ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ಎದುರಿಸಲು ಹಲವು ಹೋರಾಟಗಳನ್ನು ಹಮ್ಮಿಕೊಳ್ಳುತ್ತಿದ್ದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಸ್ವಪಕ್ಷೀಯರಲ್ಲಿಯೇ ಒಬ್ಬರ ವಿರುದ್ಧ ಒಬ್ಬರು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ತೀರ್ಥಹಳ್ಳಿ ಕಾಂಗ್ರೆಸ್’ನಲ್ಲಿ ಒಳಗುದಿಯನ್ನು ಬಹಿರಂಗ ಪಡಿಸಿದ್ದಾರೆ. ಸಾಲದೆಂಬಂತೆ ಅಲೆಮಾರಿಗಳನ್ನು ಪಕ್ಷಕ್ಕೆ ತಂದು ನನ್ನನ್ನು ಮಣಿಸುವ ಕನಸಿದ್ದರೆ ಇಂದೇ ಕೈಬಿಡಿ ಎಂದು ಕಾಂಗ್ರೆಸ್ ಪಕ್ಷದ ನಾಯಕರಿಗೇ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಇತ್ತೀಚೆಗಷ್ಟೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡರ ವಿರುದ್ಧ ಪರೋಕ್ಷವಾಗಿ ಹರಿ ಹಾಯ್ದಿರುವ ಕಿಮ್ಮನೆ ಅವರು, ಅವರಿಗೆ ಬೆಂಬಲವಾಗಿರುವ ಪಕ್ಷದ ಸ್ಥಳೀಯ ಹಾಗೂ ರಾಜ್ಯ ಮುಖಂಡರ ಮೇಲೂ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಶಿವಮೊಗ್ಗದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಭೆಯಲ್ಲಿ ಗುರುವಾರ ಮಾತನಾಡಿದ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳಸುವ ಕೆಲಸ ಮಾಡಿದ್ದೇನೆ. ರಾಜಕೀಯ ಅಲೆಮಾರಿಗಳನ್ನು ಕರೆತಂದು ನನ್ನನ್ನು ಮುಗಿಸುತ್ತೇನೆ ಎಂದು ಯಾರಾದರೂ ಭಾವಿಸಿದ್ದರೆ ಅದನ್ನು ಇವತ್ತೇ ಮರೆತುಬಿಡಿ. ನನಗೆ ಹಣ, ಅಧಿಕಾರ ಬೇಕಾಗಿಲ್ಲ. ಎಲ್ಲವನ್ನು ಕಳೆದುಕೊಳ್ಳಲು ಸಿದ್ಧವಾಗಿದ್ದೇನೆ. ಹತ್ತು ಕಾರು, ಹತ್ತು ಸಂಸಾರ, ಹತ್ತು ಮನೆ ಕಟ್ಟಿಕೊಳ್ಳಬೇಕು ಅನ್ನುವ ಯಾವುದೆ ಆಸೆ ನನಗಿಲ್ಲ. ಎಲ್ಲವನ್ನು ಕಳೆದುಕೊಳ್ಳಲು ಸಿದ್ಧವಾಗಿರುವ ಮನುಷ್ಯ ನಾನು. ಹಣ ಮತ್ತು ಅಧಿಕಾರಕ್ಕಾಗಿ ಬರುವವನು ನಾನಲ್ಲ. ನನ್ನನ್ನು ಮೆಟ್ಟಿ ಅಂತಹವರನ್ನು ಗೆಲ್ಲಿಸುವ ಯೋಚನೆ ಇದ್ದರೆ ಮರೆತುಬಿಡಿ ಎಂದು ಪಕ್ಷದ ಮುಖಂಡರನ್ನೇ ಕುಟುಕಿದರು.
