ಪಕ್ಷ ಸೇರಿದ ೫ ತಿಂಗಳಲ್ಲೇ ಪಕ್ಷ ವಿರೋಧಿ ಚಟುವಟಿಕೆ:ಆರ್.ಎಂ.ಎಂ ವಿರುದ್ದ ಕಿಮ್ಮನೆ ಗರಂ
ಕಾಂಗ್ರೆಸ್ ಪಕ್ಷ ಸೇರಿದ ಮರು ದಿನದಿಂದಲೇ ಗುಂಪುಗಾರಿಕೆ ನಡೆಸುತ್ತಿರುವ ಮಂಜುನಾಥಗೌಡ ಅವರನ್ನು ಪಕ್ಷದಿಂದ ಹೊರ ಹಾಕುವುದು ಜಿಲ್ಲಾ ರಾಜ್ಯ ಘಟಕಕ್ಕೆ ಅನಿವಾರ್ಯವಾಗಬಹುದು ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಘಟಕವನ್ನು ಕಡೆಗಣಿಸಿ ಪಕ್ಷದ ಮುಖಂಡರ ಪೋಟೊ ಬಳಸಿ ಖಾಸಗಿ ಆಗಿ ಕಾರ್ಯಕ್ರಮ, ಪಾದಯಾತ್ರೆ ಚಳವಳಿ ಹಮ್ಮಿಕೊಂಡು ಭಾಗವಹಿಸಿ ಎಂದು ಕಾಂಗ್ರೆಸಿಗರನ್ನು ಆಹ್ವಾನಿಸುತ್ತಿರುವ ಮಂಜುನಾಥಗೌಡ ಅವರ ವರ್ತನೆ ಪಕ್ಷ ವಿರೋಧಿ ಚಟುವಟಿಕೆ ಎಂದು ಭಾವಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಹಣ, ಹೆಂಡ, ಬಿರಿಯಾನಿ ಮೂಲಕ ತೀರ್ಥಹಳ್ಳಿ ಕೇತ್ರದಲ್ಲಿ, ಜನಮನ್ನಣೆಪಡೆಯಬಹುದು ಎಂದು ಭಾವಿಸಿದ್ದರೆ ಅದಕ್ಕೆ ಕೇತ್ರದಲ್ಲಿ ಮನ್ನಣೆ ಸಿಗಲು ಸಾಧ್ಯವಿಲ್ಲ. ಪಕ್ಷದಲ್ಲಿದ್ದು ಪಕ್ಷದ ಘಟಕಗಳನ್ನು ದೂರ ಮಾಡಿ ಹೋರಾಟದ ಹೆಸರಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಮಂಜುನಾಥಗೌಡ ತೊಡಗಿದ್ದಾರೆ ಎಂದು ಕಿಮ್ಮನೆ ದೂರಿದ್ದಾರೆ.
ಶರಾವತಿ ಸಂತ್ರಸ್ತರು, ಬಗರ್‌ಹುಕುಂ ಸಾಗುವಳಿ ರೈತರಿಗೆ ನ್ಯಾಯ ಕೊಡಿಸಲು, ಕಾಂಗ್ರೆಸ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನಾವುಗಳು ಹೋರಾಟ ಮಾಡಿದ್ದೇವೆ. ಸಮಸ್ಯೆ ಎದುರಿಸುತ್ತಿರುವ ಜನಪರ ಮಂಜುನಾಥಗೌಡ ೩೫ ವರ್ಷದಿಂದ ಹೋರಾಟ ಮಾಡಿಲ್ಲ.ಈಗ ಹೋರಾಟ ಮಾಡುತ್ತಿರುವ ಹಿಂದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಎಂಬುದುಎಲ್ಲರಿಗೂ ಅರ್ಥವಾಗುವಂತಹ ವಿಷಯವಾಗಿದೆ ಎಂದು ಕಿಮ್ಮನೆ ತಿಳಿಸಿದ್ದಾರೆ.
ಜಿಲ್ಲಾ ,ತಾಲೂಕು, ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಪಕ್ಷದಲ್ಲಿ ಅನೇಕರಿದ್ದಾರೆ. ಜತೆಗೆ ಬರದಿದ್ದರೆ ಟಿಕೆಟ್ ಸಿಗದಂತೆ ಮಾಡುತ್ತೇನೆ ಎಂದು ಬೆದರಿಸುವ ನಿಮ್ಮ ಕುರಿತು ಪಕ್ಷದ ಮುಖಂಡರು ನನ್ನ ಬಳಿ ದೂರಿದ್ದಾರೆ. ನಿಮ್ಮ ಇಂತಹ ಸ್ವಭಾವವನ್ನು ಅನೇಕ ವರ್ಷಗಳಿಂದ ಕಂಡಿದ್ದೇನೆ ಎಂದು ಕಿಮ್ಮನೆ ಟೀಕಿಸಿದ್ದಾರೆ.