ಹುಣಸೋಡು ಸ್ಫೋಟದ ತನಿಖೆ ಇನ್ನೂ ಪೂರ್ಣಗೊಳ್ಳುವ ಮುನ್ನವೇ ಶಿವಮೊಗ್ಗ ನಗರದಲ್ಲಿ ಸ್ಫೋಟಕ ಹೊತ್ತ ವಾಹನಗಳು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಸಂಚರಿಸುತ್ತಿರುವುದು ಆತಂಕ ಮೂಡಿಸಿದೆ.
ಶಿವಮೊಗ್ಗ ನಗರದ ಹೊರವಲಯದಲ್ಲಿ ಶೈನ್ ಹೋಟೆಲ್ ಬಳಿ ಶನಿವಾರ ನಿಂತಿದ್ದ ಲಾರಿಯೊಂದು ಇದಕ್ಕೆ ಸಾಕ್ಷಿಯಾಗಿತ್ತು. ಸುಮಾರು 10ಟನ್ ಸ್ಫೋಟಕ ಸಾಮಗ್ರಿ ತುಂಬಿದ್ದ ಲಾರಿ ಟೈರ್ ಪಂಕ್ಚರ್ ಆಗಿದ್ದು, ದುರಸ್ತಿಗಾಗಿ ಹಗಲಿಡೀ ಲಾರಿ ನಿಂತಿತ್ತು. ಆದರೆ ಪಂಕ್ಚರ್ ಹಾಕುವ ಹುಡುಗರಿಗೆ ಆ ಲಾರಿಯಲ್ಲಿ ಸ್ಫೋಟಕ ತುಂಬಿರುವುದು ಗೊತ್ತಿರಲಿಲ್ಲ. ಉಡುಪಿ ಜಿಲ್ಲೆ ಹೆಬ್ರಿಯಿಂದ ಸ್ಫೋಟಕ ತುಂಬಿಕೊಂಡು ಬಂದಿದ್ದ ಲಾರಿಯು ಪಂಕ್ಚರ್ ಹಾಕಿಸಲು ನಿಂತಿತ್ತು. ಸ್ಫೋಟಕ ಸಾಗಿಸುವ ಲಾರಿ ಜನನಿಬಿಡ ಪ್ರದೇಶದಲ್ಲಿ ನಿಲ್ಲಬಾರದೆಂಬ ನಿಯಮ ಇದೆ. ಸಾಗಿಸುವಾಗಲೇ ಸುರಕ್ಷತಾ ಕ್ರಮ ಅನುಸರಿಸಬೇಕು ಮತ್ತು ತಕ್ಕ ಎಸ್ಕಾರ್ಟ್ ಇರಬೇಕು. ಆದರೆ ಇದ್ಯಾವ ನಿಯಮಗಳನ್ನು ಪಾಲಿಸಲಾಗಿಲ್ಲ ಎಂಬ ದೂರು ಪೊಲೀಸರಿಗೆ ಹೋಗಿದೆ.