ಮಂಜುನಾಥಗೌಡರನ್ನು ಪರೋಕ್ಷವಾಗಿ ಉಲ್ಲೇಖಿಸಿದ ಕಿಮ್ಮನೆ, ಅವರು ಅಧಿಕಾರಕ್ಕಾಗಿ ಊರೆಲ್ಲ ತಿರುಗುತ್ತಾರೆ. ಅಷ್ಟು ಅಲೆಮಾರಿಗಳವರು. ಅಂತಹವರನ್ನು ಪಕ್ಷಕ್ಕೆ ಕರೆತಂದು ನಮಗೇಕೆ ಹಿಂಸೆ ಕೊಡುತ್ತೀರ? ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿದ್ಯಾಕೆ? ನನ್ನನ್ನು ಸೋಲಿಸಲು ಹೋಗಿದ್ದರಾ? ಜೆಡಿಎಸ್ ಪಕ್ಷಕ್ಕೆ ಹೋಗಲು ಕಾರಣವೇನು? ಪಕ್ಷದ ಸಿದ್ಧಾಂತ ಸರಿ ಇರಲಿಲ್ಲವಾ? ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾಗಾಂಧಿ ಸರಿ ಇರಲಿಲ್ಲವಾ? ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸರಿ ಇರಲಿಲ್ಲವಾ? ಯಾರು ಸರಿ ಇರಲಿಲ್ಲ ಎಂದು ಪ್ರಶ್ನಿಸಿದರು.
ಕೆಜೆಪಿ ಸುದ್ದಿ ಇದೆ.
ರಾಜ್ಯದಲ್ಲಿ ಮತ್ತೆ ಕೆಜೆಪಿ ಪುನರ್ ಸ್ಥಾಪನೆ ಆಗ್ತಾ ಇದೆ ಎಂಬ ಸುದ್ದಿ ಇದೆ. ಜೆಡಿಎಸ್ ಜೊತೆ ಸೇರಿಕೊಂಡು ಹೊಸದಾಗಿ ಸಿದ್ಧವಾಗುತ್ತಿದೆ. ನಾನು ಇವರನ್ನು ಇಲ್ಲಿ ಕರೆದುಕೊಂಡು ಊರೆಲ್ಲ ತಿರುಗಾಡುತ್ತೇನೆ. ಆಮೇಲೆ ಇವರು ಅಲ್ಲಿಗೆ ಹೋದರೆ ನಾನೇನು ಮಾಡಲಿ?. ಬಂಗಾರಪ್ಪನವರು ನನ್ನ ನಾಯಕರು ಎಂದು ಹೋದರು. ಕುಮಾರಸ್ವಾಮಿ ನನ್ನ ನಾಯಕರು ಎಂದು ಹೋದರು. ಯಾರೆಲ್ಲ ಮುಖ್ಯಮಂತ್ರಿಯಾದರೋ ಅವರೆಲ್ಲರನ್ನು ನಾಯಕರೆಂದರು ಎಂದು ಕಿಮ್ಮನೆ ಹೇಳಿದರು.
ಕ್ಯಾನ್ವಾಸ್‌ಗೆ ಬರುವುದಿಲ್ಲ
ಯಾವ ಪಕ್ಷಕ್ಕೆ ಹೋದರೂ ನಾನು ಹಣ ಕೊಟ್ಟಿದ್ದೇನೆ ಅಂತಾರೆ. ಒಂದು ದಿನ ಕ್ಯಾನ್ವಾಸ್‌ಗೆ ಬರುವುದಿಲ್ಲ. ಚುನಾವಣೆಗೆ ಒಂದು ವರ್ಷ ಇರುವಾಗ ಪಕ್ಷಕ್ಕೆ ಬಂದರೆ ಪಾರ್ಟಿ ಕಟ್ಟುವುದು ಹೇಗೆ. ಪಾರ್ಟಿ ಕಟ್ಟುವವರು ರಾತ್ರಿ ಹಗಲು ಕೆಲಸ ಮಾಡುತ್ತೇವೆ. ಸಾಲ ಮಾಡಿ ಜನರಿಗೆ ದುಡ್ಡು ಕೊಟ್ಟಿದ್ದೇವೆ. ನನ್ನ ಮನೆ ಮಾರಿ ಸಾಲ ಕಟ್ಟಿದ್ದೇನೆ. ಈ ರಾಜಕೀಯ ಅಲೆಮಾರಿಗಳು ಬಂದು ನನ್ನೆ ಸೋಲಿಸುತ್ತೇನೆ ಎಂದು ಯೋಚನೆ ಮಾಡಿದ್ದಾರೆ. ಈ ಪ್ರಪಂಚದ ಯಾವ ಶಕ್ತಿಯು