ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಆದರೆ, ಕಾಮಗಾರಿ ಗುಣಮಟ್ಟದಿಂದ ಕೂಡಿರದೇ ಸಂಪುರ್ಣ ಕಳಪೆಯಾಗಿದೆ. ಕಾಮಗಾರಿಯನ್ನು ಪರಿಶೀಲಿಸಬೇಕಾದ ಟೆಕ್ನಿಕಲ್ ಇಂಜಿನೀಯರ್ ಗಳು ಇಲ್ಲ. ಸ್ಮಾರ್ಟ್ ಸಿಟಿಗೆ ಸಂಬಂಧಪಟ್ಟವರೆಲ್ಲ ಹೊರ ಜಿಲ್ಲೆಯವರೇ ಆಗಿದ್ದಾರೆ. ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದಲ್ಲದೇ, ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಜಿಲ್ಲಾಮಂತ್ರಿಗಳು ಕಂಡೂ ಕಾಣದಂತೆ ಕುಳಿತಿದ್ದಾರೆ ಎಂದು ದೂರಿದರು.
ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ ಎನ್ನುವಂತೆ ನಿನ್ನೆ ದಿನ ಪಾಲಿಕೆಯ ಕಂದಾಯ ವಿಭಾಗದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ವಿರೋಧ ಪಕ್ಷದ ನಾಯಕರ ಮಾತನ್ನು ಸಹ ಪರಿಗಣಿಸದೇ ಇಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಾರೆ. ಪಾಲಿಕೆಯ ಮೇಯರ್ ಅವರಿಗೆ ಕೆಲಸ ಮಾಡಬೇಕೆಂಬ ಆಸಕ್ತಿ ಇದ್ದರೂ, ಆಯುಕ್ತರು ಮತ್ತು ಅಧಿಕಾರಿಗಳ ಬೇಜವ್ದ್ದಾರಿಗಳಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ. ಪಾಲಿಕೆಗೆ ಐಎಎಸ್ ಅಧಿಕಾರಿ ಬೇಕಾಗಿದ್ದು, ಈ ಕೂಡಲೇ ಈಗಿನ ಆಯುಕ್ತರನ್ನು ಬದಲಾವಣೆ ಮಾಡಿ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಉತ್ತರ ಪ್ರದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಾರು ಹರಿಸಿ ರೈತರ ಸಾವಿಗೆ ಕಾರಣರಾದ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ರಾಜಿನಾಮೆ ಪಡೆಯಬೇಕು ಹಾಗೂ ಅವರ ಮಗನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಚಂದ್ರಭೂಪಾಲ್, ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ರೇಖಾ ರಂಗನಾಥ್, ಮೆಹಖ್ ಷರೀಫ್ ಇನ್ನಿತರರಿದ್ದರು.