ಮಾಮೂಲಿ ಪ್ರಕ್ರಿಯೆ:
ಹುಣಸೋಡು ಪ್ರಕರಣದಲ್ಲಿ ಭಾರೀ ಅನಾಹುತ ಆಗಿದ್ದು, ಆರು ಮಂದಿ ಜೀವ ಕಳೆದುಕೊಂಡಿದ್ದರು. ಸ್ಥಳದಲ್ಲಿದ್ದರೆನ್ನಲಾದ ಇನ್ನಿಬ್ಬರು ವ್ಯಕ್ತಿಗಳ ಸುಳಿವೇ ಇಲ್ಲ ಎನ್ನಲಾಗಿದೆ. ಈ ಪ್ರಕರಣದ ತನಿಖೆಯೂ ಮುಂದುವರಿದಿದೆ. ದೇಶವ್ಯಾಪಿ ಸುದ್ದಿಯಾಗಿ ಪ್ರಧಾನಿಯವರ ಗಮನ ಸೆಳೆದ ಈ ಪ್ರಕರಣ ನಡೆದ ಮೇಲೂ ಮಲೆನಾಡಿನಲ್ಲಿ ಸ್ಫೋಟಕ ಸಾಮಗ್ರಿ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಆಡಳಿತ ನಡೆಸುವ ಶಾಸಕರು ಮತ್ತು ಸಚಿವರುಗಳು ಸ್ಥಗಿತಗೊಂಡ ಕಲ್ಲುಗಣಿ ಆರಂಭಿಸಬೇಕೆಂಬ ಲಾಬಿ ಮಾಡುತ್ತಿದ್ದಾರೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಲೇ ಇವೆ. ಪ್ರತಿದಿನ ಶಿವಮೊಗ್ಗದ ನಗರದೊಳಗೆ ೨ ರಿಂದ ೩ ಲಾರಿಗಳು ಬ್ಲಾಸ್ಟಿಗ್ ಮೆಟಿರಿಯಲ್‌ಗಳನ್ನ ಸಾಗಿಸುತ್ತವೆ ಎಂಬ ಮಾಹಿತಿ ಇದೆ. ಇದರ ಭಾಗವಾಗಿಯೇ ಸ್ಫೋಟಕ ತುಂಬಿದ ಲಾರಿ ನಗರದಲ್ಲಿ ನಿಂತಿತ್ತು. ಸ್ಫೋಟಕ ವಿಚಾರ ತಿಳಿಯುತ್ತಲೇ ಪಂಕ್ಷರ್ ಹಾಕುತ್ತಿದ್ದ ಹುಡುಗರು ಕೂಡ ಹೆದರಿ ದೂರ ಸರಿದಿದ್ದಾರೆ. ಲಾರಿಯಲ್ಲಿ ಕಾನೂನು ಬದ್ದ ಬಿಲ್ ಗಳಿದ್ದರೂ, ಡ್ರೈವರ್ ಬಳಿ ಸ್ಫೋಟಕ ವಾಹನ ಚಲಾಯಿಸುವ ಲೈಸೆನ್ಲ್ ಇರಲಿಲ್ಲ. ಪೊಲೀಸರಿಗೂ ಸ್ಫೋಟಕ ಸಾಗಾಟದ ಬಗ್ಗೆ ಮಾಹಿತಿಯಿರಲಿಲ್ಲ ಎನ್ನುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ನೆರೆ ಜಿಲ್ಲೆಗಳಿಗೂ ಸಾಗಾಟ:
ಉಡುಪಿ ಜಿಲ್ಲೆ ಹೆಬ್ರಿ ಸಮೀಪದ ಬೆಲ್ ಟೆಕ್ ಕಂಪನಿಯಿಂದ ಸ್ಫೋಟಕಗಳನ್ನು ಹೊತ್ತ ಲಾರಿಗಳು ಪ್ರತಿದಿನ ತೀರ್ಥಹಳ್ಳಿ ಮೂಲಕ ಶಿವಮೊಗ್ಗ ಬೈಪಾಸ್ ರಸ್ತೆ ಮಾರ್ಗವಾಗಿ ಹೊಳೆಹೊನ್ನೂರು, ಚಿತ್ರದುರ್ಗ, ದಾವಣಗೆರೆಯ ಕ್ವಾರಿಗಳಿಗೆ ಪೂರೈಕೆಯಾಗುತ್ತಿದೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಡಿವೈಎಸ್ಪಿ ಸ್ಥಳಕ್ಕೆ ಭೇಟಿ, ತನಿಖಾ ತಂಡ ರಚನೆ
ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಸ್ಥಳಕ್ಕೆ ಭೇಟಿ ಲಾರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ ಸಾಗಣೆ ಬಗ್ಗೆ ತನಿಖೆ ನಡೆಸಲು ತನಿಖಾ ತಂಡವನ್ನು ಎಸ್ಪಿ ಲಕ್ಷ್ಮಿ ಪ್ರಸಾದ್ ತನಿಖಾ ತಂಡ ರಚಿಸಿ ಮಾಹಿತಿ ಕಲೆಹಾಕುವಂತೆ ಸೂಚಿಸಿದ್ದಾರೆ.