ನನ್ನನ್ನು ಕೊಂಡುಕೊಳ್ಳಲು ಆಗುವುದಿಲ್ಲ. ರಾಜಕೀಯ ಅಲೆಮಾರಿಗಳಿಗೆ ನೀವು ಸಪೋರ್ಟ್ ಮಾಡುವುದಾದರೆ ನಾನು ಸುಮ್ಮನಿರಲು ಆಗುವುದಿಲ್ಲ. ನಾನು ಈ ಸಭೆಗೆ ಬರುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆಅಲೆಮಾರಿಗಳು ಬರ್‍ತಾರೆ ಅನ್ನೋದು ಗೊತ್ತಾಯ್ತು. ಅದಕ್ಕೆ ಬಂದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ವಿಭಾಗದ ರಾಜ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ, ರಾಜ್ಯಸಂಚಾಲಕರು ವಿಜಯಸಿಂಗ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೇರಿದಂತೆ ಹಲವರು ಇದ್ದರು.
ಸಭೆಯಿಂದ ಹೊರ ಹೋದ್ರು
ಸಭೆಯಲ್ಲಿ ಕಿಮ್ಮನೆ ಅವರು ಮಾತನಾಡುವಾಗ ಮಂಜುನಾಥ ಗೌಡ ಅವರ ಬೆಂಬಲಿಗರೆನ್ನಲಾದ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ತೀರ್ಥಹಳ್ಳಿ ಕ್ಷೇತ್ರಕ್ಕೆ ಸೀಮಿತವಾದ ಸಮಸ್ಯೆಯನ್ನು ಹಿರಿಯರಾದ ಕಿಮ್ಮನೆಯವರು ಸಾರ್ವತ್ರಿಕಗೊಳಿಸಬರದು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಬೆಳವಣಿಗೆಯಿಂದ ಬೇಸತ್ತ ಕಿಮ್ಮನೆ ಅವರು ತಮ್ಮ ಭಾಷಣ ಮುಗಿದ ಮೇಲೆ ಸಭಾಂಗಣದಿಂದ ನಿರ್ಗಮಿಸಿದರು.
ಇತ್ತೀಚೆಗೆ ನಡೆಸಿದ್ದ ಪಾದಯಾತ್ರೆಗೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಅವರನ್ನು ಕರೆದಿದ್ದಾರೆ. ನಮ್ಮ ಪಕ್ಷದ ಕೆ.ಬಿ.ಪ್ರಸನ್ನಕುಮಾರ್ ಅವರ ಎದುರಾಳಿ ಶ್ರೀಕಾಂತ್. ಅವರೊಂದಿಗೆ ಕಾಂಗ್ರೆಸ್ ಮುಖಂಡರು ಹೋರಾಟ ರೂಪಿಸುವುದಾದರೆ ಅದನ್ನು ಪಕ್ಷ ಪ್ರಶ್ನೆ ಮಾಡಬೇಕು ಮತ್ತು ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೆ ಎಲ್ಲಾ ಸಭೆಯಲ್ಲೂ ನಾನು ಪ್ರತಿಭಟಿಸುವೆ. ಕಾಂಗ್ರೆಸ್ ಮುಖಂಡನಾಗಿ ನಾನೊಂದು ಕಾರ್ಯಕ್ರಮ ಮಾಡಿ ಎಚ್.ಡಿ.ರೇವಣ್ಣರ ಮಗನನ್ನು ಕರಿತೇನೆ ನೀವೆಲ್ಲ ಬರ್ತೀರಾ – ಕಿಮ್ಮನೆ ರತ್ನಾಕರ್