ಶಾಸಕ ಹಾಗೂ ನಟ ಕುಮಾರ್ ಬಂಗಾರಪ್ಪ ಅವರು ಮಂಗಳವಾರ ತಮ್ಮ ೫೮ನೇ ಹುಟ್ಟು ಹಬ್ಬ ಆಚರಿಸಿಕೊಂಡರು. ಕೊರೊನ ಹಿನ್ನೆಲೆಯಲ್ಲಿ ಸರಳವಾಗಿ ಕುಟುಂಬ ಸದಸ್ಯರೊಂದಿಗೆ ಜನ್ಮದಿನ ಆಚರಣೆಗೆ ನಿರ್ಧರಿಸಿತ್ತಾದರೂ, ಬೆಂಬಲಿಗರು ಹಾಗೂ ಅಭಿಮಾನಿಗಳು ಮನೆಗೆ ಬಂದು ತಮ್ಮ ನಾಯಕನಿಗೆ ಜನ್ಮದಿನದ ಶುಭಾಶಯ ಕೋರಿದರು. ಸ್ವಕ್ಷೇತ್ರ ಸೊರಬದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ರೋಗಿಗಳು ಹಣ್ಣು ಹಂಪಲು ವಿತರಿಸಿದರು. ಸೊರಬ ರಂಗನಾಥ ಸ್ವಾಮಿ ದೇಗುಲ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಶಾಸಕರಿಗೆ ಆಯುರಾರೋಗ್ಯ ಕರುಣಿಸೆಂದು ದೇವರಲ್ಲಿ ಪ್ರಾರ್ಥಿಸಿದರು.
ಕುಮಾರ್ ಬಂಗಾರಪ್ಪ ಅವರು ಪತ್ನಿ ವಿದ್ಯುಲ್ಲತಾ, ಪುತ್ರ ಅರ್ಜುನ್ ಬಂಗಾರಪ್ಪ, ಮಗಳು ಲಾವಣ್ಯ ಹಾಗೂ ಬಂಧುಗಳೊಂದಿಗೆ ಕೇಕ್ ಕತ್ತರಿಸಿದರು. ಈ ಸಂದರ್ಭ ರಾಜ್ಯ ಆರ್ಯಈಡಿಗ ಸಂಘದ ರಾಜ್ಯಾಧ್ಯಕ್ಷ ಡಾ.ತಿಮ್ಮೇಗೌಡ ಮತ್ತಿತರರು ಹಾಜರಿದ್ದರು. ಶಾಸಕರು ಹಾಗೂ ಸಚಿವರು ಕುಮಾರ್ ಬಂಗಾರಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. ಸೊರಬದಿಂದಲೂ ಬೆಂಬಲಿಗರು ಹಾಗೂ ಅಭಿಮಾನಿಗಳು ಬೆಂಗಳೂರಿಗೆ ತೆರಳಿ ಶಾಸಕರಿಗೆ ಶುಭಹಾರೈಸಿದರು.