ ಬದುಕನ್ನೇ ಕಸಿದುಕೊಂಡಿವೆ. ಇದನ್ನು ವಿರೋಧಿಸಿ ಸೆ.೨೭ರಂದು ಶಿವಮೊಗ್ಗದಲ್ಲಿ ಕೂಡ ಬಂದ್ ನಡೆಯಲಿದ್ದು, ಈ ಬಂದ್‌ಗೆ ಜಿಲ್ಲಾ ಕಾಂಗ್ರೆಸ್ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಿದೆ. ರೈತರು ನಡೆಸುವ ಪ್ರತಿಭಟನೆ ಮೆರವಣಿಗೆಗೆ ಕಾಂಗ್ರೆಸ್‌ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.
ಗೃಹಮಂತ್ರಿಯಾಗಿ ಆರಗ ಜ್ಞಾನೇಂದ್ರ ಅವರು ಸಂಪೂರ್ಣ ವಿಫಲವಾಗಿದ್ದಾರೆ. ಅವರ ಜಿಲ್ಲೆಯಲ್ಲಿಯೇ ಕೊಲೆ, ಸುಲಿಗೆ, ದರೋಡೆ, ಗಾಂಜಾ ಸೇವನೆ, ಸರಗಳ್ಳತನ ಮುಂತಾದ ಅಪರಾಧ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಅವರೇನೋ ನಾಲ್ಕು ಸಲ ಗೆದ್ದು ಒಳ್ಳೆಯ ಶಾಸಕರೇ ಆಗಿದ್ದಾರೆ. ಆದರೆ, ಈಗ ಗೃಹಮಂತ್ರಿಯಾಗಿ ಇದೆಲ್ಲವನ್ನೂ ನಿಭಾಯಿಸುವ ಶಕ್ತಿ ಅವರಿಗಿಲ್ಲವಾಗಿದೆ. ಶಿವಮೊಗ್ಗದ ಪೊಲೀಸರಂತೂ ಹೆಲ್ಮೆಟ್ ಧರಿಸದೇ ಇರುವವರನ್ನು ಹಿಡಿಯುವುದು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ ಎಂದು ದೂರಿದರು.
ಜಿಲ್ಲಾ ಮಂತ್ರಿಯಾಗಿ ಕೆ.ಎಸ್. ಈಶ್ವರಪ್ಪನವರು ಸಹ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಟೀಕಿಸುವುದು ಬಿಟ್ಟರೆ ಬೇರೆ ಏನೂ ಕೆಲಸವೂ ಅವರಿಗಿಲ್ಲ. ಶಿವಮೊಗ್ಗದಲ್ಲಿ ಎಲ್ಲ ಅವ್ಯವಸ್ಥೆಯ ತಾಣವಾಗಿದೆ. ಒಂದು ಗುಂಡಿಯನ್ನು ಮುಚ್ಚಲಾಗುತ್ತಿಲ್ಲ. ಇದೆಲ್ಲ ನೋಡಿದರೆ ಬಿಜೆಪಿಯನ್ನು ದೂರಮಾಡುವ ಕಾಲ ಸನ್ನಿಹಿತವಾಗುತ್ತಿದೆ ಎನ್ನುವುದು ಸ್ಪಷ್ಟವಾಗಿದೆ ಎಂದರು.
ತೀರ್ಥಹಳ್ಳಿ ಕ್ಷೇತ್ರದ ಆರ್.ಎಂ. ಮಂಜುನಾಥಗೌಡ ಮತ್ತು ಕಿಮ್ಮನೆ ರತ್ನಾಕರ್ ನಡುವಿನ ಭಿನ್ನಾಭಿಪ್ರಾಯ ವೈಮನಸ್ಸಿನ ಬಗ್ಗೆ ಏನೂ ಸ್ಪಷ್ಟ ಅಭಿಪ್ರಾಯ ಹೇಳದ ಅವರು, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಇದನ್ನು ಸರಿಮಾಡುತ್ತೇವೆ. ಇದೇನು ಅಂತಹ ಪ್ರಾಮುಖ್ಯದ ವಿಷಯವಲ್ಲ. ಎಲ್ಲ ಪಕ್ಷಗಳಲ್ಲೂ ಇದೆ. ಬಸವನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಯಡಿಯೂರಪ್ಪನವರಿಗೆ ಹೀಯಾಳಿಸಲಿಲ್ಲವೇ? ಈಗ ಇಬ್ಬರೂ ಒಂದಾಗಿಲ್ಲವೇ? ಹಾಗೆಯೇ ಎಲ್ಲ ಪಕ್ಷಗಳಲ್ಲು ಕೆಲವು ಆಂತರಿಕ ವಿಷಯಗಳು ಇದ್ದೇ ಇರುತ್ತವೆ. ಅವುಗಳನ್ನು ಸರಿಮಾಡಿಕೊಳ್ಳುತ್ತೇವೆ. ಜಿಲ್ಲಾಧ್ಯಕ್ಷನಾಗಿ ನಾನು ಇಬ್ಬರನ್ನೂ ಕರೆಯಿಸಿ ಮಾತನಾಡುತ್ತೇನೆ. ನಂತರ ಇದು ಹೈಕಮಾಂಡ್‌ಗೆ ಬಿಟ್ಟ ವಿಷಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯಮುನಾರಂಗೇಗೌಡ, ರೇಖಾರಂಗನಾಥ್, ಮೆಹಕ್ ಷರೀಫ್, ಸಿ.ಎಸ್. ಚಂದ್ರಭೂಪಾಲ್, ಸೌಗಂಧಿಕಾ ರಘುನಾಥ್, ಮಾರ್ಟಿಸ್, ಚಂದನ್, ಎನ್.ಡಿ. ಪ್ರವೀಣ್, ಸೈಯದ್ ವಾಹೀದ್ ಅಡ್ಡು ಉಪಸ್ಥಿತರಿದ್ದರು.